ಬೆಂಗಳೂರಿಗೆ ಅಂತಾರಾಷ್ಟ್ರೀಯ ಎಂಎಂಎ ಕರೆತಂದ ರೋನಿನ್ ಎಫ್‌ಸಿ 3: ರಾಜಧಾನಿಯಲ್ಲಿ ದೇಶ-ವಿದೇಶಗಳ ಫೈಟರ್ಸ್ ಅಬ್ಬರ
ಸಿನ್ಹೋಯ್ ಅಡ್ವೈಸರಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಖಿಲ ಭಾರತ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಫೆಡರೇಷನ್ (ಎಐಎಂಎಂಎಎಫ್) ಸಹಯೋಗದೊಂದಿಗೆ ನಡೆದ ಈ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಭಾರತ, ನೇಪಾಳ, ರಷ್ಯಾ, ಕಜಕಿಸ್ತಾನ್ ಹಾಗೂ ಕಿರ್ಗಿಸ್ತಾನ್ ನ 146 ಕ್ರೀಡಾಪಟುಗಳು ಕಣಕ್ಕಿಳಿದಿದ್ದರು.
-
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ರೋನಿನ್ ಎಫ್ಸಿ 3 – ದಿ ಲೆಗಸಿ ಅವೇಕನ್ಸ್ ಇಂಟರ್ ನ್ಯಾಷನಲ್ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (ಎಂಎಂಎ) ಚಾಂಪಿಯನ್ ಷಿಪ್ ಅದ್ದೂರಿಯಾಗಿ ನಡೆದಿದೆ. ಜಾಗತಿಕ ಮಟ್ಟದ ಮಿಕ್ಸ್ ಡ್ ಮಾರ್ಷಲ್ ಆರ್ಟ್ಸ್ ಜೊತೆಗೆ ಭಾರತದ ಪಾರಂಪರಿಕ ಸಮರ ಕಲೆಗಳ ಸಮ್ಮಿಲನ ಈ ಬಾರಿಯ ಕೂಟಕ್ಕೆ ಸಾಕ್ಷಿಯಾಯಿತು.
ಸಿನ್ಹೋಯ್ ಅಡ್ವೈಸರಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಖಿಲ ಭಾರತ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಫೆಡರೇಷನ್ (ಎಐಎಂಎಂಎಎಫ್) ಸಹಯೋಗದೊಂದಿಗೆ ನಡೆದ ಈ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಭಾರತ, ನೇಪಾಳ, ರಷ್ಯಾ, ಕಜಕಿಸ್ತಾನ್ ಹಾಗೂ ಕಿರ್ಗಿಸ್ತಾನ್ ನ 146 ಕ್ರೀಡಾಪಟುಗಳು ಕಣಕ್ಕಿಳಿದಿದ್ದರು.
ಕ್ರೀಡಾಂಗಣ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ 6 ಪೂರ್ವಭಾವಿ ಹಾಗೂ 7 ವೃತ್ತಿಪರ ಪಂದ್ಯಗಳು ಸೇರಿದಂತೆ ಒಟ್ಟು 13 ಕಾದಾಟಗಳು ಜರುಗಿದವು.
ಇದನ್ನೂ ಓದಿ: Sony Sports Ten 4 Kannada: ಕನ್ನಡ ಚಾನೆಲ್ ಆರಂಭಿಸಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್!
ಈ ಮೂಲಕ ರಾಜ್ಯ ರಾಜಧಾನಿಯಲ್ಲಿ ಭಾರತೀಯ ಸಮರ ಕ್ರೀಡೆಗಳ (ಕಾಂಬ್ಯಾಟ್ ಸ್ಪೋರ್ಟ್ಸ್) ನವ ಅಧ್ಯಾಯವೊಂದು ಅನಾವರಣಗೊಂಡಿದೆ.
ಮುಖ್ಯ ಕಾಳಗಗಳ ಜತೆಗೆ ಅಗಸ್ತ್ಯಂ ಕಲರಿ ತಂಡದಿಂದ ನಡೆದ 45 ನಿಮಿಷಗಳ ಕಲರಿಪಯಟ್ಟು ಪ್ರದರ್ಶನ ಇಡೀ ಸಂಜೆಯ ಹೈಲೈಟ್ ಎನಿಸಿತು. ಆಧುನಿಕ ಎಂಎಂಎ ಜತೆಗೆ ಭಾರತದ ಪುರಾತನ ಸಮರ ಕಲೆಯ ಶಿಸ್ತು, ಚಲನೆ ಮತ್ತು ಶ್ರೀಮಂತ ಪರಂಪರೆಯನ್ನು ಬೆಸೆಯುವ ಪರಿಕಲ್ಪನೆ ಕ್ರೀಡಾಭಿಮಾನಿಗಳಿಂದ ಮುಕ್ತ ಪ್ರಶಂಸೆ ಪಡೆಯಿತು.
ಇದಕ್ಕೂ ಮುನ್ನ ಆಗಸ್ಟ್ 14ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ನ ದಿ ಕ್ವಾಡ್ ಬೈ ಬಿಎಲ್ಆರ್ ನಲ್ಲಿ ಭಾರತದ ಮೊದಲ ಫೈಟ್-ವೀಕ್ ಫೇಸ್-ಆಫ್ ಮತ್ತು ವೇ-ಇನ್ (ತೂಕ ಪರೀಕ್ಷೆ) ನಡೆದು ಪಂದ್ಯಾವಳಿಗೆ ರಂಗು ತುಂಬಿತ್ತು.
ಫೈಟ್ ಕಾರ್ಡ್ ನ ಪ್ರಮುಖ ಪಂದ್ಯಗಳಲ್ಲಿ ನೇಪಾಳದ ಸುಶ್ಮಿತಾ ಅವರು ಶಾಲು ಶರ್ಮಾ ವಿರುದ್ಧ, ಆಶಿಶ್ ರಾವತ್ ಅವರು ಮನೋಜ್ ರಾಮ್ಜಾಲಿ ವಿರುದ್ಧ, ಕೋಲ್ಕತ್ತಾದ ದೀಪಾಂಜಲಿ ಅವರು ಕೇರಳದ ಲಿಜಾ ವಿರುದ್ಧ ಹಾಗೂ ಮುಂಬೈನ ರೋಹಿತ್ ಅವರು ದೆಹಲಿಯ ಪಂಕಜ್ ಮೆಹ್ರಾ ವಿರುದ್ಧ ಭರ್ಜರಿ ಜಯ ದಾಖಲಿಸಿದರು.
ಈ ಕುರಿತು ರೋನಿನ್ ಎಫ್ಸಿ ಸಹ-ಸಂಸ್ಥಾಪಕ ಅರುಣ್ ಕುಮಾರ್ ಕೃಷ್ಣನ್ ಅವರು ಮಾತನಾಡಿ, "ಸ್ವಾತಂತ್ರ್ಯ ದಿನದಂದೇ ಈ ಪಂದ್ಯಾವಳಿ ನಡೆಸಿರುವುದು ನಮಗೆ ಅತ್ಯಂತ ಹೆಮ್ಮೆಯ ಕ್ಷಣ. ಧೈರ್ಯ-ಸ್ಥೈರ್ಯದ ಸಂಕೇತವಾಗಿರುವ ನಮ್ಮ ದೇಶದ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವುದು ಮತ್ತು ಭಾರತದಲ್ಲಿ ಎಂಎಂಎ ಕ್ರೀಡೆಗೆ ಶಾಶ್ವತ ನೆಲೆ ಒದಗಿಸುವುದು ನಮ್ಮ ಗುರಿ" ಎಂದು ಹೇಳಿದರು.
ಲಾಕರ್ ರೂಮ್ ಸಹಭಾಗಿತ್ವದಲ್ಲಿ ನೇರಪ್ರಸಾರಗೊಂಡ ಈ ಕೂಟ ಡಿಜಿಟಲ್ ಮಾಧ್ಯಮಗಳಲ್ಲಿ 5.7 ಮಿಲಿಯನ್ ಗೂ ಅಧಿಕ ವೀಕ್ಷಕರನ್ನು ತಲುಪಿದೆ. ಸ್ಕಾರ್ (ಅಪ್ಯಾರೆಲ್ ಪಾರ್ಟನರ್), ಆಸ್ಟರ್ ಹಾಸ್ಪಿಟಲ್ಸ್ (ವೈದ್ಯಕೀಯ), ಸಿಎಸ್ಆರ್ ಗ್ಲೋಬಲ್ (ಪ್ರಯಾಣ) ಹಾಗೂ ದಿ ಕ್ವಾಡ್ ಬೈ ಬಿಎಲ್ಆರ್ (ಸ್ಥಳ) ಸಂಸ್ಥೆಗಳು ಪಂದ್ಯಾವಳಿಗೆ ಸಹಯೋಗ ನೀಡಿದ್ದವು.