ಜೈಪುರ: ಸ್ವತ್ಛ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಸಿಬಿ ಪ್ರತಿ ವರ್ಷದಂತೆ ಈ ಬಾರಿಯೂ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇಂದು(ಭಾನುವಾರ) ರಾಜಸ್ಥಾನ್ ವಿರುದ್ಧದ ಅಪರಾಹ್ನ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಕ್ರಿಕೆಟಿಗರು ಹಸಿರು ಉಡುಗೆಯಲ್ಲಿ ಆಡಲಿಳಿಯಲಿದ್ದಾರೆ. 2011ರಿಂದ ಆರ್‌ಸಿಬಿ ಈ ಅಭಿಯಾನವನ್ನು ನಡೆಸಿಕೊಂಡು ಬಂದಿದೆ. ಈ ಹಸಿರು ಜೆರ್ಸಿ ಶೇ.100 ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಈ ಜೆರ್ಸಿಯ ಬಹು ಭಾಗ ಹಸಿರಿನಿಂದ ಕೂಡಿದ್ದು, ಶರ್ಟ್‌ನ ಮೇಲ್ಭಾಗ ನೀಲಿ ಬಣ್ಣವನ್ನು ಹೊಂದಿದೆ.
ಸಾಮಾನ್ಯವಾಗಿ ತವರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಲ್ಲಿ ಹಗಲು ವೇಳೆ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಕ್ರಿಕೆಟಿಗರು ಹಸಿರು ಜೆರ್ಸಿ ಧರಿಸುವುದು ವಾಡಿಕೆ. ಆದರೆ ಕೋವಿಡ್ ಕಾರಣದಿಂದ 2021ರಿಂದ ಮೊದಲ್ಗೊಂಡು 2023ರ ತನಕ ಸೀಮಿತ ತಾಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆದುದರಿಂದ ಈ ಸಂಪ್ರದಾಯವನ್ನು ಪಾಲಿಸಲಾಗಲಿಲ್ಲ. 2023ರಲ್ಲಿ ಮತ್ತೆ ಬೆಂಗಳೂರು ಪಂದ್ಯದಲ್ಲೇ ಹಸಿರು ಉಡುಗೆ ಧರಿಸಿ ಆಡಿತು. ಕಳೆದ ಬಾರಿ ತವರಿನಾಚೆಯ ಪಂದ್ಯದಲ್ಲಿ ಆಡಿತ್ತು. ಈ ಬಾರಿಯೂ ತವರಿನಾಚೆ ಆಡುತ್ತಿದೆ.
ಅನ್‌ಲಕ್ಕಿ
ಆರ್‌ಸಿಬಿಗೆ ಹಸಿರು ಜೆರ್ಸಿ ಅಷ್ಟು ಅದೃಷ್ಟ ತಂದುಕೊಟ್ಟಿಲ್ಲ. ಹಸಿರು ಜೆರ್ಸಿಯಲ್ಲಿ ಆಡಿದಾಗ ಸೋತಿದ್ದೇ ಹೆಚ್ಚು. ಈ ವರೆಗೂ 14 ಪಂದ್ಯಗಳನ್ನಾಡಿ 9 ಪಂದ್ಯಗಳಲ್ಲಿ ಸೋಲು ಕಂಡಿದೆ. ಗೆದ್ದಿದ್ದು 4 ಪಂದ್ಯ ಮಾತ್ರ. ಒಂದು ಪಂದ್ಯ ರದ್ದುಗೊಂಡಿದೆ.
ಕಳೆದ ಬಾರಿ ಗೋ ಗ್ರೀನ್ ಇನಿಶಿಯೇಟಿವ್‌ನ ಭಾಗವಾಗಿ ಬೆಂಗಳೂರಿನ ಮೂರು ಕೆರೆಗಳನ್ನು ಪುನರುಜ್ಜೀವಗೊಳಿಸಿತ್ತು. ಈ ಮೂಲಕ ಬೆಂಗಳೂರನ್ನು ಆವರಿಸಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಕೊಡುಗೆ ಸಲ್ಲಿಸಿತ್ತು. ಕಣ್ಣೂರು ಕೆರೆ, ಇಟ್ಟಗಲ್‌ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಗಳ ಪುನಶ್ಚೇತನ ಕಾರ್ಯ ಮಾಡಿತ್ತು.
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ) ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಯುಧ್ವಿರ್ ಸಿಂಗ್ ಚರಕ್, ಸಂದೀಪ್ ಶರ್ಮಾ.
ಇದನ್ನೂ ಓದಿ IPL 2025: ಶತಕದ ಬಳಿಕ ಅಭಿಷೇಕ್ ಶರ್ಮಾ ಪ್ರದರ್ಶಿಸಿದ ಚೀಟಿಯಲ್ಲಿ ಬರೆದಿದ್ದೇನು?
ಆರ್‌ಸಿಬಿ: ಫಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.