ಯೂಟರ್ನ್ ಹೊಡೆದ ಬಾಂಗ್ಲಾದೇಶ; ಐಪಿಎಲ್ ಪ್ರಸಾರಕ್ಕೆ ಸಮ್ಮತಿ
IPL 2026: ಈ ಬಾರಿಯ ಐಪಿಎಲ್ ಟೂರ್ನಿ 2 ತಿಂಗಳಿಗೂ ಹೆಚ್ಚು ಕಾಲ ನಡೆಯಲಿದೆ. ಮೇ 24ರ ವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಮೇ 31ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಟ್ರೋಫಿಗಾಗಿ ಈ ಬಾರಿಯೂ 10 ತಂಡಗಳು ಸೆಣಸಾಡಲಿದ್ದು, ಟೂರ್ನಿಯಲ್ಲಿ ಒಟ್ಟು 65 ದಿನಗಳ ಕಾಲ 74 ಪಂದ್ಯಗಳು ನಡೆಯಲಿವೆ.
Bangladesh has lifted its blanket ban on broadcast of IPL -
ನವದೆಹಲಿ, ಮಾ.28: ಐಪಿಎಲ್(IPL 2026) ನಲ್ಲಿ ತನ್ನ ದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿಸಿ ಬಳಿಕ ಕೈಬಿಟ್ಟ ವಿಚಾರಕ್ಕೆ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಾಂಗ್ಲಾದೇಶ, ಭಾರತದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ದೂರ ಉಳಿದಿತ್ತು. ಮಾತ್ರವಲ್ಲದೇ ಬಾಂಗ್ಲಾದೇಶ ಸರ್ಕಾರ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು. ಇದೀಗ ಬಾಂಗ್ಲಾ ತನ್ನ ನಿರ್ಧಾರವನ್ನು ಬದಲಿಸಿದೆ. ಐಪಿಎಲ್ ಪ್ರಸಾರದ ಮೇಲಿನ ಸಂಪೂರ್ಣ ನಿಷೇಧವನ್ನು ತೆಗೆದುಹಾಕಿದೆ.
ಶನಿವಾರ (ಮಾರ್ಚ್ 28) ಮಾಧ್ಯಮ ಸಂವಾದದ ಸಂದರ್ಭದಲ್ಲಿ ದೇಶದಲ್ಲಿ ಹೊಸದಾಗಿ ನೇಮಕಗೊಂಡ ಮಾಹಿತಿ ಮತ್ತು ಪ್ರಸಾರ ಸಚಿವ ಜಹೀರ್ ಉದ್ದೀನ್ ಸ್ವಪನ್ ಈ ಬೆಳವಣಿಗೆಯನ್ನು ದೃಢಪಡಿಸಿದರು.
"ಐಪಿಎಲ್ ಪ್ರಸಾರ ಮಾಡಲು ಯಾರೂ ನಮಗೆ ಅರ್ಜಿ ಸಲ್ಲಿಸಲಿಲ್ಲ. ನಾವು ಕ್ರೀಡೆಯೊಂದಿಗೆ ರಾಜಕೀಯವನ್ನು ಬೆರೆಸಲು ಬಯಸುವುದಿಲ್ಲ. ನಾವು ಅದನ್ನು ವಾಣಿಜ್ಯ ದೃಷ್ಟಿಕೋನದಿಂದ ನೋಡುತ್ತೇವೆ ಮತ್ತು ಯಾವುದೇ ಚಾನೆಲ್ ಐಪಿಎಲ್ ಪ್ರಸಾರ ಮಾಡಲು ಅರ್ಜಿ ಸಲ್ಲಿಸಿದರೆ, ನಾವು ಅದನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ" ಎಂದು ಜಹೀರ್ ಉದ್ದೀನ್ ಸ್ವಪನ್ ಶನಿವಾರ ಹೇಳಿದರು. ಈ ಹಿಂದಿನ ಸರಕಾರ ಬಾಂಗ್ಲಾದಲ್ಲಿ ಐಪಿಎಲ್ ಪಂದ್ಯ ನಿಷೇಧಿಸಿತ್ತು.
"ನಾವು ಯಾರನ್ನೂ ಪ್ರಸಾರ ಮಾಡುವುದನ್ನು ತಡೆಯುವುದಿಲ್ಲ. ಸ್ಟಾರ್ ಸ್ಪೋರ್ಟ್ಸ್ ಅದನ್ನು ಪ್ರಸಾರ ಮಾಡಲು ಬಯಸಿದರೆ, ಅವರು ಮಾಡಬಹುದು. ನಮ್ಮ ಯಾವುದೇ ಚಾನೆಲ್‌ಗಳು ಅದನ್ನು ಪ್ರಸಾರ ಮಾಡಲು ಬಯಸಿದರೆ, ನಾವು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ, ಆದರೆ ನಾವು ಯಾವುದನ್ನೂ ಒತ್ತಾಯಿಸುವುದಿಲ್ಲ" ಎಂದು ಅವರು ಹೇಳಿದರು.
IPL 2026: ಈ ಬಾರಿಯ ಐಪಿಎಲ್ ಕಣದಲ್ಲಿರುವ ಕನ್ನಡಿಗರ ಪರಿಚಯ
ಐಪಿಎಲ್ ಪ್ರಸಾರದಿಂದ ಬಾಂಗ್ಲಾದೇಶಕ್ಕೆ ಆರ್ಥಿಕ ಲಾಭ ಮತ್ತು ಬಿಸಿಸಿಐ ಜೊತೆ ಸಂಬಂಧ ಸುಧಾರಿಸಲು ಇದು ಉತ್ತಮ ಅವಕಾಶ ಎಂದು ಪರಿಗಣಿಸಲಾಗಿದೆ. ಅಲ್ಲದೆ ಐಪಿಎಲ್ ಪ್ರಸಾರದಿಂದ ಬಾಂಗ್ಲಾದೇಶಕ್ಕೆ ಆರ್ಥಿಕವಾಗಿ ಲಾಭವಾಗುವುದರಿಂದ ಪ್ರಸಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಗಳು ಹೆಚ್ಚಿವೆ.
ಈ ಬಾರಿಯ ಐಪಿಎಲ್ ಟೂರ್ನಿ 2 ತಿಂಗಳಿಗೂ ಹೆಚ್ಚು ಕಾಲ ನಡೆಯಲಿದೆ. ಮೇ 24ರ ವರೆಗೂ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಮೇ 31ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಟ್ರೋಫಿಗಾಗಿ ಈ ಬಾರಿಯೂ 10 ತಂಡಗಳು ಸೆಣಸಾಡಲಿದ್ದು, ಟೂರ್ನಿಯಲ್ಲಿ ಒಟ್ಟು 65 ದಿನಗಳ ಕಾಲ 74 ಪಂದ್ಯಗಳು ನಡೆಯಲಿವೆ. ಇಂದು(ಶನಿವಾರ) ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.