ನವದೆಹಲಿ: ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಭೀತಿಯಲ್ಲಿರುವಾಗಲೇ ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಅವರು ವಿರಾಟ್ ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ತರೂರ್, 'ಇಡೀ ಸರಣಿಯಲ್ಲಿ ವಿರಾಟ್ ಕೊಹ್ಲಿ(Virat Kohli)ಯನ್ನು ಮಿಸ್ ಮಾಡಿಕೊಂಡಿದ್ದೆ, ಆದರೆ ಐದನೇ ಟೆಸ್ಟ್ ಪಂದ್ಯದಲ್ಲಿ ಅದು ಮತ್ತಷ್ಟು ಹೆಚ್ಚಾಗಿತ್ತುʼ ಎಂದು ಹೇಳಿದ್ದಾರೆ.
"ಕೊಹ್ಲಿ ಮನೋಬಲ ಮತ್ತು ಧೈರ್ಯ ಮೈದಾನದಲ್ಲಿ ಅವರ ಸ್ಪೂರ್ತಿದಾಯಕ ಉಪಸ್ಥಿತಿ, ಅವರ ಬ್ಯಾಟಿಂಗ್ ಕೌಶಲ್ಯಗಳು ಬೇರೆಯದ್ದೇ ಫಲಿತಾಂಶಕ್ಕೆ ಕಾರಣವಾಗಿರಬಹುದಿತ್ತು. ಅವರು ನಿವೃತ್ತಿಯಿಂದ ಹಿಂದೆ ಸರಿಯುವಂತೆ ಕೇಳಲು ಈಗ ತಡವಾಗಿದೆಯೇ? ವಿರಾಟ್, ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ!' ಎಂದಿದ್ದಾರೆ.
ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಉಭಯ ಆಟಗಾರರ ನಿವೃತ್ತಿ ಭಾರತೀತ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಒತ್ತಡದಿಂದಲೇ ಅವರು ದಿಢೀರ್ ನಿವೃತ್ತಿ ಹೇಳಲು ಕಾರಣ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಇಂಗ್ಲೆಂಡ್ ಸರಣಿಯಲ್ಲಿ ಭಾರತ ಸೋಲಿನ ಭೀತಿಯಲ್ಲಿರುವಾಗಲೇ ತರೂರ್ ಕೊಹ್ಲಿಯ ಅವಶ್ಯಕತೆ ಬಗ್ಗೆ ಮಾತನಾಡಿದ್ದಾರೆ.
ಇಂಗ್ಲೆಂಡ್‌ನ ಕೆಲ ಮಾಜಿ ಆಟಗಾರರು ಕೂಡ ವಿರಾಟ್ ಈ ಬಾರಿ ಸರಣಿ ಆಡುತ್ತಿದ್ದರೆ ಭಾರತ ಗೆಲ್ಲಬಹುದಿತ್ತು ಎಂದಿದ್ದರು. 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಅದೇ ಸರಣಿಯಲ್ಲಿ ತಮ್ಮ ಕೊನೆ ಪಂದ್ಯವಾಡಿದ್ದರು.
ಇದನ್ನೂ ಓದಿ IND vs ENG 5th Test: ಭಾರತ-ಇಂಗ್ಲೆಂಡ್ ಸರಣಿ ಕ್ಲೈಮ್ಯಾಕ್ಸ್‌ಗೆ ಮಹತ್ವದ ಟ್ವಿಸ್ಟ್!