ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವದಾಖಲೆಯ ಹೊಸ್ತಿಲಲ್ಲಿ ಲಿಯೋನೆಲ್‌ ಮೆಸ್ಸಿ; ಐತಿಹಾಸಿಕ ಸಾಧನೆಗೆ ಕ್ಷಣಗಣನೆ!

2026ರ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಕಣಕ್ಕಿಳಿದರೆ ಲಿಯೋನೆಲ್‌ ಮೆಸ್ಸಿ ವಿಶ್ವಕಪ್‌ ಇತಿಹಾಸದ ಅಪರೂಪದ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ. ಗೋಲ್ಡನ್‌ ಬೂಟ್‌ ರೇಸ್‌, ಅರ್ಜೆಂಟೀನಾದ ಫೈನಲ್‌ ಪ್ರವೇಶ ಮತ್ತು ಮೆಸ್ಸಿಯ ಐತಿಹಾಸಿಕ ಸಾಧನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವದಾಖಲೆಯ ಹೊಸ್ತಿಲಲ್ಲಿ ಮೆಸ್ಸಿ; ಐತಿಹಾಸಿಕ ಸಾಧನೆಗೆ ಕ್ಷಣಗಣನೆ!

ಅರ್ಜೆಂಟೀನಾ ದಿಗ್ಗಜ ಲಿಯೋನೆಲ್‌ ಮೆಸ್ಸಿ -

Vijeth Kumar DN
Vijeth Kumar DN Jul 16, 2026 6:47 PM

2026ರ ಫಿಫಾ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಮತ್ತೊಮ್ಮೆ ಫೈನಲ್‌ ಪ್ರವೇಶಿಸಿ ಪ್ರಶಸ್ತಿ ಉಳಿಸಿಕೊಳ್ಳುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದರೊಂದಿಗೆ ಅಪರೂಪದ ವಿಶ್ವ ದಾಖಲೆಯತ್ತ ಅರ್ಜಿಂಟೀನಾ ದಿಗ್ಗಜ ಲಿಯೋನೆಲ್‌ ಮೆಸ್ಸಿ ಹತ್ತಿರವಾಗಿದ್ದಾರೆ.

ಹೈವೋಲ್ಟೇಜ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದ ಅರ್ಜೆಂಟೀನಾ ಸತತ ಎರಡನೇ ಬಾರಿ ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗೆ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ ಕೂಡ ವಿಶ್ವ ಫುಟ್ಬಾಲ್‌ನಲ್ಲಿ ಅಪರೂಪದ ದಾಖಲೆಯೊಂದನ್ನು ಸರಿಗಟ್ಟುವ ಅವಕಾಶ ಪಡೆದಿದ್ದಾರೆ.

ಇಂಗ್ಲೆಂಡ್‌ ಕದನ ಗೆದ್ದು ಫೈನಲ್‌ ತಲುಪಿದ ಅರ್ಜೆಂಟೀನಾ

ಜುಲೈ 20ರಂದು ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್‌ ವಿರುದ್ಧ ಮೆಸ್ಸಿ ಕಣಕ್ಕಿಳಿದರೆ, ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ನಲ್ಲಿ ಆಡಿದ ಆಟಗಾರರ ಪಟ್ಟಿಯಲ್ಲಿ ಬ್ರೆಜಿಲ್‌ನ ದಿಗ್ಗಜ ಕಾಫು ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಕಾಫು 1994, 1998 ಮತ್ತು 2002ರ ವಿಶ್ವಕಪ್‌ ಫೈನಲ್‌ಗಳಲ್ಲಿ ಬ್ರೆಜಿಲ್‌ ತಂಡವನ್ನು ಪ್ರತಿನಿಧಿಸಿ ಈ ಅಪರೂಪದ ಸಾಧನೆ ಮಾಡಿದ್ದರು.

ವಿಶ್ವ ಫುಟ್ಬಾಲ್‌ನ ಮತ್ತೊಬ್ಬ ದಂತಕತೆ ಪೀಲೆ ಕೂಡ 1958, 1962 ಮತ್ತು 1970ರ ವಿಶ್ವಕಪ್‌ಗಳಲ್ಲಿ ಬ್ರೆಜಿಲ್‌ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ 1962ರ ಫೈನಲ್‌ನಲ್ಲಿ ಗಾಯದ ಕಾರಣ ಅವರು ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ.

ಇದೇ ರೀತಿ ಬ್ರೆಜಿಲ್‌ನ ರೊನಾಲ್ಡೊ ನಝಾರಿಯೊ ಹಾಗೂ ಜರ್ಮನಿಯ ಲೋಥರ್‌ ಮಥಾಯಸ್‌ ಮತ್ತು ಪಿಯರ್‌ ಲಿಟ್‌ಬಾರ್ಸ್ಕಿ ಕೂಡ ಮೂರು ವಿಶ್ವಕಪ್‌ ಫೈನಲ್‌ ತಲುಪಿದ್ದರೂ, ವಿವಿಧ ಕಾರಣಗಳಿಂದ ಒಂದು ಫೈನಲ್‌ನಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.

16 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ ಫೈನಲ್‌ಗೆ ಸ್ಪೇನ್‌

ಈ ಹಿನ್ನೆಲೆಯಲ್ಲೇ 2014ರಲ್ಲಿ ಜರ್ಮನಿ ವಿರುದ್ಧ ಮತ್ತು 2022ರಲ್ಲಿ ಫ್ರಾನ್ಸ್‌ ವಿರುದ್ಧ ವಿಶ್ವಕಪ್‌ ಫೈನಲ್‌ ಆಡಿದ್ದ ಮೆಸ್ಸಿ, ಇದೀಗ 2026ರ ಫೈನಲ್‌ನಲ್ಲೂ ಕಣಕ್ಕಿಳಿದರೆ ವಿಶ್ವ ಫುಟ್ಬಾಲ್‌ ಇತಿಹಾಸದ ಮತ್ತೊಂದು ಮಹತ್ವದ ಅಧ್ಯಾಯದಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಳ್ಳಲಿದ್ದಾರೆ.

39 ವರ್ಷದ ಲಿಯೋನೆಲ್‌ ಮೆಸ್ಸಿ ಈ ವಿಶ್ವಕಪ್‌ನಲ್ಲೂ ತಮ್ಮ ಅನುಭವ ಮತ್ತು ಪ್ರತಿಭೆಯ ಮೆರಗು ಪ್ರದರ್ಶಿಸಿದ್ದಾರೆ. ಟೂರ್ನಿಯಲ್ಲಿ ಇದುವರೆಗೆ 8 ಗೋಲುಗಳನ್ನು ದಾಖಲಿಸಿರುವ ಅವರು, 4 ಗೋಲುಗಳಿಗೆ ಅಸಿಸ್ಟ್‌ ನೀಡಿ ಅರ್ಜೆಂಟೀನಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಈ ಪ್ರದರ್ಶನದಿಂದ ಗೋಲ್ಡನ್‌ ಬೂಟ್‌ ಪ್ರಶಸ್ತಿಯ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಗೋಲ್ಡನ್‌ ಬೂಟ್‌ ಸ್ಪರ್ಧೆಯಲ್ಲಿ ಮೆಸ್ಸಿಗೆ ಪೈಪೋಟಿ ನೀಡುತ್ತಿದ್ದ ಫ್ರಾನ್ಸ್‌ನ ಕಿಲಿಯಾನ್‌ ಎಂಬಾಪ್ಪೆ, ನಾರ್ವೆಯ ಎರ್ಲಿಂಗ್‌ ಹಾಲ್ಯಾಂಡ್‌ ಹಾಗೂ ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಅವರ ತಂಡಗಳು ಟೂರ್ನಿಯಿಂದ ಹೊರಬಿದ್ದಿರುವುದರಿಂದ, ವೈಯಕ್ತಿಕ ಪ್ರಶಸ್ತಿ ಗೆಲ್ಲುವ ಅವಕಾಶವೂ ಮೆಸ್ಸಿಯ ಪರವಾಗಿ ಕಾಣುತ್ತಿದೆ.

ಫಿಫಾ ವಿಶ್ವಕಪ್‌ ತಂಡಗಳ ಸಂಖ್ಯೆ 64ಕ್ಕೆ ಹೆಚ್ಚಳ ಸಾಧ್ಯತೆ!

ಆದರೆ ಮೆಸ್ಸಿ ಮತ್ತು ಅರ್ಜೆಂಟೀನಾದ ಅಂತಿಮ ಗುರಿ ವೈಯಕ್ತಿಕ ದಾಖಲೆಗಳಲ್ಲ. ಸತತ ಎರಡನೇ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದು ಫುಟ್ಬಾಲ್‌ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯುವುದೇ ತಂಡದ ಕನಸಾಗಿದೆ. ಅದಕ್ಕಾಗಿ ಫೈನಲ್‌ನಲ್ಲಿ ಬಲಿಷ್ಠ ಸ್ಪೇನ್‌ ತಂಡವನ್ನು ಮಣಿಸಬೇಕಿದೆ.

ವಿಶ್ವ ಫುಟ್ಬಾಲ್‌ ಅಭಿಮಾನಿಗಳೆಲ್ಲರ ಕಣ್ಣು ಈಗ ಈ ಮಹಾ ಫೈನಲ್‌ ಮೇಲಿದ್ದು, ಮೆಸ್ಸಿ ವಿಶ್ವದಾಖಲೆಯನ್ನು ಸರಿಗಟ್ಟುವರಾ? ಗೋಲ್ಡನ್‌ ಬೂಟ್‌ ಗೆಲ್ತಾರಾ? ಅರ್ಜೆಂಟೀನಾ ಮತ್ತೊಮ್ಮೆ ವಿಶ್ವಕಪ್‌ ಟ್ರೋಫಿಯನ್ನು ಎತ್ತಿ ಹಿಡಿಯುತ್ತಾ? ಎಂಬ ಪ್ರಶ್ನೆಗಳಿಗೆ ಫೈನಲ್‌ ಪಂದ್ಯವೇ ಉತ್ತರ ನೀಡಲಿದೆ.