Shreyas Iyer: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೇಯಸ್ ಅಯ್ಯರ್
ಎರಡು ದಿನಗಳ ಹಿಂದೆ ಅಯ್ಯರ್ ಅವರು ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ತಮ್ಮ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದರು. "ನಾನು ಪ್ರಸ್ತುತ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ ಮತ್ತು ದಿನ ಕಳೆದಂತೆ ಸುಧಾರಿಸುತ್ತಿದ್ದೇನೆ. ನನಗೆ ದೊರೆತ ಎಲ್ಲಾ ರೀತಿಯ ಶುಭಾಶಯಗಳು ಮತ್ತು ಬೆಂಬಲವನ್ನು ನೋಡಿ ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದರು.
-
Abhilash BC
Nov 1, 2025 1:59 PM
ಸಿಡ್ನಿ: ಶ್ರೇಯಸ್ ಅಯ್ಯರ್(Shreyas Iyer) ಗುಲ್ಮದ ಗಾಯದಿಂದ ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸಿಡ್ನಿಯ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಶನಿವಾರ ದೃಢಪಡಿಸಿದೆ. ಗುಲ್ಮದ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಸದ್ಯ ಭಾರತಕ್ಕೆ ಮರಳುವ ಮೊದಲು ಮುಂದಿನ ಸಮಾಲೋಚನೆಗಾಗಿ ಸಿಡ್ನಿಯಲ್ಲಿಯೇ ಇರುತ್ತಾರೆ ಎಂದು ಬಿಸಿಸಿಐ ಹೇಳಿದೆ.
ಅಯ್ಯರ್ ಅವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ನೀಡಿದ ಸಿಡ್ನಿಯಲ್ಲಿರುವ ಡಾ. ಕೌರೌಶ್ ಹಘಿಗಿ ಮತ್ತು ಅವರ ತಂಡಕ್ಕೆ ಬಿಸಿಸಿಐ ಕೃತಜ್ಞತೆ ಸಲ್ಲಿಸಿದೆ. ಗುಲ್ಮದ ಮೇಲಿನ ಗಾಯವನ್ನು ಸರಿಪಡಿಸಲು ಅಯ್ಯರ್ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಬಿಸಿಸಿಐ ದೃಢಪಡಿಸಿತು.
ಶ್ರೇಯಸ್ ಅಯ್ಯರ್ ಬಗ್ಗೆ ಬಿಸಿಸಿಐ ಅಧಿಕೃತ ಹೇಳಿಕೆ
"ಅಕ್ಟೋಬರ್ 25, 2025 ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಶ್ರೇಯಸ್ ಅಯ್ಯರ್ ಅವರ ಹೊಟ್ಟೆಗೆ ಗಾಯವಾಗಿತ್ತು. ಇದರ ಪರಿಣಾಮವಾಗಿ ಅವರ ಗುಲ್ಮದಲ್ಲಿ ಗಾಯವಾಗಿದ್ದು, ಆಂತರಿಕ ರಕ್ತಸ್ರಾವವಾಯಿತು. ಗಾಯವನ್ನು ತಕ್ಷಣವೇ ಗುರುತಿಸಲಾಯಿತು ಮತ್ತು ಸಣ್ಣ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವನ್ನು ತಕ್ಷಣವೇ ನಿಲ್ಲಿಸಲಾಯಿತು. ಅದಕ್ಕಾಗಿ ಅವರಿಗೆ ಸೂಕ್ತ ವೈದ್ಯಕೀಯ ನಿರ್ವಹಣೆ ಮಾಡಲಾಗಿದೆ" ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
🚨 Medical update on Shreyas Iyer
— BCCI (@BCCI) November 1, 2025
The BCCI Medical Team, along with specialists in Sydney and India, are pleased with his recovery, and he has been discharged from the hospital today.
Details 🔽 | #TeamIndia https://t.co/g3Gg1C4IRw
ಇದನ್ನೂ ಓದಿ Shreyas Iyer: 'ಪ್ರತಿದಿನ ಉತ್ತಮಗೊಳ್ಳುತ್ತಿದೆ'; ಗಾಯದ ಬಗ್ಗೆ ಶ್ರೇಯಸ್ ಅಯ್ಯರ್ ಮೊದಲ ಪ್ರತಿಕ್ರಿಯೆ
"ಅವರು ಈಗ ಸ್ಥಿರವಾಗಿದ್ದಾರೆ ಮತ್ತು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ, ಸಿಡ್ನಿ ಮತ್ತು ಭಾರತದ ತಜ್ಞರು, ಅವರ ಪ್ರಗತಿಯಿಂದ ಸಂತೋಷಗೊಂಡಿದ್ದಾರೆ ಮತ್ತು ಅವರನ್ನು ಇಂದು(ಶನಿವಾರ) ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎರಡು ದಿನಗಳ ಹಿಂದೆ ಅಯ್ಯರ್ ಅವರು ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ತಮ್ಮ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದರು. "ನಾನು ಪ್ರಸ್ತುತ ಚೇತರಿಕೆಯ ಪ್ರಕ್ರಿಯೆಯಲ್ಲಿದ್ದೇನೆ ಮತ್ತು ದಿನ ಕಳೆದಂತೆ ಸುಧಾರಿಸುತ್ತಿದ್ದೇನೆ. ನನಗೆ ದೊರೆತ ಎಲ್ಲಾ ರೀತಿಯ ಶುಭಾಶಯಗಳು ಮತ್ತು ಬೆಂಬಲವನ್ನು ನೋಡಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದು ನಿಜವಾಗಿಯೂ ಬಹಳಷ್ಟು ಅರ್ಥಪೂರ್ಣವಾಗಿದೆ. ನನ್ನನ್ನು ನಿಮ್ಮ ಆಲೋಚನೆಗಳಲ್ಲಿ ಇರಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಹೇಳಿದ್ದರು.