ಮೈದಾನದ ವಿಡಿಯೊ ಹಂಚಿಕೊಂಡ ಪಾಕ್ ಕ್ರಿಕೆಟ್ ಮಂಡಳಿ
ಜನವರಿ 31ರೊಳಗೆ ಸ್ಟೇಡಿಯಂಗಳ ನವೀಕರಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭರವಸೆ ನೀಡಿತ್ತು. ಆದರೆ ಈಗ ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ.
ಕರಾಚಿ: ಚಾಂಪಿಯನ್ಸ್ ಟ್ರೋಫಿ(Champions Trophy 2025) ಪಂದ್ಯಾವಳಿ ನಡೆಯುವ ಪಾಕಿಸ್ತಾನ ಕ್ರಿಕೆಟ್ ಸ್ಟೇಡಿಯಂಗಳು ಇನ್ನೂ ಸಿದ್ಧಗೊಂಡಿಲ್ಲ ಎಂಬ ವರದಿಗಳ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಟೇಡಿಯಂ ನವೀಕರಣದ ವಿಡಿಯೊವೊಂದನ್ನು ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಆದರೆ ಈ ವಿಡಿಯೊ ನೋಡಿದ ಬಳಿಕ ಪಂದ್ಯಾವಳಿ ಆರಂಭಕ್ಕೂ ಮುನ್ನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದು ಅಸಾಧ್ಯ ಎಂಬುದು ಕಂಡುಬಂದಿದೆ.
ಜನವರಿ 31ರೊಳಗೆ ಸ್ಟೇಡಿಯಂಗಳ ನವೀಕರಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭರವಸೆ ನೀಡಿತ್ತು. ಆದರೆ ಈಗ ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಪಾಕಿಸ್ತಾನವು ಫೆಬ್ರವರಿ 08 ರಿಂದ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತ್ರಿ-ರಾಷ್ಟ್ರ ಏಕದಿನ ಸರಣಿಯನ್ನು ಆಡಲು ನಿರ್ಧರಿಸಿದೆ. ಆದರೆ, ಕೆಲಸದ ಪ್ರಗತಿ ನೋಡುವಾಗ ಪಂದ್ಯ ನಡೆಯುವುದು ಅನುಮಾನ ಎನ್ನುವಂತಿದೆ.
'ಅದ್ಭುತವಾದ ಹೊಸ ರೂಪದ ಗಡಾಫಿ ಕ್ರೀಡಾಂಗಣವನ್ನು ಅನಾವರಣಗೊಳಿಸಲಾಗುತ್ತಿದೆ! ದೀಪಗಳ ಕೆಳಗೆ, ಇದು ನೋಡಬೇಕಾದ ದೃಶ್ಯವಾಗಿದೆ! ಈ ರುದ್ರರಮಣೀಯ ನೋಟವನ್ನು ನೋಡಿದ ನಂತರ ನಿಮ್ಮ ಉತ್ಸಾಹವನ್ನು ವಿವರಿಸಲು ಅಸಾಧ್ಯ. ಚಾಂಪಿಯನ್ಸ್ ಟ್ರೋಫಿಗಾಗಿ ಅಭಿಮಾನಿಗಳು, ಅಧಿಕಾರಿಗಳು ಮತ್ತು ತಂಡಗಳನ್ನು ಸ್ವಾಗತಿಸಲು ನಾವು ಕಾಯಲು ಸಾಧ್ಯವಿಲ್ಲ' ಎಂದು ಪಿಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಬರೆದು ವಿಡಿಯೊವನ್ನು ಹಂಚಿಕೊಂಡಿದೆ.
Unveiling the stunning new-look Gaddafi Stadium! Under the lights, it's a sight to behold! 🏟️✨
— Pakistan Cricket (@TheRealPCB) January 30, 2025
ONE WORD to describe your excitement after seeing this breathtaking view? 👇
We can't wait to welcome fans, officials and teams for the tri-nation series & #ChampionsTrophy 🏆@ICC… pic.twitter.com/fsr3WoYI03
'ಎಲ್ಲವೂ ನಿಯಂತ್ರಣದಲ್ಲಿದೆ ಮತ್ತು 31 ರ ವೇಳೆಗೆ ಕ್ರೀಡಾಂಗಣ ಸಿದ್ಧವಾಗಲಿದೆ' ಎಂದು ಪಿಸಿಬಿಯ ನಿರ್ದೇಶಕ ಬಿಲಾಲ್ ಚೌಹಾಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.