ನವದೆಹಲಿ, ಜೂ.23: ನಿರೀಕ್ಷೆಯಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್(Rishabh Pant) ಅವರು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದಾರೆ. ಟ್ರೇಡಿಂಗ್ ಮೂಲಕ ಡೆಲ್ಲಿ ತಂಡದ ಸ್ಪಿನ್ನರ್ ಕುಲದೀಪ್ ಯಾದವ್(Kuldeep Yadav) ಅವರನ್ನು ಲಕ್ನೋಗೆ ಬಿಟ್ಟುಕೊಟ್ಟು ಪಂತ್ ಅವರನ್ನು ಡೆಲ್ಲಿ ತನ್ನ ತಂಡಕ್ಕೆ ಸೇರಿಸಿಕೊಂಡಿತು.
ದೆಹಲಿ ಕ್ಯಾಪಿಟಲ್ಸ್‌ಗೆ 15 ಕೋಟಿ ರೂಪಾಯಿಗಳ ಪರಿಷ್ಕೃತ ಶುಲ್ಕದಲ್ಲಿ ಪಂತ್ ಅವರನ್ನು ವ್ಯಾಪಾರ ಮಾಡಿಕೊಂಡಿತು. ಪ್ರತಿಯಾಗಿ, ಸೂಪರ್ ಜೈಂಟ್ಸ್ ಕುಲದೀಪ್ ಯಾದವ್ ಅವರ ಪ್ರಸ್ತುತ ಶುಲ್ಕ 13.50 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಐಪಿಎಲ್ ಸಂಸ್ಥೆ ಮಂಗಳವಾರ ಮಾಧ್ಯಮ ಹೇಳಿಕೆಯ ಮೂಲಕ ಖಚಿತಪಡಿಸಿದೆ.
ಪಂತ್ ತಮ್ಮ ಐಪಿಎಲ್ ಜರ್ನಿ ಶುರು ಮಾಡಿದ್ದು ಡೆಲ್ಲಿ ತಂಡದ ಪರ. 2016 ಮತ್ತು 2024 ರ ನಡುವೆ ಒಂಬತ್ತು ಋತುಗಳನ್ನು ಅವರು ಡೆಲ್ಲಿ ಪರ ಆಡಿದ್ದರು. 111 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಡೆಲ್ಲಿ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯೂ ಅವರ ಹೆಸರಿನಲ್ಲಿದೆ. 2021 ರಿಂದ 2024 ರವರೆಗಿನ ನಾಲ್ಕು ಋತುಗಳಲ್ಲಿ 43 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
ಐಪಿಎಲ್ 2025ರ ಮಿನಿ ಹರಾಜಿನಲ್ಲಿ, ಪಂತ್ ಅವರನ್ನು ಎಲ್‌ಎಸ್‌ಜಿ ದಾಖಲೆಯ 27 ಕೋಟಿ ರೂ.ಗೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಿಡ್ ಆಗಿತ್ತು. ಆದಾಗ್ಯೂ, ವಹಿವಾಟಿನ ನಂತರ, ಅವರು 15 ಕೋಟಿ ರೂ. ಮೌಲ್ಯದ ಪರಿಷ್ಕೃತ ಒಪ್ಪಂದದ ಮೇಲೆ ಡಿಸಿಗೆ ಮರಳಿದರು.
ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಐದು ವರ್ಷಗಳ ಯಶಸ್ವಿ ಅನುಭವದ ನಂತರ ಕುಲ್ದೀಪ್ ಲಕ್ನೋ ತಂಡಕ್ಕೆ ತೆರಳುತ್ತಿದ್ದಾರೆ. 2022 ರಲ್ಲಿ ತಂಡ ಸೇರಿದಾಗಿನಿಂದ, ಅವರು 65 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಐಪಿಎಲ್‌ನ ಅತ್ಯಂತ ಬಲಿಷ್ಠ ವಿಕೆಟ್ ಟೇಕಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಭಾರತ vs ಐರ್ಲೆಂಡ್ ಟಿ20; ಮುಖಾಮುಖಿ, ರನ್, ವಿಕೆಟ್ ದಾಖಲೆ ಹೇಗಿದೆ?
ಪಂತ್ ಅವರ ಒಪ್ಪಂದವು ದೀರ್ಘಾವಧಿಯ ಹೂಡಿಕೆಯ ಉದ್ದೇಶವನ್ನು ಹೊಂದಿತ್ತು ಎಂದು LSG ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ. ಆದರೆ ಎರಡು ಕಳಪೆ ಋತುಗಳ ನಂತರ, ಜಸ್ಟಿನ್ ಲ್ಯಾಂಗರ್ ಮತ್ತು ಟಾಮ್ ಮೂಡಿ ನೇತೃತ್ವದ ತರಬೇತಿ ವ್ಯವಸ್ಥೆಯ ಬೆಂಬಲದೊಂದಿಗೆ ತಂಡದ ಆಡಳಿತವು ಪಂತ್ ಅವರೊಂದಿಗೆ ಬೇರ್ಪಡಲು ನಿರ್ಧರಿಸಿತು. ಪಂತ್ ನಾಯತ್ವದಲ್ಲಿ ಸೂಪರ್ ಜೈಂಟ್ಸ್ ತಂಡ 2025ರ ಆವೃತ್ತಿಯಲ್ಲಿ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನ, ಐಪಿಎಲ್ 2026ರಲ್ಲಿ ಕೇವಲ 4 ಗೆಲುವು ಸಾಧಿಸಿ ಕೊನೆಯ ಸ್ಥಾನಿಯಾಗಿತ್ತು.