ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Wipro Marathon: ಸೆಪ್ಟೆಂಬರ್ 27ರಂದು 13ನೇ ವಿಪ್ರೋ ಬೆಂಗಳೂರು ಮ್ಯಾರಥಾನ್!

ಸೆಪ್ಟಂಬರ್‌ 27 ರಂದು ಬೆಂಗಳೂರಿನಲ್ಲಿ ವಿಪ್ರೋ ಮ್ಯಾರಥಾನ್‌ ನಡೆಯಲಿದೆ. ಈ ಬಾರಿ ದೇಶ-ವಿದೇಶಗಳಿಂದ 45,000ಕ್ಕೂ ಹೆಚ್ಚು ಓಟಗಾರರು ಭಾಗಿಯಾಗಲಿದ್ದಾರೆ. ಬದುಕಿನ ಸವಾಲುಗಳನ್ನು ಓಟದ ಮೂಲಕ ಗೆದ್ದ 10 ಮಂದಿ ಬ್ರ್ಯಾಂಡ್ ರಾಯಭಾರಿಗಳು ಕೂಡ ಈ ಮ್ಯಾರಥಾನ್‌ನ ಪ್ರಮುಖ ಆಕರ್ಷಣೆಯಾಗಿದೆ.

ಸೆಪ್ಟಂಬರ್‌ 27 ರಂದು ವಿಪ್ರೋ ಬೆಂಗಳೂರು ಮ್ಯಾರಥಾನ್‌.

ಬೆಂಗಳೂರು: ಬೆಂಗಳೂರಿನಲ್ಲಿ ಸೆಪ್ಟೆಂಬರ್ 27 ರಂದು ಮತ್ತೊಮ್ಮೆ ಸಾವಿರಾರು ಜನರ ಒಗ್ಗಟ್ಟಿನ ಉತ್ಸಾಹಭರಿತ ಓಟಕ್ಕೆ ವೇದಿಕೆ ಸಜ್ಜಾಗಿದ್ದು, 13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ (Wipro Bengaluru Marathon) ನಡೆಯಲಿದೆ. ದೇಶ-ವಿದೇಶಗಳಿಂದ 45,000ಕ್ಕೂ ಹೆಚ್ಚು ಓಟಗಾರರು, ಸ್ಪಿರಿಟ್ ಆಫ್ ವಿಪ್ರೋ ರನ್ ಸದಸ್ಯರು ಸೇರಿದಂತೆ, ಈ ಬೃಹತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್, ವಿಪ್ರೋ ಬೆಂಗಳೂರು ಹಾಗೂ ಶ್ರೀರಾಮ್‌ ಪ್ರಾಪರ್ಟೀಸ್ ಸಹಯೋಗದಲ್ಲಿ ಈ ಮ್ಯಾರಥಾನ್ ಆಯೋಜಿಸಲಾಗಿದೆ.

ಕಂಠೀರವ ಕ್ರೀಡಾಂಗಣದಿಂದ ಮ್ಯಾರಥಾನ್ ಆರಂಭವಾಗಲಿದ್ದು, ಬೆಂಗಳೂರಿನ ಹೃದಯಭಾಗದ ಪ್ರಮುಖ ರಸ್ತೆಗಳ ಮೂಲಕ ಓಟ ಸಾಗಲಿದೆ. ವಿಧಾನಸೌಧ, ಕಬ್ಬನ್ ಪಾರ್ಕ್, ಎಂ.ಜಿ. ರಸ್ತೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳು ಓಟದ ಮಾರ್ಗದ ಭಾಗವಾಗಲಿವೆ.

ಈ ಬಾರಿಯ ಮ್ಯಾರಥಾನ್‌ನ ಪ್ರಮುಖ ಆಕರ್ಷಣೆಯೆಂದರೆ, ಬದುಕಿನ ಅತ್ಯಂತ ಕ್ಲಿಷ್ಟಕರ ಸವಾಲುಗಳನ್ನು ಓಟದ ಮೂಲಕ ಎದುರಿಸಿ ಗೆದ್ದ 10 ಮಂದಿ ವಿಶೇಷ ಓಟಗಾರರು. ಇವರನ್ನು ವಿಪ್ರೋ ಬೆಂಗಳೂರು ಮ್ಯಾರಥಾನ್-2026ರ ಬ್ರ್ಯಾಂಡ್ ರಾಯಭಾರಿಗಳಾಗಿ ಗುರುತಿಸಲಾಗಿದೆ. ಇವರ ವೈಯಕ್ತಿಕ ಯಶೋಗಾಥೆಗಳು ಇತರ ಓಟಗಾರರು ಹಾಗೂ ಸಾರ್ವಜನಿಕರಿಗೆ ಸ್ಫೂರ್ತಿಯಾಗಲಿವೆ.

ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಕನ್ನಡಿಗನನ್ನು ಆರಿಸಿದ ದೀಪ್‌ ದಾಸ್‌ಗುಪ್ತಾ!

ಎಂದಿನಂತೆ ಈ ಬಾರಿಯೂ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಮತ್ತು 5ಕೆ ಓಟಗಳು ನಡೆಯಲಿವೆ. ಇದರೊಂದಿಗೆ ಸ್ಪಿರಿಟ್ ಆಫ್ ವಿಪ್ರೋ ರನ್ ಕೂಡ ಆಯೋಜಿಸಲಾಗಿದೆ. 21ನೇ ವರ್ಷಕ್ಕೆ ಕಾಲಿಟ್ಟಿರುವ ಸ್ಪಿರಿಟ್ ಆಫ್ ವಿಪ್ರೋ ರನ್ ಜಗತ್ತಿನ 70ಕ್ಕೂ ಹೆಚ್ಚು ನಗರಗಳಲ್ಲಿ ನಡೆಯುತ್ತಿದ್ದು, ವಿಪ್ರೋ ಉದ್ಯೋಗಿಗಳು, ಅವರ ಕುಟುಂಬ ಸದಸ್ಯರು, ಗ್ರಾಹಕರು ಮತ್ತು ಪಾಲುದಾರರು ಇದರಲ್ಲಿ ಭಾಗವಹಿಸುತ್ತಾರೆ.

ಸಮಾಜದ ದುರ್ಬಲ ವರ್ಗಗಳಿಗೆ ನೆರವು ನೀಡುವ ಉದ್ದೇಶದಿಂದ ಈ ಬಾರಿಯೂ ‘ಚಾರಿಟಿ 10ಕೆ’ ಓಟ ಆಯೋಜಿಸಲಾಗಿದೆ. ಈ ಮೂಲಕ ಇದುವರೆಗೆ ₹45 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಲಾಗಿದ್ದು, ಸೌಲಭ್ಯವಂಚಿತ ನಾಗರಿಕರ ಏಳ್ಗೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಎನ್‌ಜಿಒಗಳಿಗೆ ನೆರವು ನೀಡಲಾಗಿದೆ.

ವಿಪ್ರೋ ಬೆಂಗಳೂರು ಮ್ಯಾರಥಾನ್‌ನಲ್ಲಿ ಮೊದಲ ಬಾರಿಗೆ ಓಟದಲ್ಲಿ ಭಾಗವಹಿಸುವವರು, ಕಾರ್ಪೊರೇಟ್ ತಂಡಗಳು, ರಕ್ಷಣಾ ಸಿಬ್ಬಂದಿ, ಕುಟುಂಬಗಳು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವಯೋಮಾನದವರೂ ಭಾಗವಹಿಸಬಹುದಾಗಿದೆ.

Duleep Trophy 2026: ಉತ್ತರ ವಲಯ ಎದುರು ಗೆದ್ದು 24ನೇ ಬಾರಿ ಫೈನಲ್‌ಗೇರಿದ ದಕ್ಷಿಣ ವಲಯ!

ಈ ಕುರಿತು ಮಾತನಾಡಿದ ವಿಪ್ರೋ ಲಿಮಿಟೆಡ್‌ನ ಗ್ಲೋಬಲ್ ಚೀಫ್ ಮಾರ್ಕೆಟಿಂಗ್ ಆಫೀಸರ್ ರಂಜಿತಾ ಘೋಷ್, “ಈ ಸಲದ ಓಟದಲ್ಲಿ 10 ರಾಯಭಾರಿಗಳ ವಿಶಿಷ್ಟ ಯಶೋಗಾಥೆಗಳು ಎಲ್ಲರ ಗಮನ ಸೆಳೆಯಲಿವೆ. ನಮ್ಮಂತಹವರಿಗೆ ಸಂಪೂರ್ಣವಾಗಿ ಅರ್ಥವಾಗದಂತಹ ಸವಾಲುಗಳನ್ನು ಇವರು ಓಟದ ಮೂಲಕ ಯಶಸ್ವಿಯಾಗಿ ಎದುರಿಸಿ ಜೀವನ ನಡೆಸುತ್ತಿದ್ದಾರೆ. ಓಟವೆಂದರೆ ಕೇವಲ ವೇಗ, ಅಂತರ ಹಾಗೂ ಗೆಲುವು ಮಾತ್ರವಲ್ಲ ಎಂಬುದನ್ನು ಇವರು ತೋರಿಸಿಕೊಡಲಿದ್ದಾರೆ,” ಎಂದು ಹೇಳಿದರು.

