ನವದೆಹಲಿ: ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ (Asian Games 2026) ಪುರುಷರ ಹಾಕಿ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ, ಬಾಂಗ್ಲಾದೇಶದ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಸೋಮವಾರ ನಡೆದಿದ್ದ ಪೂಲ್ ಎ ವಿಭಾಗದ ಕೊನೆಯ ಪಂದ್ಯದಲ್ಲಿ (IND vs BAN) ಭಾರತ 10-0 ಗೋಲುಗಳ ಅಂತರದಿಂದ ಬಾಂಗ್ಲಾದೇಶವನ್ನು ಮಣಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಪೂಲ್ ಎನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಅಕ್ಟೋಬರ್ 1ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಎದುರಿಸಲಿದೆ.
ಭಾರಿ ಮಳೆಯ ನಡುವೆಯೂ ನಡೆದ ಪಂದ್ಯದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು ದಾಖಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಿಲಾನಂದ್ ಲಾಕ್ರಾ ಎರಡು ಗೋಲು ಗಳಿಸಿ ಗಮನ ಸೆಳೆದರು. ಅಲ್ಲದೆ, ಭಾರತದ ಇತರ ಆಟಗಾರರೂ ಗೋಲು ಗಳಿಸುವ ಮೂಲಕ ತಂಡದ ಗೆಲುವಿನ ಅಂತರವನ್ನು ಹಿಗ್ಗಿಸಿದರು.
Asian Games 2026: 400 ಮೀಟರ್ ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್‌ಗೆ ಕಂಚು, ಗುಲ್ವೀರ್ ಸಿಂಗ್‌ಗೆ ಬೆಳ್ಳಿ!
ಪಂದ್ಯದ ಆರಂಭದಲ್ಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೂರನೇ ನಿಮಿಷದಲ್ಲಿ ಅಭಿಷೇಕ್ ಗೋಲು ಗಳಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಬಳಿಕ 22ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಜುಗ್ರಾಜ್ ಸಿಂಗ್ ಗೋಲು ಗಳಿಸಿದರು. ಮೊದಲಾರ್ಧ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿ ತಂಡದ ಮುನ್ನಡೆಯನ್ನು 3-0ಕ್ಕೆ ವಿಸ್ತರಿಸಿದರು.
ದ್ವಿತೀಯಾರ್ಧದಲ್ಲಿಯೂ ಭಾರತದ ಆಕ್ರಮಣಕಾರಿ ಆಟ ಮುಂದುವರಿಯಿತು. 32ನೇ ನಿಮಿಷದಲ್ಲಿ ಸುಖ್‌ಜೀತ್ ಸಿಂಗ್ ಗೋಲು ಗಳಿಸಿದರು. 40ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಮತ್ತೊಂದು ಗೋಲು ದಾಖಲಿಸಿದರು. ಬಳಿಕ ಶಿಲಾನಂದ್ ಲಾಕ್ರಾ 44 ಮತ್ತು 45ನೇ ನಿಮಿಷಗಳಲ್ಲಿ ಸತತ ಎರಡು ಗೋಲು ಗಳಿಸಿದರು. ಇದೇ ವೇಳೆ ಹರ್ಮನ್‌ಪ್ರೀತ್ ತಮ್ಮ ಮೂರನೇ ಗೋಲು ದಾಖಲಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಮೂರನೇ ಕ್ವಾರ್ಟರ್ ಮುಕ್ತಾಯಕ್ಕೆ ಭಾರತ 8-0 ಮುನ್ನಡೆ ಸಾಧಿಸಿತ್ತು.
ಕೊನೆಯ ಕ್ವಾರ್ಟರ್‌ನಲ್ಲಿ ಮಳೆಯ ಕಾರಣ ಮೈದಾನದಲ್ಲಿ ನೀರು ನಿಂತಿದ್ದರೂ ಭಾರತ ಗೋಲು ಗಳಿಸುವುದನ್ನು ಮುಂದುವರಿಸಿತು. ಪಂದ್ಯ ಮುಕ್ತಾಯಕ್ಕೆ ಮುನ್ನ ಸಂಜಯ್ ಗೋಲು ಗಳಿಸಿದರೆ, 60ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಹತ್ತನೇ ಗೋಲು ದಾಖಲಿಸಿದರು. ಈ ಮೂಲಕ ಭಾರತ 10-0 ಅಂತರದ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತ ಪೂಲ್ ಎನಲ್ಲಿ ಆಡಿದ ಐದೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಅಭಿಯಾನ ಮುಗಿಸಿದೆ. ಒಟ್ಟು 45 ಗೋಲುಗಳ ಗೋಲು ವ್ಯತ್ಯಾಸದೊಂದಿಗೆ ಅಗ್ರಸ್ಥಾನ ಪಡೆದಿರುವ ಭಾರತ, ಇದೀಗ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ಮುಖಾಮುಖಿಯಾಗಲಿವೆ.