Suryakumar Yadav: ಪಂದ್ಯದ ಸ್ಟ್ಯಾಂಡರ್ಡ್ ಬಗ್ಗೆ ಪ್ರಶ್ನೆ ಕೇಳಿದ ಪಾಕ್ ಪತ್ರಕರ್ತನಿಗೆ ಚಳಿ ಬಿಡಿಸಿದ ಸೂರ್ಯಕುಮಾರ್
ಭಾರತ ತಂಡ ಕಳೆದ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನೀಡಿರಲಿಲ್ಲ. ಟಾಸ್ ಹಾಗೂ ಪಂದ್ಯದ ಬಳಿಕ ಪಾಕ್ ಆಟಗಾರರನ್ನು ಭಾರತೀಯರು ಕಡೆಗಣಿಸಿದ್ದರು. ಇದು ಸೂಪರ್ ಫೋರ್ ಪಂದ್ಯದಲ್ಲೂ ಮುಂದುವರಿಯಿತು. ಟಾಸ್ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಕೈ ಕುಲುಕಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡದೆ ತಮ್ಮ ಪಾಡಿಗೆ ಇದ್ದರು.

-

ದುಬೈ: ಏಷ್ಯಾಕಪ್ ಟಿ20ಯ ಗುಂಪು ಹಂತದ ಪಂದ್ಯದಲ್ಲಿ ಬದ್ಧವೈರಿಯನ್ನು ಹೊಸಕಿ ಹಾಕಿದ್ದ ಭಾರತ ತಂಡ, ಭಾನುವಾರ ನಡೆದಿದ್ದ ಸೂಪರ್-4ಪಂದ್ಯದಲ್ಲೂ ಎದುರಾಳಿಯನ್ನು ಚೆಂಡಾಡಿತು. 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಸೂರ್ಯಕುಮಾರ್ ಪಡೆ, ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿತ್ತು. ಪಂದ್ಯದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಇತ್ತಂಡಗಳ ನಡುವಿನ ಸ್ಪರ್ಧೆಯನ್ನು ಹೈವೋಲ್ಟೇಜ್ ಪೈಪೋಟಿ ಎಂದು ಕರೆಯುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಟಿ20ಯಲ್ಲಿ ಈವರೆಗೆ 15 ಬಾರಿ ಪರಸ್ಪರ ಮುಖಾಮುಖಿಯಾಗಿದೆ. ಈ ಪೈಕಿ ಭಾರತ ತಂಡ 12 ಬಾರಿ ಗೆದ್ದಿದೆ. ಹೀಗಿರುವಾಗ ಪಾಕ್ ವಿರುದ್ಧದ ಪಂದ್ಯ ಪೈಪೋಟಿ ಹೇಗಾಗುತ್ತದೆ ಎಂದು ಹೇಳುವ ಮೂಲಕ ಪಾಕ್, ಭಾರತ ವಿರುದ್ಧ ದುರ್ಬಲ ಎನ್ನುವ ಅರ್ಥದಲ್ಲಿ ಸೂರ್ಯ ತಿರುಗೇಟು ಕೊಟ್ಟಿದ್ದಾರೆ.
ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರು ಎರಡೂ ತಂಡಗಳ ನಡುವಿನ ಆಟದ ಸ್ಟ್ಯಾಂಡರ್ಡ್ ಬಹಳಷ್ಟು ಬದಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ನಗುತ್ತಾಲೇ ಉತ್ತರಿಸಿದ ಸೂರ್ಯಕುಮಾರ್, ‘ಸರ್, ನನ್ನ ವಿನಂತಿಯೆಂದರೆ ನಾವು ಈಗ ಭಾರತ vs ಪಾಕಿಸ್ತಾನ ಪಂದ್ಯಗಳನ್ನು ಪೈಪೋಟಿ ಎಂದು ಕರೆಯುವುದನ್ನು ನಿಲ್ಲಿಸಬೇಕು. ಈಗ ಪೈಪೋಟಿ ಎಲ್ಲಿದೆ? ಎರಡೂ ತಂಡಗಳು 15 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8-7 ಪಂದ್ಯಗಳಲ್ಲಿ ಗೆಲುವು ಕಂಡಿದ್ದರೆ ಅದು ಪೈಪೋಟಿ. ಇಲ್ಲಿ ಭಾರತ 12ಕ್ಕೂ ಹೆಚ್ಚು ಪಂದ್ಯ ಗೆದ್ದಿದ್ದು ಸ್ಪರ್ದೆಯೇ ಇಲ್ಲ’ ಎನ್ನುವ ಮೂಲಕ ಪಾಕ್ ಮಾನ ಕಳೆದಿದ್ದಾರೆ.