ನವದೆಹಲಿ: ಬಹುನಿರೀಕ್ಷಿತ 2026ರ ಫಿಫಾ ವಿಶ್ವಕಪ್ (FIFA World Cup 2026) ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ, ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ವಿಶ್ವಕಪ್ ಇತಿಹಾಸದಲ್ಲಿ ಹಲವು ಸ್ಮರಣೀಯ ಮುಖಾಮುಖಿಗಳಿಗೆ ಸಾಕ್ಷಿಯಾಗಿರುವ ಇಂಗ್ಲೆಂಡ್ ವಿರುದ್ಧದ ಗೆಲುವಿನ ಬಳಿಕ, ಇದೀಗ ಅರ್ಜೆಂಟೀನಾ ಪ್ರಶಸ್ತಿಗಾಗಿ ಸ್ಪೇನ್ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್‌ನಂತೆ ಅರ್ಜೆಂಟೀನಾದೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ದೀರ್ಘ ಇತಿಹಾಸ ಹೊಂದಿರುವ ತಂಡ ಸ್ಪೇನ್ ಅಲ್ಲ. ಈ ಎರಡು ರಾಷ್ಟ್ರಗಳು ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಕೇವಲ ಒಂದೇ ಒಂದು ಬಾರಿ ಮುಖಾಮುಖಿಯಾಗಿವೆ.
ಸ್ಪೇನ್ ಎದುರು ಮುಖಾಮುಖಿ ದಾಖಲೆಯಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿರುವುದರಿಂದ ಅದು ಮೆಸ್ಸಿ ಬಳಗಕ್ಕೆ ಲಾಭವಾಗಬಹುದು. ಆದರೆ ಅರ್ಜೆಂಟೀನಾ ಮತ್ತು ಸ್ಪೇನ್ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿ ದಶಕಗಳೇ ಕಳೆದಿವೆ. ಹಾಗಾಗಿ ಈಗ ಮುಖಾಮುಖಿಯಾಗುತ್ತಿರುವ ಆಟಗಾರರು ಕೂಡ ಹುಟ್ಟಿರಲಿಲ್ಲ. ಅರ್ಜೆಂಟೀನಾ ಮುಖ್ಯ ಕೋಚ್ ಲಿಯೊನೆಲ್ ಸ್ಕಲೋನಿ ಕೂಡ ಆಗ ಇನ್ನೂ ಜನಿಸಿರಲಿಲ್ಲ. ಮತ್ತೊಂದೆಡೆ, ಸ್ಪೇನ್ ಮುಖ್ಯ ಕೋಚ್ ಲೂಯಿಸ್ ಡೆ ಲಾ ಫುಯೆಂಟೆ ಅವರಿಗೆ ಆಗ ಕೇವಲ ಐದು ವರ್ಷ ವಯಸ್ಸಾಗಿತ್ತು.
ವಿಶ್ವದಾಖಲೆಯ ಹೊಸ್ತಿಲಲ್ಲಿ ಲಿಯೋನೆಲ್ ಮೆಸ್ಸಿ; ಐತಿಹಾಸಿಕ ಸಾಧನೆಗೆ ಕ್ಷಣಗಣನೆ!
ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಅತ್ಯಂತ ದೊಡ್ಡ ಹಣಾಹಣಿಗೆ ನ್ಯೂ ಜೆರ್ಸಿಯ ಈಸ್ಟ್ ಋದರ್‌ಫೋರ್ಡ್‌ನಲ್ಲಿರುವ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದೆ. ವಿಶ್ವಕಪ್ ಇತಿಹಾಸದಲ್ಲಿ ಈ ಎರಡು ತಂಡಗಳು ಇದುವರೆಗೆ ನಾಕೌಟ್ ಹಂತದಲ್ಲಾಗಲಿ ಅಥವಾ ಫೈನಲ್‌ನಲ್ಲಾಗಲಿ ಎಂದಿಗೂ ಮುಖಾಮುಖಿಯಾಗಿಲ್ಲ. ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿ ಹಾಲಿ ಯುರೋಪಿಯನ್ ಚಾಂಪಿಯನ್ ಮತ್ತು ಹಾಲಿ ದಕ್ಷಿಣ ಅಮೆರಿಕನ್ ಚಾಂಪಿಯನ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಈ ಪಂದ್ಯದ ವಿಶೇಷತೆಯಾಗಿದೆ.
