ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BWF World Championships: ಪ್ರೀ-ಕ್ವಾರ್ಟರ್‌ಫೈನಲ್ಸ್‌ಗೆ ಲಗ್ಗೆಯಿಟ್ಟ ಸಾತ್ವಿಕ್‌-ಚಿರಾಗ್‌ ಜೋಡಿ!

ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪ್ರೀ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅವರ ಎದುರಾಳಿಗಳಾದ ಅಲೆಕ್ಸಾಂಡರ್ ಡನ್ ಮತ್ತು ಆಡಮ್ ಪ್ರಿಂಗಲ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಸಾತ್ವಿಕ್–ಚಿರಾಗ್ ಜೋಡಿಗೆ ಮುಂದಿನ ಹಂತಕ್ಕೆ ನೇರ ಪ್ರವೇಶ ದೊರೆಯಿತು.

ಒಂದೂ ಪಂದ್ಯವನ್ನು ಆಡದೆ ಪ್ರೀ-ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶಿಸಿದ ಸಾತ್ವಿಕ್‌-ಚಿರಾಗ್‌.

ನವದೆಹಲಿ: ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಪ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2026ರ (BWF World Championships) ಟೂರ್ನಿಯಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ–ಚಿರಾಗ್ ಶೆಟ್ಟಿ (Satwik-Chirag) ಪುರುಷರ ಡಬಲ್ಸ್‌ನ ಪ್ರೀ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಬುಧವಾರ ನಡೆಯಬೇಕಿದ್ದ ಪಂದ್ಯದಲ್ಲಿ ಅವರ ಎದುರಾಳಿಗಳಾದ ಸ್ಕಾಟ್ಲೆಂಡ್‌ನ ಅಲೆಕ್ಸಾಂಡರ್ ಡನ್–ಆಡಮ್ ಪ್ರಿಂಗಲ್ ಜೋಡಿ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತೀಯ ಜೋಡಿಗೆ ವಾಕ್‌ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರೆಯಿತು.

ಐದನೇ ಶ್ರೇಯಾಂಕ ಪಡೆದಿರುವ ಸಾತ್ವಿಕ್–ಚಿರಾಗ್ ಜೋಡಿ ಮೊದಲ ಸುತ್ತಿನಲ್ಲಿ ಬೈ ಪಡೆದಿತ್ತು. ಇದೀಗ ಎದುರಾಳಿ ಜೋಡಿ ಪಂದ್ಯದಿಂದ ಹಿಂದೆ ಸರಿದ ಕಾರಣ, ಒಂದು ಶಟಲ್ ಕೂಡ ಆಡದೆ ನೇರವಾಗಿ ರೌಂಡ್ ಆಫ್ 16ಕ್ಕೆ ಅರ್ಹತೆ ಪಡೆದಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಕೂಡ ಈ ಬೆಳವಣಿಗೆಯನ್ನು ಸಾಮಾಜಿಕ ಜಾಲತಾಣದ ಮೂಲಕ ದೃಢಪಡಿಸಿದೆ.

“ವಾಕ್‌ಓವರ್ ಪಡೆದ ಹಿನ್ನೆಲೆಯಲ್ಲಿ ಭಾರತೀಯ ಜೋಡಿ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್ 2026ರ ಟೂರ್ನಿಯ ಪ್ರೀ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ,” ಎಂದು ಬಿಎಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

BWF World Championships: ವಿಶ್ವದ ನಂ 1 ಶಿ ಯುಕಿಗೆ ಚಳ್ಳೆ ಹಣ್ಣು ತಿನ್ನಿಸಿದ ಕನ್ನಡಿಗ ಆಯುಷ್‌ ಶೆಟ್ಟಿ!

