ರಾಂಚಿ, ನ.28: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನ.30ರಂದು ಧೋನ ತವರಾದ ರಾಂಚಿಯಲ್ಲಿ ನಡೆಯಲಿದೆ. ಈಗಾಗಲೇ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಅಚ್ಚರಿ ಎಂಬಂತೆ ಧೋನಿ ಅವರು ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿ ತಮ್ಮ ಕಾರಿನಲ್ಲಿ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಹೃದಯಸ್ಪರ್ಶಿ ಮತ್ತು ವೈರಲ್ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಧೋನಿಯ ತವರೂರಿನಲ್ಲಿ ಭಾರತ ಆಡುವಾಗಲೆಲ್ಲಾ ನಡೆಯುವ ಈ ಸಾಂಪ್ರದಾಯಿಕ ಭೇಟಿಯು, ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಮುಖ ವೈಟ್-ಬಾಲ್ ಸವಾಲಿನ ಮೊದಲು ಶಾಂತ, ಲವಲವಿಕೆಯ ವಾತಾವರಣವನ್ನು ಸೃಷ್ಟಿಸಿತು. ಈ ಹಿಂದೆಯೂ ರಾಂಚಿಯಲ್ಲಿ ಭಾರತ ಪಂದ್ಯ ಆಡುವಾಗ ಧೋನಿ ತಂಡವನ್ನು ಭೇಟಿ ಮಾಡುತ್ತಿದ್ದರು.
ಭೋಜನದ ನಂತರ, ಧೋನಿ ಮತ್ತು ಕೊಹ್ಲಿ ಕಾರಿನಲ್ಲಿ ಹೊರಟು ಹೋಗುತ್ತಿರುವುದನ್ನು ಕಾಣಬಹುದು. ಅಭಿಮಾನಿಗಳು ಇಬ್ಬರೂ ತಾರೆಯರನ್ನು ನೋಡಲು ಪ್ರಯತ್ನಿಸುತ್ತಿದ್ದರು. ಆಸ್ಟ್ರೇಲಿಯಾ ಪ್ರವಾಸದ ನಂತರ ಕೊಹ್ಲಿ ಭಾರತ ತಂಡಕ್ಕೆ ಮರಳಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ನಂತರ, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ 74 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ಸರಣಿಯ ಅಂತಿಮ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು.
ಧೋನಿ ಹಾಗೂ ವಿರಾಟ್ ಕೊಹ್ಲಿ. ಭಾರತೀಯ ಕ್ರಿಕೆಟ್ ಇತಿಹಾಸದ ದಿ ಬೆಸ್ಟ್ ಫ್ರೆಂಡ್ಸ್ ಈಗಲೂ ಅದೇ ಪ್ರೀತಿ, ಅದೇ ಗೌರವ ಇಬ್ಬರ ನಡುವೆಯಿದೆ. ಟೀಮ್ ಇಂಡಿಯಾ ಕಂಡ ಜೀವದ ಗೆಳೆಯರ ಲಿಸ್ಟ್ನಲ್ಲಿ ವಿರಾಟ್ ಕೊಹ್ಲಿ- ಧೋನಿಗೆ ವಿಶೇಷವಾದ ಸ್ಥಾನವಿದೆ.
ವಿರಾಟ್ ಕೊಹ್ಲಿ-ಮಹೇಂದ್ರ ಸಿಂಗ್ ಧೋನಿ. ಇಬ್ಬರ ಒಡನಾಟ ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಸುದೀರ್ಘ ಇತಿಹಾಸ ಇದೆ. ಈ ವರ್ಷಗಳಲ್ಲಿ ಇಬ್ಬರ ಜೀವನದಲ್ಲಿ ಹಲವಾರು ಬದಲಾವಣೆಯಾಗಿದೆ. ಆ ಗೆಳೆತನ ಮಾತ್ರ ಇಂದಿಗೂ ಹಾಗೇ ಉಳಿದಿದೆ. ಇವರಿಬ್ಬರೂ ಟೀಮ್ ಇಂಡಿಯಾದಲ್ಲಿದ್ದಾಗ ಆನ್ಫೀಲ್ಡ್ ಆಟದಿಂದ, ಫ್ಯಾನ್ಸ್ಗೆ ಭರ್ಜರಿ ಟ್ರೀಟ್ ನೀಡಿದ್ರು. ಇಬ್ಬರೂ ಒಟ್ಟಾಗಿ ಎಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಈ ಜೋಡಿಯ ಬ್ಯಾಟಿಂಗ್ ಮ್ಯಾಜಿಕ್, ಫ್ಯಾನ್ಸ್ಗೆ ಎಷ್ಟು ರಂಜನೆ ನೀಡಿತ್ತೋ, ಆಫ್ ದಿ ಫೀಲ್ಡ್ನ ಒಡನಾಟ ಕೂಡ ನೋಡುಗರ ಮನ ತಣಿಸಿತ್ತು.
