ನವದೆಹಲಿ: ಫಿಫಾ ವಿಶ್ವಕಪ್ 2026ರ (FIFA World Cup 2026) ಟೂರ್ನಿಯ ಫೈನಲ್ ಪಂದ್ಯವನ್ನು ಮರು ಆಯೋಜಿಸಬೇಕೆಂದು ಆಗ್ರಹಿಸಿ ಅರ್ಜೆಂಟೀನಾ (Argentina Fans) ಫುಟ್‌ಬಾಲ್ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಮನವಿ ಆರಂಭಿಸಿದ್ದಾರೆ. ಫೈನಲ್‌ನಲ್ಲಿ ರೆಫರಿಯ ಕೆಲವು ವಿವಾದಾತ್ಮಕ ತೀರ್ಪುಗಳು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿವೆ ಎಂದು ಆರೋಪಿಸಿರುವ ಅಭಿಮಾನಿಗಳು, ಪಂದ್ಯವನ್ನು ಮತ್ತೊಮ್ಮೆ ಆಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಆನ್‌ಲೈನ್ ಮನವಿಗೆ ಈಗಾಗಲೇ 80 ಸಾವಿರಕ್ಕೂ ಹೆಚ್ಚಿನ ಸಹಿಗಳು ಸಂಗ್ರಹವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಮನವಿಗೆ ಸಂಬಂಧಿಸಿದಂತೆ ಫಿಫಾ ಅಥವಾ ಇತರ ಫುಟ್‌ಬಾಲ್ ಆಡಳಿತ ಸಂಸ್ಥೆಗಳು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಂದ ಹಾಗೆ ಜುಲೈ 20 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 1-0 ಅಂತರದಲ್ಲಿ ಮಣಿಸಿ ಸ್ಪೇನ್ ಎರಡನೇ ಬಾರಿ ಚಾಂಪಿಯನ್ ಆಗಿತ್ತು.
ʼಹರಾರೆಯಲ್ಲಿ 175 ರನ್ ಸಿಡಿಸಿದ್ದೇನೆ: ಜಿಂಬಾಬ್ವೆ ತಂಡಕ್ಕೆ ವಾರ್ನಿಂಗ್ ಕೊಟ್ಟ ವೈಭವ್ ಸೂರ್ಯವಂಶಿ!
ಸ್ಪ್ಯಾನಿಷ್ ಮಾಧ್ಯಮಗಳ ವರದಿ ಪ್ರಕಾರ, ಅರ್ಜೆಂಟೀನಾದ ಅಭಿಮಾನಿ ಗಿಸೆಲಾ ಸಾಂಚೆಜ್ ಅವರು Change.orgನಲ್ಲಿ ಈ ಆನ್‌ಲೈನ್ ಮನವಿಯನ್ನು ಆರಂಭಿಸಿದ್ದಾರೆ. ಈ ಮನವಿಯಲ್ಲಿ ಸ್ಲೋವೇನಿಯಾದ ರೆಫರಿ ಸ್ಲಾವ್ಕೊ ವಿನ್ಚಿಕ್ ಫೈನಲ್ ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ತೆಗೆದುಕೊಂಡ ಕೆಲವು ತೀರ್ಪುಗಳಿಂದ ಅರ್ಜೆಂಟೀನಾಗೆ ಅನ್ಯಾಯವಾಗಿದ್ದು, ಅದರಿಂದ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಲಾಗಿದೆ. ಇದೇ ಕಾರಣದಿಂದ ಫಿಫಾ ಫೈನಲ್ ಪಂದ್ಯವನ್ನು ಮರು ಆಯೋಜಿಸಬೇಕು ಎಂದು ಒತ್ತಾಯಿಸಲಾಗಿದೆ. ಪ್ರಕಟಣೆಯ ವೇಳೆಗೆ ಈ ಮನವಿಗೆ Change.orgನಲ್ಲಿ 79,351 ಸಹಿಗಳು ಲಭಿಸಿದ್ದವು.
ಆದರೆ, ಈ ಅಭಿಯಾನಕ್ಕೆ ಫಿಫಾವನ್ನು ಕಾನೂನುಬದ್ಧವಾಗಿ ಫೈನಲ್ ಮರು ಆಡಿಸಲು ಒತ್ತಾಯಿಸುವ ಅಧಿಕಾರ ಇಲ್ಲ. ಅಲ್ಲದೆ, ಈ ಮನವಿಯನ್ನು ಪರಿಶೀಲಿಸುವ ಬಗ್ಗೆ ಫಿಫಾ ಇದುವರೆಗೆ ಯಾವುದೇ ಸೂಚನೆ ಅಥವಾ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
IND vs ZIM: ʻಹೊರಗಡೆ ಟೀಕೆಗಳನ್ನು ಮರೆತು ಭಯಮುಕ್ತವಾಗಿ ಆಡಿʼ: ಸಹ ಆಟಗಾರರಿಗೆ ಶ್ರೇಯಸ್ ಅಯ್ಯರ್ ಸಲಹೆ!
2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಸಂಬಂಧ ಇಂತಹ ಆನ್‌ಲೈನ್ ಅಭಿಯಾನ ಇದೇ ಮೊದಲಲ್ಲ. ಈ ಹಿಂದೆ ಸ್ಪೇನ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಮರುಆಯೋಜಿಸಬೇಕು ಎಂದು ಫ್ರಾನ್ಸ್ ಅಭಿಮಾನಿಗಳು ಕೂಡ ಆನ್‌ಲೈನ್ ಮನವಿ ಸಲ್ಲಿಸಿದ್ದರು. ಆ ಪಂದ್ಯದಲ್ಲಿ ಲಮೀನ್ ಯಮಾಲ್ ಮೇಲಿನ ಫೌಲ್‌ಗೆ ಸ್ಪೇನ್‌ಗೆ ಪೆನಾಲ್ಟಿ ನೀಡಿದ ನಿರ್ಧಾರ ವಿವಾದಕ್ಕೆ ಕಾರಣವಾಗಿದ್ದು, ಅದರ ಹಿಂದಿನ ಘಟನಾಕ್ರಮವನ್ನು ಪ್ರಶ್ನಿಸಿ ಮರುಪಂದ್ಯಕ್ಕೆ ಆಗ್ರಹಿಸಲಾಗಿತ್ತು. ಆದರೆ ಆ ಮನವಿಯೂ ಟೂರ್ನಿಯ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.
ವಿವಾದಾತ್ಮಕ ರೆಫರಿಂಗ್ ನಿರ್ಧಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಆನ್‌ಲೈನ್ ಮನವಿಗಳು ಈಗ ಸಾಮಾನ್ಯ ಮಾರ್ಗವಾಗಿದ್ದರೂ, ಫಿಫಾ ನಿಯಮಗಳ ಪ್ರಕಾರ ಇಂತಹ ಮನವಿಗಳಿಗೆ ಪಂದ್ಯ ಫಲಿತಾಂಶವನ್ನು ಬದಲಿಸುವ ಅಥವಾ ಮರುಪಂದ್ಯಕ್ಕೆ ಆದೇಶಿಸುವ ಯಾವುದೇ ಅಧಿಕೃತ ಅಧಿಕಾರವಿಲ್ಲ. ಆದ್ದರಿಂದ ಇಂತಹ ಅರ್ಜಿಗಳು ಅಭಿಮಾನಿಗಳ ಅಭಿಪ್ರಾಯವನ್ನು ವ್ಯಕ್ತಪಡಿಸುವ ವೇದಿಕೆಯಾಗಿಯೇ ಉಳಿಯುತ್ತವೆ.