ನವದೆಹಲಿ: ಏಕದಿನ ವಿಶ್ವಕಪ್ ಭಾರತ ತಂಡದ ಆಟಗಾರ್ತಿಯರು(team india women world cup) ಬುಧವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಲೋಕಕಲ್ಯಾಣ ಮಾರ್ಗದ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಪ್ರಧಾನಿ ಮೋದಿ, ಗಾಲಿಕುರ್ಚಿಯಲ್ಲಿ ಕುಳಿತಿದ್ದ ಪ್ರತಿಕಾ ರಾವಲ್‌ಗೆ ಆಹಾರ ಬಡಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟಗಾರ್ತಿಯರು ಪ್ರಧಾನಿ ಸುತ್ತ ಕುರ್ಚಿಯಲ್ಲಿ ಕುಳಿತು ಸಂವಾದವನ್ನೂ ನಡೆಸಿದರು. ಆ ಬಳಿಕ ಔತಣ ಕೂಟದಲ್ಲಿ ಪಾಲ್ಗೊಂಡರು. ಈ ವೇಳೆ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಪ್ರತಿಕಾ ರಾವಲ್ ಬಳಿ ಬಂದ ಮೋದಿ, ಯಾರೂ ನಿಮಗೆ ಏನನ್ನೂ ನೀಡುತ್ತಿಲ್ಲ. ನಿಮಗೆ ಏನು ಇಷ್ಟ? ಎಂದು ಕೇಳಿದರು. ಬಳಿಕ ಅಲ್ಲಿದ್ದ ಆಹಾರವೊಂದನ್ನು ತಂದು ಕೊಟ್ಟರು. ಆಶ್ಚರ್ಯ ಮತ್ತು ಕೃತಜ್ಞತೆಯಿಂದ, ಪ್ರತಿಕಾ "ತುಂಬಾ ಧನ್ಯವಾದಗಳು ಸರ್" ಎಂದು ಪ್ರತಿಕ್ರಿಯಿಸಿದರು. ಸದ್ಯ ಈ ಹೃದಯಸ್ಪರ್ಶಿ ವಿಡಿಯೊ ನೆಟ್ಟಿಗರ ಮನ ಗೆದ್ದಿದೆ.
ಕೊನೇ ಲೀಗ್ ಪಂದ್ಯದ ವೇಳೆ ಕಾಲಿನ ಗಾಯಕ್ಕೊಳಗಾಗಿ ವಿಶ್ವಕಪ್ನಿಂದ ಹೊರಬಿದ್ದಿದ್ದ ಆರಂಭಿಕ ಬ್ಯಾಟುಗಾರ್ತಿ ಪ್ರತಿಕಾ ರಾವಲ್, ಫೈನಲ್ ಗೆಲುವಿನ ಬಳಿಕ ಗಾಲಿಕುರ್ಚಿಯಲ್ಲೇ ಬಂದು ಭಾರತ ತಂಡದ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಟೂರ್ನಿಯಲ್ಲಿ ಭಾರತ ಪರ 2ನೇ ಸರ್ವಾಧಿಕ ರನ್ (308) ಗಳಿಸಿದ ನಡುವೆಯೂ ಪ್ರತಿಕಾಗೆ ವಿಶ್ವಕಪ್ ಗೆಲುವಿನ ಪದಕ ದೊರೆಯದಿದ್ದುದು ವಿಪರ್ಯಾಸ. ಫೈನಲ್ ಪಂದ್ಯಕ್ಕೆ ತಂಡದಲ್ಲಿರದ ಕಾರಣ ಅವರು, ಐಸಿಸಿ ನಿಯಮಾವಳಿ ಪ್ರಕಾರ ವಿನ್ನರ್ಸ್ ಮೆಡಲ್ ಪಡೆಯಲು ಅರ್ಹರಾಗಿರಲಿಲ್ಲ. ಆದರೆ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರತಿಕಾ ಪಾತ್ರವೂ ಪ್ರಮುಖವಾದುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಫಿಟ್ ಇಂಡಿಯಾ ಅಭಿಯಾನದ ಸಂದೇಶವನ್ನು ದೇಶದೆಲ್ಲೆಡೆ, ಅದರಲ್ಲೂ ಪ್ರಮುಖವಾಗಿ ಬಾಲಕಿಯರಿಗೆ ತಲುಪಿಸುವಂತೆ ಪ್ರಧಾನಿ, ಆಟಗಾರ್ತಿಯರನ್ನು ಕೇಳಿಕೊಂಡರು. ಈ ವೇಳೆ 2017ರ ವಿಶ್ವಕಪ್ನಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಬಳಿಕ ಪ್ರಧಾನಿ ಮೋದಿ ಅವರನ್ನು ಟ್ರೋಫಿ ರಹಿತವಾಗಿ ಭೇಟಿಯಾಗಿದ್ದ ಕ್ಷಣವನ್ನು ನಾಯಕಿ ಹರ್ಮಾನ್ಪ್ರೀತ್ ಕೌರ್ ಮೆಲುಕು ಹಾಕಿದರು.
ಭಾರತ ತಂಡದ ಆಟಗಾರ್ತಿಯರು ಗುರುವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu) ಅವರನ್ನು ಭೇಟಿಯಾದರು. ಈ ವೇಳೆ ಎಲ್ಲ ಆಟಗಾರ್ತಿಯರ ಸಹಿಯನ್ನು ಒಳಗೊಂಡ ತಂಡದ ನೀಲಿ ಜೆರ್ಸಿಯನ್ನೂ ಮುರ್ಮು ಅವರಿಗೆ ಉಡುಗೊರೆ ನೀಡಲಾಯಿತು.
ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನ.2ರಂದು ನಡೆದ ಫೈನಲ್ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ 52 ರನ್ ಭರ್ಜರಿ ಗೆಲುವು ಸಾಧಿಸಿತ್ತು. 3 ಬಾರಿ ಏಕದಿನ ವಿಶ್ವಕಪ್ ಫೈನಲ್‌ಗೇರಿದ್ದ ಭಾರತ ಚೊಚ್ಚಲ ಕಿರೀಟ ತನ್ನದಾಗಿಸಿಕೊಂಡರೆ, ದಕ್ಷಿಣ ಆಫ್ರಿಕಾದ ಚೊಚ್ಚಲ ಕಪ್ ಗೆಲ್ಲುವ ಕನಸು ಭಗ್ನಗೊಂಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ 7 ವಿಕೆಟ್ ನಷ್ಟದಲ್ಲಿ 298 ರನ್ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್ ಅಮೋಘ ಆಟದ ಹೊರತಾಗಿಯೂ ದ.ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತ್ತು.
ಇದನ್ನೂ ಓದಿ ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನದ ವಿವರ!
ವಿಶ್ವಕಪ್ ವಿಜೇತ ತಂಡಕ್ಕೆ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಕಾರನ್ನು ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ನೀಡಲಾಗುವುದು ಎಂದು ಟಾಟಾ ಮೋಟಾರ್ಸ್ ಗುರುವಾರ ಪ್ರಕಟನೆಯಲ್ಲಿ ತಿಳಿಸಿದೆ.