ವಿಜಯವಾಡ, ಅ.11: ಸ್ಮರಣ್ ರವಿಚಂದ್ರನ್ ಅವರು ಭಾನುವಾರ ನಡೆದ ರಣಜಿ ಟ್ರೋಫಿ 2026-27 ಋತುವಿನ ಮೊದಲ ದಿನದ ಆಟದಲ್ಲಿ ಆಂಧ್ರಪ್ರದೇಶದ ವಿರುದ್ಧ ತಮ್ಮ ಎಂಟನೇ ಪ್ರಥಮ ದರ್ಜೆ ಶತಕವನ್ನು ಗಳಿಸಿದರು. ಅವರ ಈ ಶತಕದ ನೆರವಿನಿಂದ ಕರ್ನಾಟಕ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟುತ್ತಿರುವ ಆಂಧ್ರ, ದಿನದಾಟದ ಅಂತ್ಯಕ್ಕೆ 16ರನ್‌ಗೆ 2 ವಿಕೆಟ್ ಕಳೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ಆರಂಭದಲ್ಲೇ ಕುಸಿತ ಕಂಡಿತು. ತಂಡದ ಮೊತ್ತ 9 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಬ್ಯಾಟಿಂಗ್‌ಗೆ ಇಳಿದ ಸ್ಮರಣ್, ಏಕಾಂಗಿಯಾಗಿ ಹೋರಾಟ ನಡೆಸಿ 126 ರನ್ ಗಳಿಸುವ ಮೂಲಕ ಅವರು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ವಿಕೆಟ್ ಕೀಪರ್ ಕೆ.ಎಲ್. ಶ್ರೀಜಿತ್ ಅವರೊಂದಿಗೆ 111 ರನ್‌ಗಳ ಜೊತೆಯಾಟವಾಡುವ ಮೂಲಕ, ತಂಡವನ್ನು ಸಂಕಷ್ಟದ ಸ್ಥಿತಿಯಿಂದ ಸುಸ್ಥಿತಿಗೆ ತರುವಲ್ಲಿ ಶಾಂತಚಿತ್ತದಿಂದ ಪ್ರಮುಖ ಪಾತ್ರ ವಹಿಸಿದರು. ಜೊತೆಗೆ, ಚೊಚ್ಚಲ ಪಂದ್ಯವನ್ನಾಡುತ್ತಿರುವ ಮಾಧವ್ ಬಜಾಜ್ (33 ರನ್) ಅವರಿಂದಲೂ ಅವರಿಗೆ ಉತ್ತಮ ಬೆಂಬಲ ಸಿಕ್ಕಿತು. ಶ್ರೀಜಿತ್(58) ಅರ್ಧಶತಕ ಬಾರಿಸಿದರು.
'ಯುನಿಸೆಫ್' ಕುಟುಂಬ ಸೇರಿದ ಸ್ಮೃತಿ ಮಂಧನಾ
ಸ್ಮರಣ್ ನಾಯಕನಾಗಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಮೂರನೇ ರಣಜಿ ಆಟಗಾರ ಎನಿಸಿಕೊಂಡರು. ಕೆ.ಎಲ್. ರಾಹುಲ್ ನಾಲ್ಕು ರನ್‌ಗೆ ವಿಕೆಟ್ ಕಳೆದುಕೊಂಡರೆ, ಮಯಾಂಕ್ ಅಗರ್ವಾಲ್(5) ಮತ್ತು ಕರುಣ್ ನಾಯರ್ ಶೂನ್ಯ ಸುತ್ತಿದರು. ಅಂತಿಮವಾಗಿ ಕರ್ನಾಟಕ ತಂಡ 82.2 ಓವರ್‌ಗೆ 274 ರನ್‌ಗೆ ಆಲೌಟ್ ಆಯಿತು.
ಆಂಧ್ರ ಪರ ಸೌರಭ್ ಕುಮಾರ್ 3, ಕವುರಿ ಸಾಯಿತೇಜ, ಕೆ.ವಿ. ಶಶಿಕಾಂತ್ ಮತ್ತು ಲಲಿತ್ ಮೋಹನ್ ತಲಾ ಎರಡು ವಿಕೆಟ್ ಪಡೆದರು. ಸದ್ಯ ಬ್ಯಾಟಿಂಗ್‌ನಲ್ಲಿ ಅಭಿಷೇಕ್ ರೆಡ್ಡಿ 10 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.