ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Asian Games 2026: 400 ಮೀಟರ್‌ ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್‌ಗೆ ಕಂಚು, ಗುಲ್ವೀರ್‌ ಸಿಂಗ್‌ಗೆ ಬೆಳ್ಳಿ!

ಭಾರತದ ಅಥ್ಲಿಟ್‌ ವಿದ್ಯಾ ರಾಮರಾಜ್‌ ಹಾಗೂ ದೂರದ ಓಟಗಾರ ಗುಲ್ವೀರ್‌ ಸಿಂಗ್‌ ಅವರು 2026ರ ಏಷ್ಯಾ ಕ್ರೀಡಾಕೂಟದಲ್ಲಿ ಕ್ರಮವಾಗಿ ಕಂಡು ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. 400 ಮೀಟರ್‌ ಹರ್ಡನ್ಸ್‌ನಲ್ಲಿ ವಿದ್ಯಾ ಕಂಚಿನ ಪದಕ ಗೆದ್ದರೆ, ಗುಲ್ವೀರ್‌ ಸಿಂಗ್‌ 1500 ಮೀಟರ್‌ ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆದು ಎರಡನೇ ಬೆಳ್ಳಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಭಾರತದ ವಿದ್ಯಾ ರಾಮರಾಜ್‌ಗೆ ಕಂಚು, ಗುಲ್ವೀರ್‌ ಸಿಂಗ್‌ಗೆ ಬೆಳ್ಳಿ!

ಏಷ್ಯಾ ಕ್ರೀಡಾಕೂಟದಲ್ಲಿ ಎರಡನೇ ಬೆಳ್ಳಿ ಗೆಟ್ಟ ಗುಲ್ವೀರ್‌ ಸಿಂಗ್‌. -

Profile
Ramesh Kote Sep 28, 2026 6:27 PM

ನವದೆಹಲಿ: ಪ್ರಸ್ತುತ ಜಪಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಭಾರತದ ಅಥ್ಲೀಟ್ ವಿದ್ಯಾ ರಾಮರಾಜ್ (Vithya Ramraj) ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದಿದ್ದಾರೆ. ಅತ್ಯುತ್ತಮ ವೇಗ, ಸಮಯ ನಿರ್ವಹಣೆ ಹಾಗೂ ಆತ್ಮವಿಶ್ವಾಸದೊಂದಿಗೆ ಓಡಿದ ವಿದ್ಯ, ಭಾರತದ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಮಹತ್ವದ ದಾಖಲೆ ನಿರ್ಮಿಸಿದ್ದಾರೆ.

ವಿತ್ಯಾ ರಾಮರಾಜ್ 54.75 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಇದರೊಂದಿಗೆ ದಿಗ್ಗಜ ಅಥ್ಲೀಟ್ ಪಿ.ಟಿ ಉಷಾ ಅವರು 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ನಿರ್ಮಿಸಿದ್ದ 55.42 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಉಷಾ ಅವರ ಈ ದಾಖಲೆ ಬರೋಬ್ಬರಿ 42 ವರ್ಷಗಳ ಕಾಲ ಉಳಿದಿತ್ತು.

Asian Games 2026: ಮಹಿಳೆಯರ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಇಶಾ ಸಿಂಗ್!

55 ಸೆಕೆಂಡ್‌ಗಳಿಗಿಂತ ಕಡಿಮೆ ಸಮಯದಲ್ಲಿ ಓಡಿದ ಮೊದಲ ಭಾರತೀಯ ಮಹಿಳೆ

ವಿದ್ಯಾ ಅವರ 54.75 ಸೆಕೆಂಡ್‌ಗಳ ಸಾಧನೆಯ ಮತ್ತೊಂದು ವಿಶೇಷತೆ ಎಂದರೆ, 400 ಮೀಟರ್ ಹರ್ಡಲ್ಸ್‌ನಲ್ಲಿ 55 ಸೆಕೆಂಡ್‌ಗಳಿಗಿಂತ ಕಡಿಮೆ ಸಮಯ ದಾಖಲಿಸಿದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದು ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಅತ್ಯಂತ ಮಹತ್ವದ ಮೈಲುಗಲ್ಲಾಗಿದೆ. ದಶಕಗಳ ಕಾಲ ಉಳಿದಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದ ಅವರು, ಏಷ್ಯಾ ಮಟ್ಟದ ಪ್ರಮುಖ ವೇದಿಕೆಯಲ್ಲಿ ಕಂಚಿನ ಪದಕವನ್ನೂ ತಮ್ಮದಾಗಿಸಿಕೊಂಡರು.

Asian Games: ಭಾರತ vs ಅಫ್ಘಾನಿಸ್ತಾನ ಪಂದ್ಯ ಮಳೆಗೆ ಬಲಿ, ಸೆಮಿಫೈನಲ್‌ಗೇರಿದ ಟೀಮ್‌ ಇಂಡಿಯಾ!

ಹಿಂದಿನ ಏಷ್ಯನ್ ಗೇಮ್ಸ್‌ನಲ್ಲಿಯೂ ವಿದ್ಯಾ ರಾಮರಾಜ್ ಪಿ.ಟಿ. ಉಷಾ ಅವರ ದಾಖಲೆಯನ್ನು ಮುರಿಯುವ ಹಂತಕ್ಕೆ ಬಂದಿದ್ದರು. ಹೀಟ್ಸ್‌ನಲ್ಲಿ ಅವರು 55.42 ಸೆಕೆಂಡ್‌ಗಳ ಸಮಯ ದಾಖಲಿಸಿ ಉಷಾ ಅವರ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ಈ ಬಾರಿ ತಮ್ಮ ಪ್ರದರ್ಶನವನ್ನು ಮತ್ತಷ್ಟು ಸುಧಾರಿಸಿಕೊಂಡ ವಿದ್ಯಾ, 54.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 42 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿಹಾಕಿದರು.

ಗುಲ್ವೀರ್‌ ಸಿಂಗ್‌ಗೆ ಎರಡನೇ ಬೆಳ್ಳಿ ಪದಕ

ಭಾರತದ ದೂರ ಓಟಗಾರ ಗುಲ್ವೀರ್ ಸಿಂಗ್ ಏಷ್ಯನ್ ಗೇಮ್ಸ್ 2026ರಲ್ಲಿ ಮತ್ತೊಂದು ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ. ಸೋಮವಾರ ನಡೆದಿದ್ದ ಪುರುಷರ 1500 ಮೀಟರ್ ಫೈನಲ್‌ನಲ್ಲಿ 3:36.72 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಈ ಸಮಯ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಏಷ್ಯನ್‌ ಗೇಮ್ಸ್‌; ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಆನ್ಸಿ ಸೋಜನ್

ಜಪಾನ್‌ನ ಕಜುತೊ ಇಜಾವಾ 3:36.35 ಸೆಕೆಂಡ್‌ಗಳಲ್ಲಿ ಚಿನ್ನದ ಪದಕ ಗೆದ್ದರು. ಮತ್ತೊಬ್ಬ ಜಪಾನ್ ಅಥ್ಲೀಟ್ ನಗಿಯಾ ಮೋರಿ 3:37.92 ಸೆಕೆಂಡ್‌ಗಳಲ್ಲಿ ಕಂಚಿನ ಪದಕ ಪಡೆದರು. ಗುಲ್ವೀರ್ ಕೇವಲ 0.37 ಸೆಕೆಂಡ್‌ಗಳ ಅಂತರದಲ್ಲಿ ಚಿನ್ನದಿಂದ ವಂಚಿತರಾದರು.

ಈ ಏಷ್ಯನ್ ಗೇಮ್ಸ್‌ನಲ್ಲಿ ಗುಲ್ವೀರ್‌ಗೆ ಎರಡನೇ ಬೆಳ್ಳಿ

ಈ ಬೆಳ್ಳಿ ಪದಕದೊಂದಿಗೆ ಗುಲ್ವೀರ್ ಸಿಂಗ್ ಪ್ರಸಕ್ತ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಎರಡನೇ ಪದಕ ಗೆದ್ದಿದ್ದಾರೆ. ಇದಕ್ಕೂ ಮೊದಲು ಪುರುಷರ 10,000 ಮೀಟರ್ ಓಟದಲ್ಲಿಯೂ ಬೆಳ್ಳಿ ಪದಕ ಗೆದ್ದಿದ್ದರು. ಆ ಸ್ಪರ್ಧೆಯಲ್ಲಿ ಅವರು 28:29.38 ಸೆಕೆಂಡ್‌ಗಳ ಸಮಯ ದಾಖಲಿಸಿದ್ದರು. ಹೀಗಾಗಿ ಒಂದೇ ಏಷ್ಯನ್ ಗೇಮ್ಸ್‌ನಲ್ಲಿ 10,000 ಮೀಟರ್ ಮತ್ತು 1500 ಮೀಟರ್ ಎರಡೂ ವಿಭಾಗಗಳಲ್ಲಿ ಬೆಳ್ಳಿ ಗೆದ್ದು ಗುಲ್ವೀರ್ ಗಮನ ಸೆಳೆದಿದ್ದಾರೆ.