ಹೈದರಾಬಾದ್: 245 ಬೃಹತ್ ಮೊತ್ತವನ್ನು ಚೇಸಿಂಗ್ ಮಾಡಿರುವುದನ್ನು ನೋಡಿದರೆ ನಿಜಕ್ಕೂ ನನಗೆ ನಗು ಬರುತ್ತಿದೆ ಎಂದು ಸೋಲಿನ ಬಳಿಕ ಪಂಜಾಬ್ ಕಿಂಗ್ಸ್(Punjab Kings) ತಂಡದ ನಾಯಕ ಶ್ರೇಯಸ್ ಅಯ್ಯರ್(Shreyas Iyer) ಹೇಳಿದ್ದಾರೆ. ಶನಿವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ನೀಡಿದ್ಧ 246 ರನ್ ಸವಾಲನ್ನು ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 8 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, 'ನಿಜವಾಗಿಯೂ ಹೇಳಬೇಕೆಂದರೆ, ಇದು ಅತ್ಯುತ್ತಮ ಮೊತ್ತವಾಗಿತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡವು 2 ಓವರ್ಗಳು ಬಾಕಿ ಇರುವಾಗಲೇ ಚೇಸ್ ಮಾಡಿರುವುದನ್ನು ನೋಡಿದರೆ ನಿಜಕ್ಕೂ ನನಗೆ ನಗು ಬರುತ್ತಿದೆ. ನಾವು ಬೃಹತ್ ಮೊತ್ತ ಪೇರಿಸಿದಾಗ,ಇದು ಉತ್ತಮ ಟಾರ್ಗೆಟ್ ಎಂದು ಭಾವಿಸಿದ್ದೆವು. ಆದರೆ ಸನ್‌ರೈಸರ್ಸ್ ಹೈದರಾಬಾದ್ ಆರಂಭಿಕರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅದರಲ್ಲೂ ಅಭಿಷೇಕ್ ಶರ್ಮಾ ಇನಿಂಗ್ಸ್ ನಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ' ಎಂದರು.
'ಸೋಲಿನ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ನಾವು ಕೆಲ ಕ್ಯಾಚ್ಗಳನ್ನು ಹಿಡಿದಿದ್ದರೆ ಪಂದ್ಯದಲ್ಲಿ ಕಂಬ್ಯಾಕ್ ಮಾಡಬಹುದಿತ್ತು. ಆದರೆ ಅಭಿಷೇಕ್ ಶರ್ಮಾ ಅದೃಷ್ಟವಂತ. ಸಿಕ್ಕ ಜೀವದಾನಗಳನ್ನು ಬಳಸಿಕೊಂಡು ಅತ್ಯುತ್ತಮ ಇನಿಂಗ್ಸ್ ಆಡಿದ. ಅಭಿಷೇಕ್ ಮತ್ತು ಹೆಡ್ ನಡುವಿನ ಆರಂಭಿಕ ಪಾಲುದಾರಿಕೆ ಅದ್ಭುತವಾಗಿತ್ತುʼ ಎಂದರು.
ಚೇಸಿಂಗ್ ವೇಳೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್, ಪಂಜಾಬ್ ಬೌಲರ್‌ಗಳ ಮೇಲೆರಗಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನು ಸುರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 171 ರನ್ ಕಲೆ ಹಾಕಿತು.
ಇದನ್ನೂ ಓದಿ IPL 2025: ಶತಕದ ಬಳಿಕ ಅಭಿಷೇಕ್ ಶರ್ಮಾ ಪ್ರದರ್ಶಿಸಿದ ಚೀಟಿಯಲ್ಲಿ ಬರೆದಿದ್ದೇನು?
ಅಬ್ಬರದ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಕೇವಲ 55 ಎಸೆತಗಳಿಂದ 141 ರನ್ ಚಚ್ಚಿದರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 10 ಸಿಕ್ಸರ್ ಮತ್ತು 14 ಬೌಂಡರಿ ಸಿಡಿಯಿತು. ಟ್ರಾವಿಸ್ ಹೆಡ್ 66 ರನ್ ಬಾರಿಸಿದರು. ಪಂಜಾಬ್ ಪರವಾಗಿ ಆರಂಭಿಕರಾದ ಪ್ರಿಯಾಂಶ್ ಆರ್ಯ(36), ಪ್ರಭ್‌ಸಿಮ್ರಾನ್ ಸಿಂಗ್(42), ನಾಯಕ ಶ್ರೇಯಸ್ ಅಯ್ಯರ್(82) ಮತ್ತು ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್(34*) ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು.