ಜೈಪುರ: ಬಿಹಾರದ 14 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ನಿರ್ಭೀತ ಬ್ಯಾಟಿಂಗ್‌ಗೆ ಇಡೀ ಕ್ರೀಡಾ ಜಗತ್ತೇ ಮನ ಸೋತಿದೆ. ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಕೂಡ ಸೂರ್ಯವಂಶಿ ಬ್ಯಾಟಿಂಗ್‌ಗೆ ಮನಸೋತಿದ್ದಾರೆ. 'ವೈಭವ್ ನಿರ್ಭಿತ ಬ್ಯಾಟಿಂಗ್ ಶೈಲಿ, ಬ್ಯಾಟ್ ಸ್ಪೀಡ್, ಲೆಂಗ್ತ್ ಆರಿಸಿಕೊಳ್ಳುವ ರೀತಿ ನೋಡುವುದೇ ಕಣ್ಣಿಗೆ ಹಬ್ಬ' ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕಳೆದ ವರ್ಷ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 1.1 ಕೋಟಿ ರೂ. ನೀಡಿ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಿತ್ತು. ಆಗ ಅವರಿಗೆ 13 ವರ್ಷ ವಯಸ್ಸಾಗಿತ್ತು. ಹರಾಜಿನಲ್ಲೇ ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದ್ದ ಈ ಪೋರ ಅತಿ ವೇಗದ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾನೆ.
ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ವೈಭವ್, ತಾವಾಡಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ತಾವೊಬ್ಬ ಅಪಾಯಕಾರಿ ಬ್ಯಾಟರ್ ಎನ್ನುವ ಸೂಚನೆ ನೀಡಿದ್ದರು. ಇದನ್ನೂ ಸಾಧಿಸಿಯೂ ತೋರಿಸಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ವಿಶ್ವದರ್ಜೆಯ ಬೌಲರ್‌ಗಳಿಗೂ ಚಳಿ ಬಿಡಿಸಿದ್ದಾರೆ. ಅದರಲ್ಲೂ ಸಿಕ್ಸರ್ ಮೂಲಕವೇ ಶತಕ ಬಾರಿಸಿದ್ದು ಅವರ ರನ್ ದಾಹ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಸಾಭೀತಾಗಿದೆ.
ಲಾರಾ ಮೆಚ್ಚುಗೆ
ಇತ್ತೀಗೆಚೆ ವೈಭವ್ ಸೂರ್ಯವಂಶಿ ಅವರನ್ನು ಸಂದರ್ಶನವೊಂದರಲ್ಲಿ ನಿಮ್ಮ ಕ್ರಿಕೆಟ್ ಐಡಲ್ ಯಾರು ಎಂದು ಪ್ರಶ್ನಿಸಿದ್ದರು. ಆಗ ವೈಭವ್ ಸೂರ್ಯವಂಶಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ ಎಂದಿದ್ದರು. ವೈಭವ್ ಸ್ಪೋಟಕ ಬ್ಯಾಟಿಂಗ್ ಕಂಡ ಲಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ನೀನು ನಿಜವಾಗಿಯೂ ನನ್ನನ್ನು ಎಂಟರ್‌ಟೈನ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ.