ಮುಂಬಯಿ, ಮಾ.28: ಭಾನುವಾರದ ಐಪಿಎಲ್(IPL 2026) ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(MI vs KKR) ಮತ್ತು ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲು ಸಜ್ಜಾಗಿವೆ. ಈ ಪಂದ್ಯಕ್ಕೆ ಐತಿಹಾಸಿಕ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂ(Wankhede Stadium) ಅಣಿಯಾಗಿದೆ.
ಪಂದ್ಯಾವಳಿಯ ಇತಿಹಾಸದಲ್ಲಿಯೇ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದನ್ನು ಬಲಪಡಿಸುತ್ತಾ ಮುಂಬೈ ತಂಡ ಆಟಕ್ಕೆ ಇಳಿದಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಕಳೆದ ಬಾರಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಎರಡನೇ ಎಲಿಮಿನೇಟರ್ ತಲುಪಿತು. ಆದರೆ ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿತು. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡವು ಶೆರ್ಫೇನ್ ರುದರ್ಫೋರ್ಡ್ ಅವರನ್ನು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು ಮತ್ತು ಮಿನಿ ಹರಾಜಿನಲ್ಲಿ ಒಂದು ಕೋಟಿಗೆ ಕ್ವಿಂಟನ್ ಡಿ ಕಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ಹೊರತುಪಡಿಸಿ ತಮ್ಮ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಿಲ್ಲ.
ಮತ್ತೊಂದೆಡೆ, ಕೆಕೆಆರ್ ಕಳೆದ ಆವೃತ್ತಿಯ ವೈಫಲ್ಯಗಳನ್ನು ಮರೆತು ಈ ಬಾರಿ ಉತ್ತಮವಾಗಿ ಆಡುವ ಮೂಲಕ ನಾಲ್ಕನೇ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿದ್ದರೂ ಅವರು ಗಾಯಗೊಂಡಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. 25.20 ಕೋಟಿಯ ಕ್ಯಾಮರೂನ್ ಗ್ರೀನ್ ಮತ್ತು ಮಥೀಶ ಪತಿರಾನ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ. ಫಿನ್ ಅಲೆನ್, ಟಿಮ್ ಸೀಫರ್ಟ್ ಮತ್ತು ರಚಿನ್ ರವೀಂದ್ರ ತಂಡದಲ್ಲಿರುವ ಸ್ಟಾರ್ ವಿದೇಶಿ ಆಟಗಾರರಾಗಿದ್ದಾರೆ.
ಬೌಲಿಂಗ್ ಚಿಂತೆ
ಕೆಕೆಆರ್ ಬ್ಯಾಟಿಂಗ್ ವಿಭಾಗದಲ್ಲಿ ತುಂಬಾನೆ ಬಲಿಷ್ಠವಾಗಿದೆ. ಆದರೆ ಬೌಲಿಂಗ್‌ನಲ್ಲಿ ದೊಡ್ಡ ಆತಂಕ ಎದುರಾಗಿದೆ. ತಂಡದ ಸ್ಟಾರ್ ಬೌಲರ್‌ಗಳಾದ ಹರ್ಷಿತ್ ರಾಣಾ ಮತ್ತು ಆಕಾಶ್ ದೀಪ್ ಗಾಯದಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಪ್ರಸ್ತುತ ಯಾವುದೇ ಪ್ರಮುಖ ಗಾಯದ ಸಮಸ್ಯೆಯಿಂದ ಬಳಲುತ್ತಿಲ್ಲ. ಆದಾಗ್ಯೂ, ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಈ ಬಾರಿ ಅವರ ಭವಿಷ್ಯವನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಯೂಟರ್ನ್ ಹೊಡೆದ ಬಾಂಗ್ಲಾದೇಶ; ಐಪಿಎಲ್ ಪ್ರಸಾರಕ್ಕೆ ಸಮ್ಮತಿ
ಬಲಾಬಲ
ಇತ್ತಂಡಗಳ ಮುಖಾಮುಖಿ ದಾಖಲೆ ನೋಡುವಾಗ ಮುಂಬೈ ತಂಡವೇ ಮುಂದಿದೆ. 35 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ಗರಿಷ್ಠ 24 ಪಂದ್ಯಗಳನ್ನು ಜಯಿಸಿದೆ. ಕೆಕೆಆರ್ 11 ಪಂದ್ಯ ಮಾತ್ರ ಗೆದ್ದಿದೆ.
ಅಂಕಣ ಗುಟ್ಟು
ಮುಂಬೈನ ವಾಂಖೆಡೆ ಕ್ರಿಡಾಂಗಣದ ಪಿಚ್ ಹಿಂದಿನಿಂದೂ ಬ್ಯಾಟಿಂಗ್ ಸ್ನೇಹಿಯಾಗಿದೆ. ಎಷ್ಟೇ ದೊಡ್ಡ ಮೊತ್ತವಾದರೂ ಇಲ್ಲಿ ಚೇಸಿಂಗ್ ನಡೆಸಬಹುದಾಗಿದೆ. ಸಣ್ಣ ಬೌಂಡರಿಗಳು ಮತ್ತು ವೇಗದ ಔಟ್-ಫೀಲ್ಡ್ ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಬಹುದು. ಆದಾಗ್ಯೂ, ಬೌಲರ್‌ಗಳು ಹೊಸ ಬೌಲ್‌ನಲ್ಲಿ ಕೊಂಚ ಹಿಡಿತ ಸಾಧಿಸಬಹುದು. ಮೈದಾನವು ಅರೇಬಿ ಸಮುದ್ರಕ್ಕೆ ಹತ್ತಿರದಲ್ಲಿರುವುದರಿಂದ, ಸಮುದ್ರದ ತಂಗಾಳಿಯು ಬೌಲರ್‌ಗಳಿಗೆ ಇನ್ನಿಂಗ್ಸ್‌ನ ಆರಂಭದಲ್ಲಿ ಉತ್ತಮ ಪ್ರಮಾಣದ ಸ್ವಿಂಗ್ ಪಡೆಯಲು ಸಹಾಯ ಮಾಡುತ್ತದೆ.
ಸಂಭಾವ್ಯ ತಂಡಗಳು
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ.), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶೆರ್ಫೇನ್ ರುದರ್ಫೋರ್ಡ್, ವಿಲ್ ಜಾಕ್ಸ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ಇಂಪ್ಯಾಕ್ಟ್ ಆಟಗಾರ: ಮಯಾಂಕ್ ಮಾರ್ಕಾಂಡೆ.
ಕೋಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ (ನಾಯಕ), ಫಿನ್ ಅಲೆನ್, ಆಂಗ್ಕ್ರಿಶ್ ರಘುವಂಶಿ, ಕ್ಯಾಮೆರಾನ್ ಗ್ರೀನ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕೂಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಬ್ಲೆಸಿಂಗ್ ಮುಜರಬಾನಿ.
ಇಂಪ್ಯಾಕ್ಟ್ ಪ್ಲೇಯರ್: ಕಾರ್ತಿಕ್ ತ್ಯಾಗಿ
ಪಂದ್ಯ ಆರಂಭ: ಸಂಜೆ 7.30.
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.