ನ್ಯೂಜೆರ್ಸಿ, ಜು.20: ಇಲ್ಲಿನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯರಾತ್ರಿ(ಭಾರತೀಯ ಕಾಲಮಾನ) ನಡೆದ ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಸ್ಪೇನ್ ವಿರುದ್ಧ 0-1 ಅಂತರದ ಹೃದಯವಿದ್ರಾವಕ ಸೋಲನ್ನು ಅನುಭವಿಸಿತು. ಹೆಚ್ಚುವರಿ ಸಮಯದ 106 ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಗೋಲಿನಿಂದ ಸ್ಫೇನ್‌ಗೆ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಟ್ಟರು. ಆದರೆ ಸೋಲಿನ ಆಘಾತದಲ್ಲಿ ಅರ್ಜೆಂಟೀನಾನದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೆಡೆಸ್ ತಾಳ್ಮೆ ಕಳೆದುಕೊಂಡು ಸ್ಪೇನ್ ತಾರೆ ಗವಿ ಮೇಲೆ ಹಲ್ಲೆ ನಡೆಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಅರ್ಜೆಂಟೀನಾ ಸೋಲಿನ ನಂತರ ಹತಾಶೆಯಿಂದ ಪರೆಡೆಸ್ ಸ್ಪ್ಯಾನಿಷ್ ಮಿಡ್‌ಫೀಲ್ಡರ್ ಗವಿಯನ್ನು ಕುತ್ತಿಗೆ ಹಿಡಿದು ನೆಲಕ್ಕೆ ತಳ್ಳುವ ಪಯತ್ನ ಮಾಡಿದರು. ಈ ವೇಳೆ ಅರ್ಜೆಂಟೀನಾ ತಂಡದ ಕೋಚ್ ಲಿಯೋನೆಲ್ ಸ್ಕಾಲೋನಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ಉಭಯ ತಂಡಗಳ ಕೆಲ ಆಟಗಾರರು ಕೈ-ಕೈ ಮಿಲಾಯಿಸುವ ಹಂತಕ್ಕೆ ಮುಂದಾದರು. ತಕ್ಷಣ ಪಂದ್ಯದ ಭದ್ರತಾ ಸಿಬ್ಬಂದಿಗಳು ಮೈದಾನಕ್ಕೆ ಬಂದು ಪರಿಸ್ಥಿತಿಯನನು ತಿಳಿಗೊಳಿಸಿದರು. ಈ ಫಟನೆಯ ಹಲವು ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ವೈರಲ್ ಆಗಿವೆ.
ರೆಫರಿ ತಕ್ಷಣ ಮಧ್ಯಪ್ರವೇಶಿಸಿ ಪ್ಯಾರೆಡೆಸ್‌ಗೆ ಅವರ ಕೃತ್ಯಕ್ಕಾಗಿ ಕೆಂಪು ಕಾರ್ಡ್ ತೋರಿಸಿದರು, ಇದು ಅರ್ಜೆಂಟೀನಾದ ಅಭಿಯಾನಕ್ಕೆ ನಿರಾಶಾದಾಯಕ ಅಂತ್ಯವನ್ನು ತಂದುಕೊಟ್ಟಿತು. 2026 ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಹೊರಬಿದ್ದ ಎರಡನೇ ಅರ್ಜೆಂಟೀನಾ ಆಟಗಾರ ಪರೆಡೆಸ್. ಇದಕ್ಕೂ ಮೊದಲು, ಸ್ಪೇನ್ ಡಿಫೆಂಡರ್ ಪೌ ಕ್ಯೂಬಾರ್ಸಿ ಅವರ ಮೇಲೆ ಫೌಲ್ ಮಾಡಿದ್ದಕ್ಕಾಗಿ ಎರಡನೇ ಹಳದಿ ಕಾರ್ಡ್ ಪಡೆದ ನಂತರ, ಮಿಡ್‌ಫೀಲ್ಡರ್ ಎಂಜೊ ಫೆರ್ನಾಂಡಿಸ್ 90+3 ನೇ ನಿಮಿಷದಲ್ಲಿ ಪಂದ್ಯದಿಂದ ಹೊರಗುಳಿಯಬೇಕಾಯಿತು.
ಹೀಗಾಗಿ ಹೆಚ್ಚುವರಿ ಸಮಯದ ಸಂಪೂರ್ಣ ಸಮಯವನ್ನು ಅರ್ಜೇಂಟೀನಾ 10 ಆಟಗಾರರದೊಂದಿಗೆ ಆಡಬೇಕಾಯಿತು. ಅಂತಿಮವಾಗಿ ಸ್ಪೇನ್ ತನ್ನ ಸಂಖ್ಯಾತ್ಮಕ ಅನುಕೂಲವನ್ನು ಸಾಧಿಸಿತು. ಫೆರಾನ್ ಟೊರೆಸ್ 106 ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಗಳಿಸಿ ತಂಡಕ್ಕೆ 1-0 ಅಂತರದ ಜಯ ತಂದುಕೊಟ್ಟರು.
ಫೈನಲ್ ಸೋಲಿನ ಆಘಾತದಿಂದ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ
ಈ ಸೋಲು ಅರ್ಜೆಂಟೀನಾದ ಫಿಫಾ ವಿಶ್ವಕಪ್ 2026 ಅಭಿಯಾನದಲ್ಲಿ ಮೊದಲ ಮತ್ತು ಏಕೈಕ ಸೋಲಾಗಿದೆ, ಮತ್ತು ಅಂತಿಮವಾಗಿ ಲಿಯೋನೆಲ್ ಮೆಸ್ಸಿ ನೇತೃತ್ವದ ತಂಡವು ನಾಲ್ಕನೇ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಅರ್ಜೆಂಟೀನಾ ಫೈನಲ್‌ಗೆ ಅಜೇಯವಾಗಿ ಪ್ರವೇಶಿಸಿತ್ತು ಆದರೆ ಹೆಚ್ಚುವರಿ ಸಮಯದಲ್ಲಿ ವಿಫಲವಾದ ನಂತರ ಅವರ ಅಭಿಯಾನವನ್ನು ಹೃದಯವಿದ್ರಾವಕ ರೀತಿಯಲ್ಲಿ ಕೊನೆಗೊಳಿಸಿತು.