ಕೊಹ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟಾಗ ಬೆನ್ನು ತಟ್ಟಿ ಬೆಳೆಸಿದ್ದೇ ಧೋನಿ. ವಿರಾಟ್ ಕೊಹ್ಲಿ ತಪ್ಪು ಹೆಜ್ಜೆ ಇಟ್ಟಾಗೆಲ್ಲಾ ತಿದ್ದಿ ತೀಡಿ ಸರಿ ದಾರಿಗೆ ತಂದಿದ್ದ ಧೋನಿ, ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ನೀಡುತ್ತಾ ಪ್ರೋತ್ಸಾಹಿಸಿದ್ದರು. ಕೊಹ್ಲಿ ಫಾರ್ಮ್ ಕಳೆದುಕೊಂಡು ಟೀಕೆ ಎದುರಿಸಿದಾಗಲೂ ಧೋನಿ ಬೆಂಬಲ ಸೂಚಿಸಿದ್ದರು. ಇದನ್ನು ಸ್ವತಃ ಕೊಹ್ಲಿಯೇ ಹೇಳಿಕೊಂಡಿದ್ದರು.
ಇದನ್ನೂ ಓದಿ ವಿರಾಟ್ ಕೊಹ್ಲಿ-ಎಂಎಸ್ ಧೋನಿ ನಡುವೆ ಉತ್ತಮ ಟಿ20ಐ ಬ್ಯಾಟರ್ ಆರಿಸಿದ ದಿನೇಶ್ ಕಾರ್ತಿಕ್!
ಹೌದು 2020ರ ಬಳಿಕ ವಿರಾಟ್ ಕೊಹ್ಲಿ ವೃತ್ತಿ ಜೀವನ ಕರಾಳ ಹಾದಿ ಹಿಡಿಯಿತು. ಬ್ಯಾಡ್ ಫಾರ್ಮ್ ಸುಳಿಗೆ ಸಿಲುಕಿ ಒದ್ದಾಡಿದ್ರು. ಟೀಮ್ ಇಂಡಿಯಾದ ನಾಯಕತ್ವದ ವಿಚಾರದಲ್ಲಿ ಹೈಡ್ರಾಮಾನೇ ನಡೆದು ಬಿಡ್ತು. ಬೇಸರದಲ್ಲಿ ಟೆಸ್ಟ್ ಕ್ಯಾಪ್ಟೆನ್ಸಿಗೆ ದಿಢೀರ್ ಗುಡ್ ಬೈ ಹೇಳಿದ್ದರು. ಈ ಅವಧಿಯಲ್ಲಿ ಹಲವು ಅವಮಾನ ಎದುರಿಸಿದ ವಿರಾಟ್, ಪುಟಿದೇಳುವ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದರು. ವತ್ತು ಮತ್ತೆ ಕೊಹ್ಲಿ ಬೆನ್ನಿಗೆ ನಿಂತಿದ್ದೆ ಮಹೇಂದ್ರ ಸಿಂಗ್ ಧೋನಿ.
'ನಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ, ನನಗೆ ಒಬ್ಬ ಒಬ್ಬ ವ್ಯಕ್ತಿಯಿಂದ ಮಾತ್ರ ಸಂದೇಶ ಬಂದಿತ್ತು. ನಾನು ಈ ಹಿಂದೆ ಆ ವ್ಯಕ್ತಿಯೊಂದಿಗೆ ಆಡಿದ್ದೆ. ಅವರೇ ಧೋನಿ. ತುಂಬಾ ಜನರ ಬಳಿಕ ನನ್ನ ಫೋನ್ ನಂಬರ್ ಇದೆ. ತುಂಬಾ ಜನ ಟಿವಿಗಳಲ್ಲಿ ಕೂತು ಸಲಹೆಗಳನ್ನ ನೀಡುತ್ತಾರೆ. ಆದರೆ ಅವರಿಂದ ನನಗೆ ಒಂದು ಸಂದೇಶ ಬರಲಿಲ್ಲ" ಎಂದು ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ಹೇಳಿದ್ದರು.