ಬೆಂಗಳೂರು: ಮೂರು ಋತುಗಳು ಯುಎಇಯಲ್ಲಿ ಪ್ರೇಕ್ಷಕರನ್ನು ರಂಜಿಸಿದ ನಂತರ, ಐಕಾನಿಕ್ ಸ್ಪೋರ್ಟ್ಸ್ ಅಂಡ್ ಈವೆಂಟ್ ಲಿಮಿಟೆಡ್ ನಿರ್ವಹಿಸುವ ವರ್ಲ್ಡ್ ಟೆನಿಸ್ ಲೀಗ್ (WTL) ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿ ನಡೆಯಲಿದೆ. ಡಿಸೆಂಬರ್ 17 ರಿಂದ 20ರ ವರೆಗೆ ನಡೆಯಲಿರುವ ಈ ನಾಲ್ಕು ದಿನಗಳ ಟೂರ್ನಿಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ (KSLTA) ಮಾಲೀಕತ್ವದ ಪ್ರಖ್ಯಾತ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಮುಖ್ಯ ವೇದಿಕೆ ಸಿದ್ದವಾಗಿದೆ.
ಈ ಆವೃತ್ತಿಯು ಡಬ್ಲ್ಯುಟಿಎಲ್‌ನ ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸಲಿದ್ದು, ಡೇನಿಯಲ್ ಮೆಡ್ವೆಡೆವ್, ನಿಕ್ ಕಿರ್ಗಿಯೋಸ್, ಎಲೆನಾ ರೈಬಾಕಿನಾ, ಪೌಲಾ ಬಡೋಸಾ, ರೋಹನ್ ಬೋಪಣ್ಣ, ಗೇಲ್ ಮಾನ್ಫಿಲ್ಸ್, ಆರ್ಥರ್ ಫಿಲ್ಸ್, ಸುಮಿತ್ ನಗಲ್, ಮ್ಯಾಗ್ಡಾ ಲಿನೆಟ್ ಮತ್ತು ಮಾರ್ಟಾ ಕೋಸ್ಟ್ಯುಕ್ ಸೇರಿದಂತೆ ಟೆನಿಸ್ ಪ್ರತಿಭೆಗಳ ಬಲವಾದ ತಂಡವನ್ನು ಒಳಗೊಂಡಿದೆ. ದೇಶದಲ್ಲಿ ಟೆನಿಸ್ ಹೆಚ್ಚುತ್ತಿರುವಂತೆ ಡಬ್ಲ್ಯುಟಿಎಲ್ ಭಾರತದ ಅತ್ಯುತ್ತಮ ಪ್ರದರ್ಶನಕಾರರಾದ ಯೂಕಿ ಭಾಂಬ್ರಿ, ಅಂಕಿತಾ ರೈನಾ, ಶ್ರೀವಲ್ಲಿ ಭಾಮಿಡಿಪತಿ, ಮಾಯಾ ರೇವತಿ, ದಕ್ಷಿಣೇಶ್ವರ ಸುರೇಶ್ ಮತ್ತು ಶಿವಿಕಾ ಬರ್ಮನ್ ಅವರನ್ನು ಕೂಡ ಸೇರಿಸಿಕೊಂಡಿದೆ.
ಮೊದಲ ಬಾರಿ ಭಾರತಕ್ಕೆ ಬರುತ್ತಿರುವ ಬಗ್ಗೆ ಮಾತನಾಡಿದ ವರ್ಲ್ಡ್ ನಂ. 5 ಎಲೆನಾ ರೈಬಕಿನಾ,"ಭಾರತದ ಟೆನಿಸ್ ಸಂಸ್ಕೃತಿಯ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ. ಡಬ್ಲ್ಯುಟಿಎಲ್ ಮೂಲಕ ಇಲ್ಲಿ ನನ್ನ ಪ್ರವೇಶವಾಗುತ್ತಿರುವುದು ನನಗೆ ತುಂಬಾ ಸಂತಸ. ಈ ಲೀಗ್‌ನ ವಿನೂತನ ಸ್ವರೂಪ ಬಹಳ ರೋಚಕವಾಗಿದ್ದು, ನನ್ನ ತಂಡದೊಂದಿಗೆ ಕೋರ್ಟ್‌ನಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಲು ನಾನು ಎದುರು ನೋಡುತ್ತೇನೆ," ಎಂದರು.
