ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿನ್ನಸ್ವಾಮಿಯಲ್ಲಿ ಪಂದ್ಯ ಆಡಲು ಆರ್‌ಸಿಬಿ ಬಹುತೇಕ ಒಪ್ಪಿಗೆ?

IPL 2026: ಇತ್ತೀಚೆಗೆ ರಾಜ್ಯ ಸರ್ಕಾರವು ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಗೆ ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ ಆರ್‌ಸಿಬಿಯು ಕೆಲ ಕಾರಣಗಳಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುತ್ತಿತ್ತು.

M Chinnaswamy Stadium IPL

ಬೆಂಗಳೂರು, ಜ.28: ರಾಯಲ್ ಚಾಲೆಂಜರ್ಸ್‌ ಬೆಂಗಳೂರು(RCB) ತಂಡದ ಅಭಿಮಾನಿಗಳ ಪಾಲಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಫ್ರಾಂಚೈಸಿಯು ಈ ಬಾರಿ ಐಪಿಎಲ್‌(IPL 2026)ನಲ್ಲಿ ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣ(M Chinnaswamy Stadium)ದಲ್ಲೇ ಆಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಂದೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ ಜೂನ್‌ನಲ್ಲಿ ನಡೆದ ಭೀಕರ ಕಾಲ್ತುಳಿತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಮುಖ ಪಂದ್ಯ, ಟೂರ್ನಿಗಳನ್ನು ಸ್ಥಗಿತಗೊಳಿಸಲಾಗಿತ್ತು.

ಇತ್ತೀಚೆಗೆ ರಾಜ್ಯ ಸರ್ಕಾರವು ಚಿನ್ನಸ್ವಾಮಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಗೆ ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ ಆರ್‌ಸಿಬಿಯು ಕೆಲ ಕಾರಣಗಳಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುತ್ತಿತ್ತು. ಇದೀಗ ಆರ್‌ಸಿಬಿ ತನ್ನ ಪಂದ್ಯಗಳನ್ನು ತವರು ಮೈದಾನದಲ್ಲೇ ಆಡಲು ಸಿದ್ಧ ಎನ್ನಲಾಗಿದೆ.

ತವರು ಕ್ರೀಡಾಂಗಣ ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸಿಗಳಿಗೆ ಬಿಸಿಸಿಐ ಜ.27ರ ಗಡುವು ನೀಡಿತ್ತು. ಅದರಂತೆ ಆರ್‌ಸಿಬಿ ವ್ಯವಸ್ಥಾಪಕ ಮಂಡಳಿ, ತನ್ನ ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡುವುದಾಗಿ ಹೇಳಿದೆ ಎಂದು ತಿಳಿದುಬಂದಿದೆ. ಇಂದು ಅಥವಾ ನಾಳೆ(ಗುರುವಾರ) ಸರ್ಕಾರದ ಜತೆಗೆ ಆರ್‌ಸಿಬಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದು, ನ್ಯಾ.ಕುನ್ಹಾ ವರದಿಯ ಬಗ್ಗೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ. ಚರ್ಚೆಯ ಬಳಿಕ ಆರ್​​ಸಿಬಿಯಿಂದ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ನ್ಯಾ.ಮೈಕಲ್‌ ಕುನ್ಹಾ ಸಮಿತಿಯ ವರದಿಯಲ್ಲಿರುವ ಕೆಲ ಅಂಶಗಳನ್ನು ಫ್ರಾಂಚೈಸಿ ಒಪ್ಪಿಲ್ಲ ಎನ್ನಲಾಗುತ್ತಿದೆ. ಇದೇ ವಿಚಾರದಲ್ಲಿ ಹಲವು ಸುತ್ತಿನ ಸಭೆ ಕೂಡಾ ನಡೆದಿದೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.

ಜನಸಂದಣಿ ನಿರ್ವಹಣೆಗೆ ಚಿನ್ನಸ್ವಾಮಿಯಲ್ಲಿ ಎಐ ಕ್ಯಾಮೆರಾ ಅಳವಡಿಸಲು ಆರ್‌ಸಿಬಿ ಸಜ್ಜು

ಮೂಲಗಳ ಪ್ರಕಾರ, ಕ್ರೀಡಾಂಗಣಕ್ಕೆ ಸಂಬಂಧಿಸಿದ ವ್ಯವಸ್ಥೆಗಳಿಗೆ ಮಾತ್ರವಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಿನ ರಸ್ತೆಯ ಜವಾಬ್ದಾರಿಯನ್ನು ಆರ್‌ಸಿಬಿ ವಹಿಸಿಕೊಳ್ಳುವಂತೆ ಕೇಳಲಾಗಿದೆ. ಜೊತೆಗೆ ಹೆಚ್ಚುವರಿ ಅನುಸರಣಾ ಕ್ರಮಗಳನ್ನೂ ಸಹ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಡಿಜೆ ಬಳಕೆಯ ಮೇಲಿನ ನಿರ್ಬಂಧಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಗ್ನಿಶಾಮಕ ದಳದ ಘಟಕವನ್ನು ಸ್ಥಾಪಿಸುವ ನಿಬಂಧನೆಗಳು ಸೇರಿವೆ ಇದಕ್ಕೆ ಫ್ರಾಂಚೈಸಿ ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಆರ್‌ಸಿಬಿ ಹಾಗೂ ಸರ್ಕಾರ ಒಮ್ಮತದ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.