ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS: ತವರಿನಲ್ಲಿ ಹ್ಯಾಟ್ರಿಕ್‌ ಸೋಲು ಕಂಡ ಆರ್‌ಸಿಬಿ

ಉಭಯ ತಂಡಗಳು ಸುಮಾರು 2 ಸಾವಿರ ಕಿಲೋಮೀಟರ್​ ದೂರದ ಚಂಡೀಗಢಕ್ಕೆ 3 ಗಂಟೆಗೂ ಅಧಿಕ ಸಮಯದ ವಿಮಾನ ಪ್ರಯಾಣ ಮಾಡಿ ತೆರಳಲಿದ್ದು, ಭಾನುವಾರ ಮಧ್ಯಾಹ್ನ ಮುಲ್ಲನ್​ಪುರದಲ್ಲಿ ಮತ್ತೆ ಪಂದ್ಯ ಆಡಲಿವೆ. ಅಂದರೆ 32 ಗಂಟೆಗಳ ಅಂತರದಲ್ಲೇ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಲಿವೆ.

ತವರಿನಲ್ಲಿ ಹ್ಯಾಟ್ರಿಕ್‌ ಸೋಲು ಕಂಡ ಆರ್‌ಸಿಬಿ

Profile Abhilash BC Apr 19, 2025 12:16 AM

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಳೆ ಪೀಡಿತ ಕದನದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನ ತೋರಿದ ಪಂಜಾಬ್‌ ಕಿಂಗ್ಸ್‌ ತಂಡ, ಆತಿಥೇಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದೆ. ಇದು ಆರ್‌ಸಿಬಿಗೆ ತವರಿನಲ್ಲಿ ಎದುರಾದ ಹ್ಯಾಟ್ರಿಕ್‌ ಸೋಲಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಮಳೆಯಿಂದ 14 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಟಿಮ್‌ ಡೇವಿಡ್‌ ಅವರ ಅಜೇಯ ಅರ್ಧಶತಕದ ನೆರವಿನಿಂದ 9 ವಿಕೆಟ್‌ಗೆ 95 ರನ್‌ ಬಾರಿಸಿತು. ಜಾವಾಬಿತ್ತ ಪಂಜಾಬ್‌ ಕಿಂಗ್ಸ್‌ ಹಲವು ಏರಿಳಿತದ ಮಧ್ಯೆಯೂ 12.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 98 ರನ್‌ ಬಾರಿಸಿ ಗೆಲುವಿನ ನಿಟ್ಟುಸಿರು ಬಿಟ್ಟಿತು.

ಚೇಸಿಂಗ್‌ ವೇಳೆ ಪಂಜಾಬ್‌ ಕೂಡ ಆರ್‌ಸಿಯಂತೆ ಆರಂಭಿಕ ಆಘಾತಕ್ಕೆ ಸಿಲುಕಿತು. ಪ್ರಿಯಾಂಶ್ ಆರ್ಯ(16) ಮತ್ತು ಪ್ರಭ್‌ಶಿಮ್ರಾನ್‌ ಸಿಂಗ್‌(13) ವಿಕೆಟ್‌ ಬೇಗನೆ ಕಳೆದುಕೊಂಡಿತು. ಆರಂಭಿಕರಿಬ್ಬರ ಕ್ಯಾಚ್‌ ಟಿಮ್‌ ಡೇವಿಡ್‌ ಹಿಡಿದರು. ಆ ಬಳಿಕ ಬಂದ ನಾಯಕ ಶ್ರೇಯಸ್‌ ಅಯ್ಯರ್‌ 7 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಅಯ್ಯರ್‌ ವಿಕೆಟ್‌ ಬಿದ್ದ ಒಂದು ರನ್‌ ಅಂತರದಲ್ಲಿ ಜೋಶ್‌ ಇಂಗ್ಲಿಸ್‌(14) ವಿಕೆಟ್‌ ಕೂಡ ಬಿತ್ತು. ಅಂತಿಮವಾಗಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ನೆಹಾಲ್‌ ವಧೇರಾ ತಲಾ ಮೂರು ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ ಅಜೇಯ 33 ರನ್‌ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಆರಂಭಿಕ ಆಘಾತ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ಆರಂಭಿಕ ಆಘಾತ ಎದುರಿಸಿತು. ಅರ್ಶ್‌ದೀಪ್‌ ಸಿಂಗ್‌ ಎಸೆದ ಇನಿಂಗ್ಸ್‌ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಫಿಲ್‌ ಸಾಲ್ಟ್‌ ಅಬ್ಬರ ಈ ಬೌಂಡರಿಗಷ್ಟೇ ಸೀಮಿತವಾಯಿತು. ಮೂರನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತು ವಿಕೆಟ್‌ ಕಳೆದುಕೊಂಡರು. ಇದರ ಬೆನ್ನಲ್ಲೇ ವಿರಾಟ್‌ ಕೊಹ್ಲಿ(1) ಕೂಡ ವಿಕೆಟ್‌ ಕಳೆದುಕೊಂಡು ಮತ್ತೊಮ್ಮೆ ತವರಿನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ವಿರಾಟ್‌ ಕೊಹ್ಲಿಯ ವಿಕೆಟ್‌ ಪಡೆಯುತ್ತಿದ್ದಂತೆ ಅರ್ಷದೀಪ್​ ಸಿಂಗ್(85) ಅವರು ಪೀಯುಷ್​ ಚಾವ್ಲಾ (84) ಹಿಂದಿಕ್ಕಿ​ ಪಂಜಾಬ್​ ಕಿಂಗ್ಸ್​ ಪರ ಸರ್ವಾಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು.

ಪಟೀದಾರ್‌ 1 ಸಾವಿರ ರನ್‌ ಸಾಧನೆ

ನಾಯಕ ರಜತ್​ ಪಾಟೀದಾರ್​ 15 ರನ್‌ ಗಳಿಸುತ್ತಿದ್ದಂತೆ, ಆರ್​ಸಿಬಿ ಪರ ಸಾವಿರ ರನ್​ ಗಳಿಸಿದ 3ನೇ ಭಾರತೀಯ ಆಟಗಾರ ಎನಿಸಿಕೊಂಡರು. ಕೊಹ್ಲಿ, ಪಡಿಕ್ಕಲ್​ ಮೊದಲಿಬ್ಬರು. ಒಂದೆಡೆ ಸಹ ಆಟಗಾರರ ವಿಕೆಟ್‌ ಬೀಳುತ್ತಿದ್ದರೂ ಸಣ್ಣ ಹೋರಾಟ ನಡೆಸಿದ ಪಾಟೀದಾರ್‌ 22 ರನ್‌ ಬಾರಿಸಿದರು. ತಂಡದ ಆಪತ್ಭಾಂದವ ಜಿತೇಶ್‌ ಶರ್ಮಾ(2), ಲಿಯಾಮ್‌ ಲಿವಿಂಗ್‌ಸ್ಟೋನ್‌(4), ಕೃಣಾಲ್‌ ಪಾಂಡ್ಯ(1) ಒಂದಂಕಿಗೆ ಆಟ ಮುಗಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು.

ಟಿಮ್‌ ಡೇವಿಡ್‌ ಅರ್ಧಶತಕ

ಇನ್ನೇನು ತಂಡ 50ರ ಒಳಗೆ ಗಂಟುಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ, ಅಂತಿಮ ಹಂತದಲ್ಲಿ ಏಕಾಂಗಿಯಾಗಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಟಿಮ್‌ ಡೇವಿಡ್‌ ಅಜೇಯ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 90ರ ಗಡಿ ದಾಟಿಸಿದರು. 26 ಎಸೆತ ಎದುರಿಸಿದ ಡೇವಿಡ್‌ 3 ಸೊಗಸಾದ ಸಿಕ್ಸರ್‌ ಮತ್ತು 5 ಬೌಂಡರಿ ನೆರವಿನಿಂದ ಭರ್ತಿ 50 ರನ್‌ ಬಾರಿಸಿದರು. ತಂಡದ ಪರ ಅವರದ್ದೇ ಹೆಚ್ಚಿನ ಗಳಿಕೆ. ಪಂಜಾಬ್‌ ಪರ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ಅರ್ಶ್‌ದೀಪ್‌ ಸಿಂಗ್‌(23 ಕ್ಕೆ 2), ಯಜುವೇಂದ್ರ ಚಹಲ್‌(11 ಕ್ಕೆ 2), ಹರ್‌ಪ್ರೀತ್‌ ಬ್ರಾರ್‌(25 ಕ್ಕೆ 2) ಮತ್ತು ಮಾರ್ಕೋ ಜಾನ್ಸೆನ್‌(10 ಕ್ಕೆ 2) ವಿಕೆಟ್‌ ಕಿತ್ತು ಮಿಂಚಿದರು.

ಮನೋಜ್‌ ಭಾಂಡಗೆ ವಿಫಲ

ಚೊಚ್ಚಲ ಐಪಿಎಲ್‌ ಪಂದ್ಯವನ್ನಾಡಿದ ಕನ್ನಡಿಗ ಮನೋಜ್‌ ಭಾಂಡಗೆ ತವರು ಮೈದಾನದಲ್ಲಿ ನಿರಾಸೆ ಎದುರಿಸಿದರು. 4 ಎಸೆತ ಎದುರಿಸಿ ಕೇವಲ ಒಂದು ರನ್‌ಗೆ ವಿಕೆಟ್‌ ಕಳೆದುಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು.

32 ಗಂಟೆಗಳ ಅಂತರದಲ್ಲಿ ಮತ್ತೆ ಮುಖಾಮುಖಿ

ಉಭಯ ತಂಡಗಳು ಸುಮಾರು 2 ಸಾವಿರ ಕಿಲೋಮೀಟರ್​ ದೂರದ ಚಂಡೀಗಢಕ್ಕೆ 3 ಗಂಟೆಗೂ ಅಧಿಕ ಸಮಯದ ವಿಮಾನ ಪ್ರಯಾಣ ಮಾಡಿ ತೆರಳಲಿದ್ದು, ಭಾನುವಾರ ಮಧ್ಯಾಹ್ನ 3.30ರಿಂದ ಮುಲ್ಲನ್​ಪುರದಲ್ಲಿ ಮತ್ತೆ ಪಂದ್ಯ ಆಡಲಿವೆ. ಅಂದರೆ 32 ಗಂಟೆಗಳ ಅಂತರದಲ್ಲೇ ಉಭಯ ತಂಡಗಳು 2 ಬಾರಿ ಕಾದಾಡಲಿವೆ.