ನವದೆಹಲಿ: ಆರಂಭಿಕ ಹಂತದಲ್ಲಿ ಸತತವಾಗಿ ಗೆಲುವು ಸಾಧಿಸುವ ಮೂಲಕ ಹಾಲಿ ಆವೃತ್ತಿಯ ಐಪಿಎಲ್(IPL 2025)ನಲ್ಲಿ ಮೊದಲ ತಂಡವಾಗಿ ಪ್ಲೇ-ಆಫ್ ಪ್ರವೇಶಿಸುವ ನಿರೀಕ್ಷೆ ಮೂಡಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆ ಬಳಿಕ ಸತತ ಸೋಲು ಕಂಡು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಒತ್ತಡಕ್ಕೆ ಸಿಲುಕಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(SRH vs DC) ವಿರುದ್ಧ ಸೆಣಸಾಟ ನಡೆಸಲಿದೆ. ಕಮಿನ್ಸ್ ಪಡೆ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 6 ಗೆಲುವು, 4 ಸೋಲಿನ ಸಹಿತ 12 ಅಂಕದೊಂದಿಗೆ 5ನೇ ಸ್ಥಾನದಲ್ಲಿದೆ. ಆರಂಭಿಕ ಪಂದ್ಯಗಳ ಗೆಲುವಿನ ಬಳಿಕ ಕಳೆದ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ವೃದ್ಧಿಸಿಕೊಳ್ಳಬೇಕಿದರೆ ಹೈದರಾಬಾದ್ ವಿರುದ್ಧ ಗೆಲುವು ಅತ್ಯಗತ್ಯ.
ಡೆಲ್ಲಿ ತಂಡ ಇನ್ನೂ ಕೂಡ ಸೂಕ್ತ ಆರಂಭಿಕ ಜೋಡಿಯ ಹುಡುಕಾಟದಲ್ಲಿದೆ. ಉಪನಾಯಕ ಫಾಫ್ ಡು ಪ್ಲಸಿಸ್ ಗಾಯದಿಂದ ಚೇತರಿಕೆ ಕಂಡು ಕಳೆದ ಪಂದ್ಯದಲ್ಲಿ ಆಡಲಿಳಿದು ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ ಅವರ ಜತೆಗಾರ ಅಭಿಷೇಕ್ ಪೋರೆಲ್ ಅಗ್ಗಕ್ಕೆ ಔಟಾಗಿದ್ದರು. ಮುಂಬೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಭಾರೀ ನಿರೀಕ್ಷೆ ಮೂಡಿಸಿದ್ದ ಕನ್ನಡಿಗ ಕರುಣ್ ನಾಯರ್ ಆ ಬಳಿಕ ಪಂದ್ಯಗಳಲ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವುದು ಕೂಡ ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ. ಮತ್ತೊಂದೆಡೆ ರಾಹುಲ್ ಬ್ಯಾಟ್ ಕೂಡ ಸದ್ದು ಮಾಡಬೇಕಿದೆ. ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಮುಕೇಶ್ ಕುಮಾರ್ ರನ್ ಸೋರಿಕೆಗೆ ಕಡಿವಾಣ ಹಾಕಬೇಕಿದೆ.
ಹೈದರಾಬಾದ್ ಅಸ್ಥಿರ ಪ್ರದರ್ಶನ
ಮೆಗಾ ಹರಾಜಿನಲ್ಲಿ ವಿಶ್ವ ಕ್ರಿಕೆಟ್‌ನ ಹೊಡಿಬಡಿ ದಾಂಡಿಗರು ಮತ್ತು ಬೌಲರ್‌ಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದ ಸನ್‌ರೈಸರ್ಸ್ ಹೈದರಾಬಾದ್ ತಾನಾಡಿದ ಮೊದಲ ಪಂದ್ಯದಲ್ಲೇ 286 ರನ್ ಪೇರಿಸಿ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿತ್ತು. ಆದರೆ ತಂಡದ ಆಟಗಾರರ ಆರ್ಭಟ ಈ ಒಂದೇ ಪಂದ್ಯಕ್ಕೆ ಸೀಮಿತವಾದದ್ದು ವಿಪರ್ಯಾಸವೇ ಸರಿ. ಆ ಬಳಿಕ ಆಡಿದ ಪಂದ್ಯದಲ್ಲಿ ತಂಡಕ್ಕೆ ಕನಿಷ್ಠ 150 ರನ್ ಪೇರಿಸಲು ಆಗದೆ ಹೀನಾಯ ಸೋಲು ಕಾಣುತ್ತಿದೆ. ಇಶಾನ್ ಕಿಶನ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ, ಹೆನ್ರಿಚ್ ಕ್ಲಾಸೆನ್ ಎಲ್ಲರು ಮಂಕಾಗಿದ್ದಾರೆ. ಬೌಲಿಂಗ್‌ನಲ್ಲಿ ಅನುಭವಿ ಮೊಹಮ್ಮದ್ ಶಮಿ ದುಬಾರಿಯಾಗುತ್ತಿದ್ದಾರೆ.
ಸದ್ಯ ಹೈದರಾಬಾದ್ ಆಡಿದ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಬಹುತೇಕ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ಕಮಿನ್ಸ್ ಪಡೆಗೆ ಇನ್ನುಳಿದ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕನಿಷ್ಠ 5 ರೊಳಗೆ ಸ್ಥಾನ ಪಡೆಯವುದೊಂದೇ ಪ್ರಮುಖ ಗುರಿ.
ಸಂಭಾವ್ಯ ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್ (ವಿ.ಕೀ.), ಕರುಣ್ ನಾಯರ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ದುಷ್ಮಂತ ಚಮೀರಾ, ಮುಖೇಶ್ ಕುಮಾರ್.
ಇದನ್ನೂ ಓದಿ IPL 2025: ಡೆವಾಲ್ಡ್ ಬ್ರೆವಿಸ್‌ಗೆ ಡಿಆರ್‌ಎಸ್ ಮನವಿ ತಿರಸ್ಕರಿಸಿದ ಅಂಪೈರ್; ನಿಯಮ ಹೇಗಿದೆ?
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿ.ಕೀ.), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ.