ಮುಂಬಯಿ: ಏಷ್ಯಾಕಪ್ ಟಿ20(Asia Cup 2025) ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ(IND vs PAK) ಪಂದ್ಯ ಮುಕ್ತಾಯಗೊಂಡಿದ್ದರೂ ಆರೋಪ-ಪ್ರತ್ಯಾರೋಪ ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಶಿವಸೇನಾ ಸಂಸದ ಸಂಜಯ್ ರಾವತ್(Sanjay Raut) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ 1.5 ಲಕ್ಷ ಕೋಟಿ ರೂ. ಗ್ಯಾಂಬ್ಲಿಂಗ್ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸೆಪ್ಟೆಂಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್ ಭರ್ಜರಿ ಜಯ ಸಾಧಿಸಿತ್ತು. ಸೋಮವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರ ಜತೆ ಮಾತನಾಡಿದ್ದ ಸಂಜಯ್ ರಾವತ್, ಇಂಡೋ-ಪಾಕ್ ಮ್ಯಾಚ್‌ನಿಂದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ 1,000 ಕೋಟಿ ರೂ., ಈ ಹಣವನ್ನು ಅವರು ನಮ್ಮ ವಿರುದ್ದವೇ ಬಳಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಇದೀಗ ಅವರ ಈ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ.
ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಅಭಿಮಾನಿಗಳು ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದದ ಪಂದ್ಯವನ್ನು ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಿದ್ದರು. ಏಕೆಂದರೆ ಫಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರಿಂದ ಹಲವು ಭಾರತೀಯ ಪ್ರವಾಸಿಗರು ಹುತಾತ್ಮರಾಗಿದ್ದರು. ಆದರೂ ಭಾರತ ತಂಡ, ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ದ ಆಡಿತ್ತು. ಅದರಂತೆ ಬಿಸಿಸಿಐ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.