ಬೆಂಗಳೂರು: ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(SMAT 2025-26) ದೇಶೀಯ ಟಿ20 ಟೂರ್ನಿಗೆ 16 ಆಟಗಾರರ ಕರ್ನಾಟಕ ತಂಡ ಪ್ರಕಟಗೊಂಡಿದೆ. ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದು ವೇಗಿ ಶ್ರೀವತ್ಸ ಆರ್. ಆಚಾರ್(Shreevathsa R. Acharya), ಯುವ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ(Shikhar Shetty) ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖವಾಗಿದ್ದಾರೆ.
ಕರುಣ್ ನಾಯರ್ 3 ವರ್ಷಗಳ ಬಳಿಕ ರಾಜ್ಯ ಟಿ20 ತಂಡಕ್ಕೂ ಮರಳಿದ್ದಾರೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ನವೆಂಬರ್ 26ರವರೆಗೂ ನಿಗದಿಯಾಗಿರುವುದರಿಂದ ಅವರು ಆರಂಭಿಕ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಕರುಣ್ ಅವರು ರಣಜಿ ಟ್ರೋಫಿ ಟೂರ್ನಿಯ ಮೊದಲ ಹಂತದ ಐದು ಪಂದ್ಯಗಳಲ್ಲಿ ಒಟ್ಟು 602 ರನ್ ಪೇರಿಸಿದ್ದರು.
ನವೆಂಬರ್ 26ರಿಂದ ಅಹಮದಾಬಾದ್ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಕರ್ನಾಟಕವು ತನ್ನ ಮೊದಲ ಪಂದ್ಯದಲ್ಲಿ ಉತ್ತರಾಖಂಡ ಎದುರು ಆಡಲಿದೆ. ಕರ್ನಾಟಕ ತಂಡ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಉತ್ತರಾಖಂಡ, ರಾಜಸ್ಥಾನ, ತಮಿಳುನಾಡು, ದೆಹಲಿ, ಸೌರಾಷ್ಟ್ರ ಮತ್ತು ತ್ರಿಪುರ ತಂಡಗಳು ಈ ಗುಂಪಿನಲ್ಲಿವೆ.
ಕೆಎಲ್ ಶ್ರೀಜಿತ್ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಮುಂದುವರಿದಿದ್ದರೆ, ಅನುಭವಿ ಬಿಆರ್ ಶರತ್ 2ನೇ ಕೀಪರ್ ಆಗಿ ಸ್ಥಾನ ಸಂಪಾದಿಸಿದ್ದಾರೆ. ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್ ಜತೆಗೆ 23 ವರ್ಷದ ಶ್ರೀವತ್ಸ ಗೋಸ್ವಾಮಿ ತಂಡದಲ್ಲಿರುವ 4ನೇ ವೇಗಿಯಾಗಿದ್ದಾರೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿಗೆ ಶುಭಾಂಗ್ ಹೆಗ್ಡೆ ಮತ್ತು ಪ್ರವಿಣ್ ದುಬೆ ಸಾಥ್ ನೀಡಲಿದ್ದಾರೆ.
ಕರ್ನಾಟಕ ಟಿ20 ತಂಡ
ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮ್ಯಾಕ್ನೀಲ್ ನೋರೋನ್ಹಾ, ಕೆಎಲ್ ಶ್ರೀಜಿತ್ (ವಿ.ಕೀ), ಕರುಣ್ ನಾಯರ್, ಆರ್. ಸ್ಮರಣ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಶ್ರೀವತ್ಸ ಆರ್. ಆಚಾರ್, ಶುಭಾಂಗ್ ಹೆಗ್ಡೆ, ಪ್ರವಿಣ್ ದುಬೆ, ಬಿಆರ್ ಶರತ್ (ವಿ.ಕೀ).
ಇದನ್ನೂ ಓದಿ IND vs SA: ಊಟದ ಹೊತ್ತಿಗೆ ಚಹಾ!; ಗುವಾಹಟಿ ಟೆಸ್ಟ್ ಸಮಯದಲ್ಲಿ ಬದಲಾವಣೆ
ಕರ್ನಾಟಕದ ಪಂದ್ಯಗಳು
ನ.26, ಎದುರಾಳಿ ಉತ್ತರಾಖಂಡ, ಪಂದ್ಯ ಆರಂಭ: ಬೆಳಗ್ಗೆ 9.00
ನ.28, ಎದುರಾಳಿ ಜಾರ್ಖಂಡ್, ಪಂದ್ಯ ಆರಂಭ; ಮಧ್ಯಾಹ್ನ 3.30
ನ. 30, ಎದುರಾಳಿ ರಾಜಸ್ಥಾನ, ಪಂದ್ಯ ಆರಂಭ; ಬೆಳಗ್ಗೆ 11.00
ಡಿ. 2, ಎದುರಾಳಿ ತಮಿಳುನಾಡು; ಪಂದ್ಯ ಆರಂಭ; ಬೆಳಗ್ಗೆ 9.00
ಡಿ. 4, ಎದುರಾಳಿ ದೆಹಲಿ; ಪಂದ್ಯ ಆರಂಭ; ಮಧ್ಯಾಹ್ನ 1.30
ಡಿ. 6, ಎದುರಾಳಿ ಸೌರಾಷ್ಟ್ರ, ಪಂದ್ಯ ಆರಂಭ; ಬೆಳಗ್ಗೆ 11.00
ಡಿ.8, ಎದುರಾಳಿ ತ್ರಿಪುರ, ಪಂದ್ಯ ಆರಂಭ; ಮಧ್ಯಾಹ್ನ 1.30
ಪಂದ್ಯದ ತಾಣ; ಮೋದಿ ಸ್ಟೇಡಿಯಂ, ಅಹಮದಾಬಾದ್