ಈ ಐತಿಹಾಸಿಕ ಆವೃತ್ತಿ ಕುರಿತಾಗಿ ವರ್ಲ್ಡ್ ಟೆನಿಸ್ ಲೀಗ್‌ನ ಸಹ ಸಂಸ್ಥಾಪಕ ಮತ್ತು 12 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆದ ಮಹೇಶ್ ಭೂಪತಿ ಮಾತನಾಡಿ “ಭಾರತವು ಟೆನಿಸ್‌ನೊಂದಿಗೆ ಸದಾ ಗಾಢ ಮತ್ತು ಶಾಶ್ವತ ಸಂಬಂಧ ಹೊಂದಿದೆ. WTL ಭಾರತಕ್ಕೆ ಬರುವುದು ಆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶ. ಅಂತರರಾಷ್ಟ್ರೀಯ ಚಾಂಪಿಯನ್‌ಗಳು ಮತ್ತು ಭಾರತದ ಶ್ರೇಷ್ಠ ಪ್ರತಿಭೆಗಳು ಒಂದೇ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುವುದರಿಂದ ಮುಂದಿನ ತಲೆಮಾರಿನ ಆಟಗಾರರನ್ನು ಪ್ರೇರೇಪಿಸಲು ನಾವು ಬಯಸುತ್ತೇವೆ," ಎಂದು ತಿಳಿಸಿದ್ದಾರೆ.
Cristiano Ronaldo: ದಾಖಲೆಯ ಆರನೇ ವಿಶ್ವಕಪ್ ಆಡಲು ರೊನಾಲ್ಡೊ ಸಜ್ಜು
ಈ ಆವೃತ್ತಿಯು ಭಾರತದ ಕ್ರೀಡಾ ಪರಿಸರಕ್ಕೆ ನೀಡುವ ಮಹತ್ವದ ಬಗ್ಗೆ ಮಾತನಾಡಿದ ಐಕಾನಿಕ್ ಸ್ಪೋರ್ಟ್ಸ್ ಅಂಡ್ ಈವೆಂಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣನ್ ಕನನ್, "ಭಾರತದ ಕ್ರೀಡಾ ಪರ್ಯಾಯವನ್ನು ಮತ್ತೊಂದು ಹಂತಕ್ಕೆ ಏರಿಸುವುದು ನಮ್ಮ ಗುರಿ. WTL ಮೂಲಕ ವಿಶ್ವ ಮಟ್ಟದ ಟೂರ್ನಿಯನ್ನಾಡಿಸುವ ನಮ್ಮ ಸಾಮರ್ಥ್ಯವನ್ನು ತೋರಿಸುವ ಜೊತೆಗೆ ನಮ್ಮದೇ ಆಟಗಾರರಿಗೆ ಅತಾರಾಷ್ಟ್ರೀಯ ಆಟಗಾರರ ಜೊತೆ ಆಡುವ ಅವಕಾಶ ಕಲ್ಪಿಸುತ್ತಿದ್ದೇವೆ. ಕ್ರೀಡೆ, ಸಂಸ್ಕೃತಿ, ಮನರಂಜನೆ ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಅನುಭವ ಒದಗಿಸುವುದೇ ನಮ್ಮ ಆಶಯ." ಎಂದಿದ್ದಾರೆ.
ಭಾರತದಲ್ಲಿ ಮೊದಲ ಬಾರಿ ನಡೆಯುತ್ತಿರುವ ವರ್ಲ್ಡ್ ಟೆನಿಸ್ ಲೀಗ್ ಟೂರ್ನಿಯು ಕ್ರೀಡೆಯ ಮೂಲಕ ವಿಭಿನ್ನ ಪ್ರೇಕ್ಷಕರನ್ನು ಒಂದೇ ವೇದಿಕೆಗೆ ತರಲು ಸಜ್ಜಾಗಿದೆ.