ದುಬೈ: ಬಹುನಿರೀಕ್ಷಿತ ಮೂರನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025 ಫೈನಲ್ ಪಂದ್ಯಕ್ಕೆ(ICC WTC Final 2025) ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಜೂನ್ 11ರಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಹರಿಣ ಪಡೆಗೆ ಇದು ಚೊಚ್ಚಲ ಫೈನಲ್ ಆಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಐಸಿಸಿ(ICC) ಬಹುಮಾನ(WTC Final 2025 Prize Money) ಮೊತ್ತವನ್ನು ಪ್ರಕಟಿಸಿದೆ.
ಜೂನ್ 11 ರಿಂದ ಪ್ರಾರಂಭವಾಗಲಿರುವ ಫೈನಲ್ ಕದನ 15ರ ವರೆಗೆ ನಡೆಯಲಿದೆ. ಜೂನ್ 16 ಮೀಸಲು ದಿನವಾಗಿದೆ. 5 ದಿನಗಳ ಆಟಕ್ಕೆ ಮಳೆ ಅಥವಾ ಇನ್ನಿತರ ಸಮಸ್ಯೆಯಿಂದ ಅಡಚಣೆಯಾಗಿ ನಷ್ಟವಾದ ಆಟವನ್ನು ಮೀಸಲು ದಿನದಲ್ಲಿ ಆಡಿಸಲಾಗುತ್ತದೆ.
ಈ ಹಿಂದಿನ ಎರಡು ಆವೃತ್ತಿಗಿಂತ ಈ ಬಾರಿ ಚಾಂಪಿಯನ್ ಮತ್ತು ರನ್ನರ್ ಅಪ್ ಆದ ತಂಡಗಳು ಭಾರೀ ನಗದು ಬಹುಮಾನ ಪಡೆಯಲಿದೆ. ಅದರಂತೆ ಫೈನಲ್‌ನಲ್ಲಿ ಗೆಲುವು ಸಾಧಿಸುವ ತಂಡಕ್ಕೆ ಒಟ್ಟು $3.6 ಮಿಲಿಯನ್ ಡಾಲರ್ ಬಹುಮಾನ ಸಿಗಲಿದೆ. ಅಂದರೆ ವಿಜೇತ ತಂಡಕ್ಕೆ ರೂ.30.88 ಕೋಟಿ ಸಿಗಲಿದೆ. ರನ್ನರ್ ಅಪ್ ತಂಡವು 18.50 ಕೋಟಿ (2.1 ಮಿಲಿಯನ್ ಡಾಲರ್) ಪಡೆದುಕೊಳ್ಳಲಿದೆ.
ಹಿಂದಿನ ಎರಡು ಆವೃತ್ತಿಗಳಲ್ಲಿ, ಒಟ್ಟು ಬಹುಮಾನದ ಮೊತ್ತ 1.6 ಮಿಲಿಯನ್ ಡಾಲರ್ ಆಗಿತ್ತು. ಆದರೆ ಈ ಬಾರಿ ರನ್ನರ್ ಅಪ್‌ಗೂ ಇದಕ್ಕಿಂತ ಅಧಿಕ ಮೊತ್ತ ಸಿಗಲಿದೆ. ಪ್ರಶಸ್ತಿ ಮೊತ್ತವನ್ನು ಐಸಿಸಿ ಅಧ್ಯಕ್ಷ ಜಯ್ ಶಾ ತಮ್ಮ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಫೈನಲ್ ಪಂದ್ಯಕ್ಕೆ ಉಭಯ ತಂಡಗಳು
ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಸ್ಯಾಮ್ ಕಾನ್ಸ್ಟನ್ಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್, ಬ್ರಾಂಡನ್ ಡೋಗೆಟ್ (ಪ್ರಯಾಣ ಮೀಸಲು).
ದಕ್ಷಿಣ ಆಫ್ರಿಕಾ: ಟೋನಿ ಜೋರ್ಜಿ, ಐಡೆನ್ ಮಾರ್ಕ್‌ರಮ್, ರಿಯನ್ ರಿಕೆಲ್ಟನ್, ಟ್ರಿಸ್ಟಿನ್ ಸ್ಟಬ್ಸ್, ತೆಂಬಾ ಬವುಮಾ(ನಾಯಕ), ಡೇವಿಡ್ ಬೆಡ್ರಿಗ್ಯಾಂ, ಕೈಲ್ ವೆರಿಯೆನ್ನೆ, ವಿಯಾನ್ ಮುಲ್ಡರ್, ಶೆನುರನ್ ಮುತ್ತುಸ್ವಾಮಿ, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸನ್, ಕಾರ್ಬಿನ್ ಬೋಷ್, ಕಗಿಸೋ ರಬಾಡ, ಲುಂಗಿ ಎಂಗಿಡಿ, ಡೇನ್ ಪ್ಯಾಟರ್‌ಸನ್.
ಇದನ್ನೂ ಓದಿ WTC Final 2025: ಐಪಿಎಲ್ ಮುಗಿಯಿತು ಇನ್ನು ಟೆಸ್ಟ್ ಕ್ರಿಕೆಟ್ ಕಾವು