ಅಲ್ ಅಮೆರಾತ್ (ಒಮಾನ್), ನ.14: ಕೊನೆಯ ಎಸೆತದ ತನಕ ಅತ್ಯಂತ ರೋಚಕವಾಗಿ ಸಾಗಿದ 19 ವರ್ಷದೊಳಗಿನವರ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲುವಿನ ನಗೆ ಬೀರಿದೆ. ಒಂದು ವಿಕೆಟ್ ಅಂತರದ ಗೆಲುವು ಸಾಧಿಸಿದ ಭಾರತ 5 ವರ್ಷದ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಗೆಲುವಿನೊಂದಿಗೆ ಭಾರತ ಅವಳಿ ಸೇಡು ತೀರಿಸಿಕೊಂಡಿತು. ಹಾಲಿ ಆವೃತ್ತಿಯ ಲೀಗ್ ಮತ್ತು ಕಳೆದ ಆವೃತ್ತಿಯ ಫೈನಲ್‌ನಲ್ಲಿ ಭಾರತ ಪಾಕ್‌ಗೆ ಶರಣಾಗಿತ್ತು.
ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಫರ್ಹಾನ್ ಯೂಸಫ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಾಯಕನ ಆಯ್ಕೆಗೆ ತಕ್ಕ ಬ್ಯಾಟಿಂಗ್ ತೋರಿದ ಪಾಕ್ ಬ್ಯಾಟರ್‌ಗಳು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 337ರನ್ ಪೇರಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡ ಕೊನೆಯ ಎಸೆತದ ತನಕ ಹೋರಾಡಿ 9 ವಿಕೆಟ್‌ಗೆ 339 ರನ್ ಬಾರಿಸಿ ರೋಚಕ ಗೆಲುವು ಸಾಧಿಸಿತು.
ಚೇಸಿಂಗ್ ವೇಳೆ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ಲಕ್ಷ್ಯ ರಾಯ್ ಮತ್ತು ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿರುವ ಆರ್ಯವೀರ್ ಸಹ್ವಾಗ್ ಮೊದಲ ವಿಕೆಟ್‌ಗೆ 95 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಆರ್ಯವೀರ್(58) ಈ ಪಂದ್ಯದಲ್ಲಿಯೂ ಅರ್ಧಶತಕ ಸಿಡಿಸಿದರು. ಮಾತ್ರವಲ್ಲದೆ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದರು. ಆಡಿದ 4 ಪಂದ್ಯಗಳಿಂದ 303 ರನ್ ಕಲೆ ಹಾಕಿದರು.
ನಾಟಕೀಯ ಕುಸಿತ ಕಂಡ ಭಾರತ
ಉತ್ತಮ ಸ್ಥಿತಿಯಲ್ಲಿದ್ದ ಭಾರತ ಲಕ್ಷ್ಯ ರಾಯ್ ಮತ್ತು ಆರ್ಯವೀರ್ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡಿತು. ವಿ. ಕೆ. ವಿನೀತ್(24), ಅರ್ಜುನ್ ರಜಪೂತ್(16), ಯಶ್‌ವರ್ಧನ್ ಚೌಹಾಣ್(9) ಸಾಲುಸಾಲಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅನ್ವಯ್ ದ್ರಾವಿಡ್(19) ರನೌಟ್ ಸಂಕಟಕ್ಕೆ ಸಿಲುಕಿದರು.
ಮನಲ್-ಮೋಹಿತ್ ಅಸಾಮಾನ್ಯ ಬ್ಯಾಟಿಂಗ್
217ಕ್ಕೆ 7 ವಿಕೆಟ್ ಕಳೆದುಕೊಂಡು ಇನ್ನೇನು ಸೋಲಿನ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಮನಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ಅಸಾಮಾನ್ಯ ಬ್ಯಾಟಿಂಗ್ ನಡೆಸುವ ಮೂಲಕ ರೋಚಕ ಗೆಲುವು ತಂದುಕೊಟ್ಟರು. ಶಕ್ತಿ ಮೀರಿ ಬ್ಯಾಟಿಂಗ್ ನಡೆಸಿದ ಉಭಯ ಆಟಗಾರರು 9ನೇ ವಿಕೆಟ್‌ಗೆ 57 ರನ್ ಜತೆಯಾಟ ನಡೆಸಿದರು. ಗೆಲುವಿಗೆ 29 ಬೇಕಿದ್ದಾಗ ಮನಲ್ ವಿಕೆಟ್ ಕಳೆದುಕೊಂಡರೂ, ಕೊನೆಯ ತನಕ ಅಜೇಯರಾಗಿ ಉಳಿದ ಮೋಹಿತ್ ಅಂತಿಮ ಎಸೆತದಲ್ಲಿ ಗೆಲುವಿಗೆ ಮೂರು ರನ್ ಬೇಕಿದ್ದಾಗ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ತಲಾ 3 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ಚೌಹಾಣ್ 47 ರನ್ ಗಳಿಸಿದರು. ಮೋಹಿತ್ ಉಲ್ವಾ ಅಜೇಯ 49 ರನ್ ಗಳಿಸಿದರು.
ಸಮಾಜವಾದಿ ಸಂಸದೆ ಜೊತೆ ಮದುವೆ; ಸಿಎಂ ಯೋಗಿ ಆದಿತ್ಯನಾಥ್‌ಗೆ ಆಹ್ವಾನ ನೀಡಿದ ರಿಂಕು ಸಿಂಗ್ ಕುಟುಂಬ
ಉಸ್ಮಾನ್ ಖಾನ್ ಶತಕ ವ್ಯರ್ಥ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಪರ ಆರಂಭಿಕ ಬ್ಯಾಟರ್ ಉಸ್ಮಾನ್ ಖಾನ್ ಸೊಗಸಾದ ಶತಕ ಬಾರಿಸಿ ಮಿಂಚಿದರು. 11 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ ಅವರು 107 ರನ್ ಗಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಅಬ್ದುಲ್ ಖಾದಿರ್(80) ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 6 ಸಿಕ್ಸರ್ ಸಿಡಿಯಿತು. ಈ ಜೋಡಿ ಎರಡನೇ ವಿಕೆಟ್‌ಗೆ 135 ರನ್ ಜತೆಯಾಟ ನಡೆಸಿತು. ನಾಯಕ ಫರ್ಹಾನ್ ಯೂಸಫ್ 63 ರನ್ ಗಳಿಸಿದರು.
ಭಾರತ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕಾವ್ಯ ಪಟೇಲ್ 68 ರನ್ ವೆಚ್ಚದಲ್ಲಿ ಪ್ರಮುಖ ನಾಲ್ಕು ವಿಕೆಟ್ ಕೆಡವಿದರು. ಚಿಗುರುಪಾಟಿ ವೆಂಕಟ 40 ಕ್ಕೆ 3 ವಿಕೆಟ್ ಪಡೆದರು.