ಟ್ರೀಸಾ–ಗಾಯತ್ರಿ ಜೋಡಿ ಪ್ರೀ-ಕ್ವಾರ್ಟರ್‌ಗೆ; ಲಕ್ಷ್ಯ ಸೇನ್, ಉನ್ನತಿ ಹೂಡಾಗೆ ಮುನ್ನಡೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2026ರ ಟೂರ್ನಿಯಲ್ಲಿ ಟ್ರೀಸಾ ಜಾಲಿ–ಗಾಯತ್ರಿ ಗೋಪಿಚಂದ್ ಜೋಡಿಯೂ ಮಹಿಳಾ ಡಬಲ್ಸ್‌ನ ಪ್ರೀ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. 39ನೇ ಶ್ರೇಯಾಂಕದ ಭಾರತೀಯ ಜೋಡಿ ರೌಂಡ್ ಆಫ್ 32 ಪಂದ್ಯದಲ್ಲಿ ಅಮೆರಿಕದ ಲಾರೆನ್ ಲ್ಯಾಮ್–ಅಲಿಸನ್ ಲೀ ಜೋಡಿಯನ್ನು 21-15, 21-12 ನೇರ ಗೇಮ್‌ಗಳಿಂದ ಸೋಲಿಸಿತು.

ತನಿಷಾ–ಧ್ರುವ್ ಕೂಡ ಮುನ್ನಡೆ

ಮಿಶ್ರ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ–ಧ್ರುವ್ ಕಪಿಲಾ ಜೋಡಿಯೂ ಅಂತಿಮ 16ರ ಹಂತಕ್ಕೆ ಪ್ರವೇಶಿಸಿದೆ. ಭಾರತೀಯ ಜೋಡಿ ಮಕಾವ್‌ನ ಲಿಯಾಂಗ್ ಐಯೊಕ್ ಚೋನ್–ಎನ್‌ಗ್ ವೆಂಗ್ ಚಿ ಜೋಡಿಯನ್ನು 21-11, 21-11ರಿಂದ ಮಣಿಸಿತು. ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಕೂಡ ಮುಂದಿನ ಹಂತಕ್ಕೆ ಅರ್ಹತೆ ಪಡೆದರು. ಆಸ್ಟ್ರಿಯಾದ ಕಾಲಿನ್ಸ್ ವ್ಯಾಲೆಂಟೈನ್ ಫಿಲಿಮೋನ್ ವಿರುದ್ಧ ಮೊದಲ ಗೇಮ್‌ನಲ್ಲಿ 16-21ರಿಂದ ಸೋತ ಸೇನ್, ನಂತರ ಭರ್ಜರಿ ಕಂಬ್ಯಾಕ್ ಮಾಡಿದರು. ಅವರು ಮುಂದಿನ ಎರಡು ಗೇಮ್‌ಗಳನ್ನು 21-8, 21-4 ಅಂತರದಲ್ಲಿ ಗೆದ್ದು, ಒಟ್ಟು 45 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

World Championships: ಸೋಫಿಯಾ ನೋಬೆಲ್‌ ವಿರುದ್ಧ ಗೆದ್ದ ಪಿವಿ ಸಿಂಧೂಗೆ ಶುಭಾರಂಭ!

ಉನ್ನತಿ ಹೂಡಾಗೂ ಗೆಲುವು

ಮಹಿಳಾ ಸಿಂಗಲ್ಸ್‌ನಲ್ಲಿ ಉನ್ನತಿ ಹೂಡಾ ಮ್ಯಾನ್ಮಾರ್‌ನ ಥೆಟ್ ಹ್ಟಾರ್ ತುಜಾರ್ ಅವರನ್ನು 22-20, 21-16ರಿಂದ ಸೋಲಿಸಿ ಮುಂದಿನ ಹಂತಕ್ಕೆ ಮುನ್ನಡೆದರು. ಮೊದಲ ಗೇಮ್‌ನಲ್ಲಿ ತೀವ್ರ ಪೈಪೋಟಿ ಎದುರಾದರೂ, ಉನ್ನತಿ ನಿರ್ಣಾಯಕ ಹಂತದಲ್ಲಿ ಹಿಡಿತ ಸಾಧಿಸಿ ಪಂದ್ಯವನ್ನು ಗೆದ್ದುಕೊಂಡರು.