ಶ್ರೀರಾಂ ಪ್ರಾಪರ್ಟೀಸ್ ಲಿಮಿಟೆಡ್‌ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಮುರಳಿ ಮಲಯಪ್ಪನ್ ಮಾತನಾಡಿ, “ನಾವು 13 ವರ್ಷಗಳಿಂದ ಬೆಂಗಳೂರು ಮ್ಯಾರಥಾನ್‌ನೊಂದಿಗೆ ಜೊತೆಯಾಗಿದ್ದೇವೆ. ಎನ್‌ಇಬಿ ಸ್ಪೋರ್ಟ್ಸ್ ಜೊತೆ ಸೇರಿ ಬೆಂಗಳೂರಿನ ಓಟದ ಆಸಕ್ತರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ಬೆಂಗಳೂರು ಮ್ಯಾರಥಾನ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುವುದನ್ನು ನೋಡಲು ಸಂತೋಷವಾಗುತ್ತದೆ,” ಎಂದು ತಿಳಿಸಿದರು.

ENG vs SL: ಇಂಗ್ಲೆಂಡ್‌ ವೈಟ್‌ಬಾಲ್‌ ಸರಣಿಗಳಿಗೆ ಶ್ರೀಲಂಕಾ ತಂಡ ಪ್ರಕಟ!

ವಿಪ್ರೋ ಬೆಂಗಳೂರು ಮ್ಯಾರಥಾನ್‌ನ ರೇಸ್ ನಿರ್ದೇಶಕ ನಾಗರಾಜ ಅಡಿಗ ಮಾತನಾಡಿ, “ಪ್ರತಿ ವರ್ಷ ಬೆಂಗಳೂರು ಮ್ಯಾರಥಾನ್‌ಗೆ ಬರುವ ಪ್ರತಿಯೊಬ್ಬರೂ ಒಂದೊಂದು ಕಾರಣದೊಂದಿಗೆ ಬರುತ್ತಾರೆ. ಒಬ್ಬರು ಕಳೆದ ವರ್ಷಕ್ಕಿಂತ ವೇಗವಾಗಿ ಓಡಬೇಕು ಎಂದು, ಇನ್ನೊಬ್ಬರು ಮೊದಲ 5ಕೆ ಓಟವನ್ನು ಓಡಲು, ಇನ್ನು ಕೆಲವರು ಅಶಕ್ತರಿಗೆ ನೆರವು ನೀಡಲು ಹೀಗೆ ಬೇರೆ ಬೇರೆ ಉದ್ದೇಶ ಹೊಂದಿರುತ್ತಾರೆ. ಈ ಸಲದ 10 ರಾಯಭಾರಿಗಳ ಜೀವನಗಾಥೆಯು ಎಲ್ಲರಿಗೂ ಹೊಸ ಸ್ಫೂರ್ತಿ ನೀಡಲಿದೆ,” ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕಟಾರಿಯಾ ಮಾತನಾಡಿ, “ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಫಿಟ್‌ನೆಸ್ ಹಾಗೂ ಕ್ರಿಯಾಶೀಲ ಜೀವನಶೈಲಿ ಬಹಳ ಮುಖ್ಯವಾಗಿದೆ. ವಿಪ್ರೋ ಬೆಂಗಳೂರು ಮ್ಯಾರಥಾನ್‌ನಂತಹ ಕಾರ್ಯಕ್ರಮಗಳು ಎಲ್ಲಾ ಹಿನ್ನೆಲೆಯ ಜನರನ್ನೂ ಒಂದೆಡೆ ತಂದು, ಫಿಟ್‌ನೆಸ್ ಬಗ್ಗೆ ಅರಿವು ಮೂಡಿಸುತ್ತವೆ,” ಎಂದು ಹೇಳಿದರು.

ಈ ಬಾರಿಯ ವಿಪ್ರೋ ಬೆಂಗಳೂರು ಮ್ಯಾರಥಾನ್‌ನಲ್ಲಿ ಭಾರತದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ವಿದೇಶಗಳಿಂದಲೂ ಓಟಗಾರರು ಭಾಗವಹಿಸಲಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಮತ್ತೊಮ್ಮೆ ಓಟದ ಸಂಭ್ರಮ ಮೂಡಲಿದ್ದು, 45,000ಕ್ಕೂ ಹೆಚ್ಚು ಓಟಗಾರರು ಒಂದೇ ವೇದಿಕೆಯಲ್ಲಿ ಹೆಜ್ಜೆ ಹಾಕುವ ಮೂಲಕ ವಿಪ್ರೋ ಬೆಂಗಳೂರು ಮ್ಯಾರಥಾನ್ ಬೆಂಗಳೂರಿನ ಅತಿದೊಡ್ಡ ಮ್ಯಾರಥಾನ್‌ಗಳಲ್ಲಿ ಒಂದಾಗಿ ಮತ್ತೊಂದು ಮೈಲಿಗಲ್ಲು ನಿರ್ಮಿಸಲಿದೆ.

ಹೆಚ್ಚಿನ ಮಾಹಿತಿಗಾಗಿ: www.nebsports.in