ಮುಂಬಯಿ,ಡಿ 6: ಟೀಮ್ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ (Palash Muchhal) ಅವರ ನಡುವಿನ ವಿವಾಹ ಮುಂದೂಡಲಾಗಿರುವ ವಿಷಯ ಸಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ತಂದೆಯ ಅನಾರೋಗ್ಯದ ಕಾರಣ ಮದುವೆ ತಾತ್ಕಲಿಕವಾಗಿ ಮುಂದೂಡಲಾಗಿತ್ತು. ಬಳಿಕ ಮಂಧಾನ ಅವರು ಈ ವಿಚಾರಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿರಲಿಲ್ಲ. ಆದರೆ, ಇದೀಗ ಸ್ಮೃತಿ ಮಂಧಾನ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ವಿಡಿಯೊದಲ್ಲಿ ಅವರು ನಿಶ್ಚಿತಾರ್ಥದ ಉಂಗುರುವನ್ನು ಧರಿಸದಿರುವುದು ಅವರ ವಿವಾಹದ ಕುರಿತು ಹಬ್ಬಿದ್ದ ವದಂತಿಗಳಿಗೆ ಪುಷ್ಠಿ ನೀಡಿದೆ.
ಜನಪ್ರಿಯ ಟೂತ್‌ಪೇಸ್ಟ್ ಬ್ರ್ಯಾಂಡ್‌ನ ಪ್ರಚಾರದ ವಿಡಿಯೊದಲ್ಲಿ ಮಂಧಾನ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಬಾಯಿಯ ಆರೋಗ್ಯದ ಕುರಿತಂತೆ ಮಹತ್ವದ ಸಲಹೆ ನೀಡಿದ್ದಾರೆ. ಈ ವೇಳೆ ನೆಟ್ಟಿಗರು ಮಂಧಾನ ನಿಶ್ಚಿತಾರ್ಥದ ಉಂಗುರುವನ್ನು ಧರಿಸದಿರುವುದನ್ನು ಪತ್ತೆ ಹಚ್ಚಿದ್ದಾರೆ. ಒಂದು ವಾರಗಳ ಕಾಲ ನಡೆದ ಮದುವೆ ಸಂಭ್ರಮದ ಹಲವು ವಿಡಿಯೊ ಮತ್ತು ಫೋಟೊಗಳನ್ನು ಮಂಧನಾ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದರು. ಇದೀಗ ಉಂಗುರ ಕೂಡ ಧರಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ಜಾಹೀರಾತನ್ನು ಅವರ ನಿಶ್ಚಿತಾರ್ಥದ ಮೊದಲು ಚಿತ್ರೀಕರಿಸಲಾಗಿದೆಯೇ ಅಥವಾ ನಂತರ ವಿಡಿಯೊದ ಚಿತ್ರೀಕರಣ ಆಗಿದೆಯೇ ಎಂದು ಮಾಹಿತಿಯಿಲ್ಲ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸ್ಮೃತಿ ಮಂಧಾನ ಮತ್ತು ಪಲಾಶ್ ಅವರ ವಿವಾಹ ಕಾರ್ಯಕ್ರಮವು ನವೆಂಬರ್ 23ಕ್ಕೆ ಸಾಂಗ್ಲಿಯಲ್ಲಿ ನೆರವೇರಬೇಕಿತ್ತು. ಆದರೆ, ಅವರ ತಂದೆ ದಿಢೀರ್ ಅನಾರೋಗ್ಯಕ್ಕೆ ತುತ್ತಾದ ಕಾರಣ ಅವರ ಮದುವೆಯನ್ನು ತಾತ್ಕಲಿಕವಾಗಿ ಮುಂದೂಡಲಾಯಿತು. ಇದಾದ ಬಳಿಕ ವರ ಪಲಾಶ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ವಿವಾಹ ಕಾರ್ಯಕ್ರಮವನ್ನು ಎರಡೂ ಕುಟುಂಬಗಳ ನಿರ್ಧಾರದಂತೆ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದರ ಬೆನ್ನಲ್ಲೇ ಮದುವೆ ದಿನ ಸ್ಮೃತಿ ಅವರ ಭಾವಿ ಪತಿ ಎಂದು ಕರೆಸಿಕೊಳ್ಳುತ್ತಿರುವ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್, ಮಹಿಳಾ ಡ್ಯಾನ್ಸ್ ಕೊರಿಯೋಗ್ರಾಫರ್ ಒಬ್ಬರ ಜೊತೆ ಪ್ರಣಯದಲ್ಲಿದ್ದಾಗ ಸ್ಮೃತಿ ಬಳಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಆಘಾತಕ್ಕೊಳಗಾದ ಸ್ಮೃತಿ ಮದುವೆಯನ್ನು ಸ್ಥಗಿತಗೊಳಿಸಲು ಇದೇ ಕಾರಣ ಎನ್ನುವ ಸುದ್ದಿ ಹರಿದಾಡುತ್ತಿದೆ. ತಮ್ಮ ವಿರುದ್ಧ ಇಷ್ಟೆಲ್ಲಾ ಗಂಭೀರ ಆರೋಪ ಕೇಳಿಬರುತ್ತಿದ್ದರೂ ಪಲಾಶ್ ಸ್ಪಷ್ಟನೆ ನೀಡಿಲ್ಲ. ಅವರ ಕುಟುಂಬಸ್ಥರೂ ತುಟಿ ಬಿಚ್ಚುತ್ತಿಲ್ಲ. ಇದು ಈ ವಿವಾದಕ್ಕೆ ಪುಷ್ಠಿ ನೀಡುತ್ತಿದೆ.
ಇದನ್ನೂ ಓದಿ Smriti Mandhana; ತಂದೆಗೆ ಹೃದಯಾಘಾತ; ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
ಡಿಸೆಂಬರ್ 21 ರಿಂದ 30 ರವೆರೆಗೆ ಭಾರತ ತಂಡ ಶ್ರೀಲಂಕಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಸ್ಮೃತಿ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ. ನವಿ ಮುಂಬೈನಲ್ಲಿ ಪ್ರಾರಂಭವಾಗುವ ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅವರು ರಾಯಲ್ ಚಾಲೆಂಜರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.