ಲ್ಯಾಮಿನ್ ಯಮಲ್ vs ಲಿಯೊನೆಲ್ ಮೆಸ್ಸಿ
ಈ ಫೈನಲ್ ಮತ್ತೊಂದು ಐತಿಹಾಸಿಕ ಕ್ಷಣಕ್ಕೂ ಸಾಕ್ಷಿಯಾಗಲಿದೆ. ಸ್ಪೇನ್‌ನ ಯುವ ತಾರೆ ಲ್ಯಾಮಿನ್ ಯಮಲ್ ಮತ್ತು ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ ಮೊದಲ ಬಾರಿ ಪರಸ್ಪರ ಎದುರಾಗಲಿದ್ದಾರೆ. 19ನೇ ವಯಸ್ಸಿನಲ್ಲೇ ಲ್ಯಾಮಿನ್ ಯಮಲ್ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆಯೇ? ಅಥವಾ ಸಾರ್ವಕಾಲಿಕ ಶ್ರೇಷ್ಠ ಆಟಗಾರರೆಂದು ಪರಿಗಣಿಸಲ್ಪಡುವ ಲಿಯೋನೆಲ್ ಮೆಸ್ಸಿ ಸತತ ಎರಡನೇ ವಿಶ್ವಕಪ್ ಜಯಿಸಿ ತಮ್ಮ ಪರಂಪರೆಯನ್ನು ಮತ್ತಷ್ಟು ಭದ್ರಪಡಿಸಲಿದ್ದಾರೆಯೇ? ಎಂಬಂತೆ ಈ ಹೈವೋಲ್ಟೇಜ್ ಪಂದ್ಯ ತೀವ್ರ ಕುತೂಹಲವನ್ನು ಕೆರಳಿಸಿದೆ.
ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್‌ಗೆ ಆಘಾತವಿಕ್ಕಿ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ
ಫಿಫಾ ವಿಶ್ವಕಪ್ ಮುಖಾಮುಖಿ ದಾಖಲೆ
ಅರ್ಜೆಂಟೀನಾ ಮತ್ತು ಸ್ಪೇನ್ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಕೇವಲ ಒಂದೇ ಬಾರಿ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತ್ತು. 1966ರ ವಿಶ್ವಕಪ್ ಟೂರ್ನಿಯಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಅರ್ಜೆಂಟೀನಾ 2-1 ಗೋಲುಗಳ ಅಂತರದಿಂದ ಸ್ಪೇನ್‌ನ್ನು ಮಣಿಸಿತ್ತು.
ಅರ್ಜೆಂಟೀನಾ ಪರ ಲೂಯಿಸ್ ಆರ್ಟೈಮ್ ಎರಡು ಗೋಲುಗಳನ್ನು ದಾಖಲಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು. ಸ್ಪೇನ್ ಪರ ಪಿರ್ರಿ ಒಂದು ಹಂತದಲ್ಲಿ ಸಮಬಲದ ಗೋಲು ಬಾರಿಸಿದರೂ, ಅಂತಿಮವಾಗಿ ತಂಡ ಸೋಲು ಅನುಭವಿಸಿತು.
ಅರ್ಜೆಂಟೀನಾ vs ಸ್ಪೇನ್ ಸಾರ್ವಕಾಲಿಕ ದಾಖಲೆ
ಸ್ಪೇನ್ ಹಾಗೂ ಅರ್ಜೆಂಟೀನಾ ತಂಡಗಳು ಅಂತಾರಾಷ್ಟ್ರೀಯ ಸ್ನೇಹಯುತ ಒಟ್ಟು 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಎರಡೂ ತಂಡಗಳು ತಲಾ 6 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಇನ್ನುಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ.