ಮಾರ್ಕ್ರಮ್ ಅಜೇಯ ಶತಕ; ಗೆಲುವಿನ ಸನಿಹದಲ್ಲಿ ದಕ್ಷಿಣ ಆಫ್ರಿಕಾ
WTC Final 2025: ಸದ್ಯ ಬ್ಯಾಟಿಂಗ್ ಕಾಯ್ದುಕೊಂಡಿರುವ ಮಾರ್ಕ್ರಮ್ 159 ಎಸೆತಗಳಲ್ಲಿ 102* ರನ್ ಬಾರಿಸಿದ್ದಾರೆ. ಇದೇ ವೇಳೆ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸಿದ ನಾಲ್ಕನೇ ಪ್ರವಾಸಿ ಆಟಗಾರ ಎನಿಸಿಕೊಂಡರು. ಮಾರ್ಕ್ರಮ್ ನಾಲ್ಕನೇ ಇನಿಂಗ್ಸ್‌ನಲ್ಲಿ ಆರಂಭಿಕನಾಗಿ ಬಾರಿಸಿದ ಮೂರನೇ ಶತಕ ಕೂಡ ಇದಾಗಿದೆ. ದಾಖಲೆ ಭಾರತದ ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(4) ಹೆಸರಿನಲ್ಲಿದೆ.


ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC Final 2025) ಪಂದ್ಯ ಅಂತಿಮ ಹಂತದ ರೋಚಕ ಘಟಕ್ಕೆ ಬಂದು ನಿಂತಿದೆ. ದಕ್ಷಿಣ ಆಫ್ರಿಕಾ(AUS VS RSA) ಗೆಲುವಿಗೆ ಇನ್ನು ಕೇವಲ 69 ರನ್ ಅಗತ್ಯವಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೋಲಿನ ಭೀತಿಗೆ ಸಿಲುಕಿದೆ. ಇನ್ನು 2 ದಿನದ ಆಟ ಬಾಕಿ ಇದೆ. ಮೂರನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ 2 ವಿಕೆಟ್‌ಗೆ 213 ರನ್ ಗಳಿಸಿದೆ. ಶತಕ ಬಾರಿಸಿದ ಐಡೆನ್ ಮಾರ್ಕ್ರಮ್(Aiden Markram) ಮತ್ತು ಅರ್ಧಶತಕ ಬಾರಿಸಿದ ಟೆಂಬ ಬವುಮಾ(Temba Bavuma) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಗುರುವಾರ 8 ವಿಕೆಟ್‌ಗೆ 144 ರನ್ ಗಳಿಸಿ 218 ರನ್ ಮುನ್ನಡೆ ಕಾಯ್ದುಕೊಂಡಿದ್ದ ಆಸ್ಟ್ರೇಲಿಯಾ ಶುಕ್ರವಾರ 207 ರನ್‌ಗೆ ಆಲೌಟ್ ಆಯಿತು. ಗೆಲುವಿಗೆ 282 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಬವುಮಾ ಮತ್ತು ಮಾರ್ಕ್ರಮ್ ನಡೆಸಿದ ಅಮೋಘ ಜತೆಯಾಟದ ನೆರವಿನಿಂದ ಚೇತರಿಸಿಕೊಂಡು ಚೊಚ್ಚಲ ವಿಶ್ವಕಪ್ ಟ್ರೋಫಿಯೊಂದನ್ನು ಮುಡಿಗೇರಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಆಸೀಸ್ ದಾಳಿಯ ದಿಟ್ಟವಾಗಿ ಎದುರಿಸಿ ಬುವುಮಾ ಮತ್ತು ಮಾರ್ಕ್ರಮ್ 143ರನ್‌ಗಳ ಅಜೇಯ ಶತಕದ ಜತೆಯಾಟ ಆಡಿದರು. ಆರಂಭಕಾರ ರಿಯಾನ್ ರಿಕಲ್ಟನ್ (6) ಬಹು ಬೇಗನೇ ಪೆವಿಲಿಯನ್ ಸೇರಿದರು. ವಿಯಾನ್ ಮುಲ್ಡರ್ 50 ಎಸೆತಗಳಿಂದ 27 ರನ್‌ಗಳಿಸಿ ತಂಡಕ್ಕೆ ನೆರವಾದರು.
Aiden Markram and Temba Bavuma guide South Africa to the brink of #WTC25 glory 🙌
— ICC (@ICC) June 13, 2025
Look how the day unfolded 👉 https://t.co/pQ7yVByD1d pic.twitter.com/kHI8s8GDg7
ಸದ್ಯ ಬ್ಯಾಟಿಂಗ್ ಕಾಯ್ದುಕೊಂಡಿರುವ ಮಾರ್ಕ್ರಮ್ 159 ಎಸೆತಗಳಲ್ಲಿ 102* ರನ್ ಬಾರಿಸಿದ್ದಾರೆ. ಇದೇ ವೇಳೆ ಲಾರ್ಡ್ಸ್ ಮೈದಾನದಲ್ಲಿ ಶತಕ ಬಾರಿಸಿದ ನಾಲ್ಕನೇ ಪ್ರವಾಸಿ ಆಟಗಾರ ಎನಿಸಿಕೊಂಡರು. ಮಾರ್ಕ್ರಮ್ ನಾಲ್ಕನೇ ಇನಿಂಗ್ಸ್‌ನಲ್ಲಿ ಆರಂಭಿಕನಾಗಿ ಬಾರಿಸಿದ ಮೂರನೇ ಶತಕ ಕೂಡ ಇದಾಗಿದೆ. ದಾಖಲೆ ಭಾರತದ ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್(4) ಹೆಸರಿನಲ್ಲಿದೆ. ಗಾಯದ ಮಧ್ಯೆಯೂ ಕುಂಟುತಾ ಬ್ಯಾಟಿಂಗ್ ನಡೆಸಿದ ನಾಯಕ ಬವುಮಾ ಅಜೇಯ 65 ರನ್ ಬಾರಿಸಿದ್ದಾರೆ. ಹಿಂದಿನ ಎರಡು ದಿನದಾಟದಲ್ಲಿ ಸಂಪೂರ್ಣ ಬೌಲಿಂಗ್ ಟ್ರ್ಯಾಕ್ ಆಗಿದ್ದ ಈ ಪಿಚ್ ಮೂರನೇ ದಿನದಾಟದಿಂದ ಬ್ಯಾಟಿಂಗ್‌ಗೆ ಸಹಕಾರಿಯಾಗಿದೆ.
ಆಸೀಸ್‌ಗೆ ದ್ವಿತೀಯ ಇನಿಂಗ್ಸ್‌ನಲ್ಲಿ ನೆರವಾದದ್ದು ವೇಗಿ ಮಿಚೆಲ್ ಸ್ಟಾರ್ಕ್. ಹರಿಣಗಳನ್ನು ಕಾಡಿದ ಅವರು ಅಜೇಯ 58 ರನ್ ಬಾರಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. 10 ನೇ ವಿಕೆಟ್‌ಗೆ ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಟಾರ್ಕ್ ಸೇರಿಕೊಂಡು 59 ರನ್ ಜತೆಯಾಟ ನಡೆಸಿದರು. ಈ ಮೂಲಕ ಬರೋಬ್ಬರಿ 50 ವರ್ಷದ ದಾಖಲೆಯೊಂದನ್ನು ಮುರಿದರು. ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತ್ಯಧಿಕ ಜತೆಯಾಟ ನಡೆಸಿದ ಜೋಡಿ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದವರೇ ಆದ ಡೆನ್ನಿಸ್ ಲಿಲ್ಲಿ, ಜೆಫ್ ಥಾಮ್ಸನ್ ಹೆಸರಿನಲ್ಲಿತ್ತು. ಈ ಜೋಡಿ 1975ರಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ವಿಂಡಿಸ್ ವಿರುದ್ಧ 41 ರನ್ ಜತೆಯಾಟ ನಡೆಸಿತ್ತು.
ಕಪ್ಪು ಪಟ್ಟಿ ಧರಿಸಿದ ಆಟಗಾರರು
ಅಹಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಆಸ್ಟ್ರೆಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಕ್ರಿಕೆಟಿಗರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು. ಮೂರನೇ ದಿನದಾಟ ಆರಂಭಿಸುವ ಮುನ್ನ ಸಾಲಾಗಿ ನಿಂತು ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂತಾಪ ಸೂಚಿಸಿದರು. ನಂತರ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು.
ಇದನ್ನೂ ಓದಿ WTC final: 50 ವರ್ಷದ ವಿಶ್ವಕಪ್ ಫೈನಲ್ ದಾಖಲೆ ಮುರಿದ ಸ್ಟಾರ್ಕ್-ಹ್ಯಾಜಲ್‌ವುಡ್