ಐಚಿ-ನಗೋಯಾ (ಜಪಾನ್): ಇಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟ (Asian Games 2026) ಬ್ಯಾಡ್ಮಿಂಟನ್‌ನಲ್ಲಿ ಭಾರತದ ತಾರೆ ಪಿವಿ ಸಿಂಧೂ (PV Sindhu) ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಮತ್ತೊಂದೆಡೆ, ಪುರುಷರ ಸಿಂಗಲ್ಸ್‌ನಲ್ಲಿ ಯುವ ಆಟಗಾರ ಹಾಗೂ ಕನ್ನಡಿಗ ಆಯುಷ್ ಶೆಟ್ಟಿ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಿವಿ ಸಿಂಧೂ, ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ ಟೊಮೊಕಾ ಮಿಯಾಜಾಕಿ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಪದಕದ ಭರವಸೆ ಮೂಡಿಸಿದ್ದಾರೆ.
ಶನಿವಾರ ಇಚಿನೋಮಿಯಾ ಸಿಟಿ ಮುನ್ಸಿಪಲ್ ಜಿಮ್ನಾಷಿಯಂನಲ್ಲಿ ನಡೆದಿದ್ದ 41 ನಿಮಿಷಗಳಲ್ಲಿ ಮಿಯಾಜಾಕಿ ವಿರುದ್ಧ 21-9, 21-13 ಅಂತರದ ಗೆಲುವು ದಾಖಲಿಸಿದರು. ಮೊದಲ ಗೇಮ್‌ನಲ್ಲೇ ಸಿಂಧು ಆರಂಭದಿಂದಲೂ ಪ್ರಾಬಲ್ಯ ಮೆರೆದಿದ್ದು, ಕೇವಲ 18 ನಿಮಿಷಗಳಲ್ಲಿ 21-9ರಿಂದ ಗೇಮ್‌ನ್ನು ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲೂ ಸಿಂಧು ತಮ್ಮ ಹಿಡಿತವನ್ನು ಮುಂದುವರಿಸಿದರು. ಎದುರಾಳಿಗೆ ಹೆಚ್ಚಿನ ಅವಕಾಶ ನೀಡದೆ 21-13ರಿಂದ ಗೇಮ್ ಗೆದ್ದು ಪಂದ್ಯವನ್ನು 2-0 ಅಂತರದಲ್ಲಿ ಮುಗಿಸಿದರು.
Asian Games 2026: 400 ಮೀ ಓಟದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡ ಪ್ರಾಚಿ ಚೌಧರಿ!
ಇದಕ್ಕೂ ಮುನ್ನ ಸಿಂಧೂ ಎರಡನೇ ಸುತ್ತಿನಲ್ಲಿ ಚೈನೀಸ್ ತೈಪೆಯ ಚಿಯು ಪಿನ್-ಚಿಯಾನ್ ಅವರನ್ನು 21-19, 21-14 ಅಂತರದಿಂದ ಸೋಲಿಸಿ ರೌಂಡ್ ಆಫ್ 16 ತಲುಪಿದ್ದರು. ಇದೀಗ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಕನ್ನಡಿಗ ಆಯುಷ್ ಶೆಟ್ಟಿ ಹೋರಾಟ ಅಂತ್ಯ
ಪುರುಷರ ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ ಕಠಿಣ ಹೋರಾಟದ ಬಳಿಕ ಚೈನೀಸ್ ತೈಪೆಯ ಚೌ ತಿಯನ್-ಚೆನ್ ವಿರುದ್ಧ ಸೋಲು ಕಂಡರು. ಇದಕ್ಕೂ ಮುನ್ನ ಎರಡನೇ ಸುತ್ತಿನಲ್ಲಿ ಕಜಕಿಸ್ತಾನದ ಮಖ್ಸುತ್ ತಜಿಬುಲ್ಲಾಯೆವ್ ಅವರನ್ನು 21-7, 21-7 ಅಂತರದಿಂದ ಮಣಿಸಿ ರೌಂಡ್ ಆಫ್ 16 ಪ್ರವೇಶಿಸಿದ್ದರು. ಆದರೆ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಅನುಭವಿ ಚೌ ತಿಯನ್-ಚೆನ್ ಎದುರು ಆಯುಷ್ 1-2 ಅಂತರದಲ್ಲಿ ಸೋಲನುಭವಿಸಿದರು. ಈ ಮೂಲಕ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಯುಷ್ ಶೆಟ್ಟಿ ಅವರ ಅಭಿಯಾನ ಅಂತ್ಯಗೊಂಡಿದೆ.
Asian Games 2026: ಶಾಟ್ ಫುಟ್‌ನಲ್ಲಿ ಬೆಳ್ಳಿ ಪದಕ ಗೆದ್ದ ತಜಿಂದರ್‌ಪಾಲ್ ಸಿಂಗ್ ತೂರ್!
ಏಷ್ಯನ್ ಗೇಮ್ಸ್ 2026: ಕಬಡ್ಡಿಯಲ್ಲಿ ಭಾರತಕ್ಕೆ ಡಬಲ್ ಚಿನ್ನ
ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ಕಬಡ್ಡಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಮಹಿಳಾ ಮತ್ತು ಪುರುಷರ ಎರಡೂ ತಂಡಗಳು ಇರಾನ್ ವಿರುದ್ಧದ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡಿವೆ. ಶನಿವಾರ ಟೋಕೈ ಸಿಟಿಜನ್ ಜಿಮ್ನಾಷಿಯಂನಲ್ಲಿ ನಡೆದಿದ್ದ ಮಹಿಳಾ ಕಬಡ್ಡಿ ಫೈನಲ್‌ನಲ್ಲಿ ಭಾರತ 37-34 ಅಂತರದಿಂದ ಇರಾನ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಭಾರತೀಯ ಮಹಿಳಾ ತಂಡ ತನ್ನ ಏಷ್ಯನ್ ಗೇಮ್ಸ್ ಕಬಡ್ಡಿ ಚಾಂಪಿಯನ್ ಪಟ್ಟವನ್ನು ಯಶಸ್ವಿಯಾಗಿ ಉಳಿಸಿಕೊಂಡಿತು.
ಇನ್ನು ಪುರುಷರ ಫೈನಲ್‌ನಲ್ಲೂ ಭಾರತ ಮತ್ತು ಇರಾನ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಮೊದಲಾರ್ಧದಲ್ಲಿ 17-18ರಿಂದ ಹಿನ್ನಡೆಯಲ್ಲಿದ್ದ ಭಾರತ, ದ್ವಿತೀಯಾರ್ಧದಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿತು. ಅಂತಿಮವಾಗಿ 40-34 ಅಂತರದಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.