Smriti Mandhana; ತಂದೆಗೆ ಹೃದಯಾಘಾತ; ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
Smriti Mandhana Wedding Postponed: "ಸ್ಮೃತಿ ತನ್ನ ತಂದೆ ಗುಣಮುಖರಾಗುವವರೆಗೆ, ಭಾನುವಾರ ನಡೆಯಬೇಕಿದ್ದ ಈ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದ್ದಾರೆ. ಈಗ ಅವರು ವೀಕ್ಷಣೆಯಲ್ಲಿದ್ದಾರೆ, ಮತ್ತು ವೈದ್ಯರು ಅವರನ್ನು ಗುಣಮುಖರಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ನಾವು ಕೂಡ ಆಘಾತದಲ್ಲಿದ್ದೇವೆ ಮತ್ತು ಅವರು ಬೇಗ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ" ಎಂದು ತುಹಿನ್ ಮಿಶ್ರಾ ಹೇಳಿದರು.
ತಂದೆಯ ಜತೆ ಸ್ಮೃತಿ ಮಂಧಾನ -
ಮುಂಬಯಿ: ಹಲವು ಸಮಯಗಳಿಂದ ಪ್ರೀತಿಯಲ್ಲಿದ್ದ ತಾರಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ(Smriti Mandhana) ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್(Palash Muchhal) ಭಾನುವಾರ(ನ.23) ವೈವಾಹಿಕ ಜೀವನಕ್ಕೆ ಅಡಿ ಇಡಬೇಕಿತ್ತು. ಆದರೆ, ವಿವಾಹ ಸಮಾರಂಭವನ್ನು ಹಠಾತ್ ಮತ್ತು ದುಃಖಕರ ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣದಿಂದ ಮುಂದೂಡಲಾಗಿದೆ(Smriti Mandhana Wedding Postponed). ಸಾಂಗ್ಲಿಯ ಸ್ಯಾಮ್ಡೋಲ್‌ನಲ್ಲಿರುವ ಮಂಧಾನ ಫಾರ್ಮ್ ಹೌಸ್‌ನಲ್ಲಿ ವಿವಾಹದ ಸಿದ್ಧತೆಗಳು ನಡೆಯುತ್ತಿರುವಾಗ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ(Srinivas Mandhana) ಅವರಿಗೆ ಹೃದಯಾಘಾತವಾಗಿದೆ ಎಂದು ಸ್ಮೃತಿ ಅವರ ವ್ಯವಹಾರ ವ್ಯವಸ್ಥಾಪಕ ತುಹಿನ್ ಮಿಶ್ರಾ ದೃಢಪಡಿಸಿದ್ದಾರೆ.
ಆರಂಭಿಕ ಹಂತದಲ್ಲಿ ಎನ್‌ಡಿಟಿವಿ ವರದಿ ಮಾಡಿದ ಪ್ರಕಾರ ಮಂಧಾನ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ ವ್ಯಕ್ತಿಗೆ ಹೃದಯಾಘಾತವಾಗಿದೆ ಎನ್ನಲಾಗಿತ್ತು. ಇದೀಗ ಹೃದಯಾಘಾತವಾಗಿರುವುದು ಸ್ಮೃತಿ ಅವರ ತಂದೆಗೆ ಎಂದು ಗೊತ್ತಾಗಿದೆ.
ಶ್ರೀನಿವಾಸ್ ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ಅವರನ್ನು ಪ್ರಸ್ತುತ ತುರ್ತು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಕುಟುಂಬದ ಆಪ್ತ ಮೂಲಗಳು ದೃಢಪಡಿಸಿವೆ. ಕಳೆದ ಕೆಲ ದಿನಗಳಿಂದ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ. ಶನಿವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸ್ಮೃತಿ ಹಾಗೂ ಪಲಾಶ್ ಡ್ಯಾನ್ಸ್ ಮಾಡಿರುವ ವಿಡಿಯೊ ಗಮನ ಸೆಳೆಯುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಂದೆಯ ಆರೋಗ್ಯ ಸಮಸ್ಯೆಯಿಂದ ಮದುವೆ ಮುಂದೂಡಲಾಗಿದೆ. ಸದ್ಯ ಮದುವೆ ಯಾವಾಗ ನಡೆಯಲಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
"ಇಂದು ಬೆಳಿಗ್ಗೆ ಶ್ರೀನಿವಾಸ್ ಉಪಾಹಾರ ಸೇವಿಸುತ್ತಿದ್ದಾಗ ಅಸ್ವಸ್ಥರಾದರು. ಇದು ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ನಾವು ಭಾವಿಸಿದ್ದೇವು. ಆದರೆ ಅವರು ಇನ್ನಷ್ಟು ಅಸ್ವಸ್ತರಾದ ಕಾರಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಈಗ ಅವರು ವೀಕ್ಷಣೆಯಲ್ಲಿದ್ದಾರೆ" ಎಂದು ಸ್ಮೃತಿ ಅವರ ವ್ಯವಸ್ಥಾಪಕರು ಮಾಧ್ಯಮಗಳಿಗೆ ಹೇಳಿದರು.
"ಸ್ಮೃತಿ ತನ್ನ ತಂದೆ ಗುಣಮುಖರಾಗುವವರೆಗೆ, ಭಾನುವಾರ ನಡೆಯಬೇಕಿದ್ದ ಈ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದ್ದಾರೆ. ಈಗ ಅವರು ವೀಕ್ಷಣೆಯಲ್ಲಿದ್ದಾರೆ, ಮತ್ತು ವೈದ್ಯರು ಅವರನ್ನು ಗುಣಮುಖರಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ನಾವು ಕೂಡ ಆಘಾತದಲ್ಲಿದ್ದೇವೆ ಮತ್ತು ಅವರು ಬೇಗ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ" ಎಂದು ತುಹಿನ್ ಮಿಶ್ರಾ ಹೇಳಿದರು.