ರಾಯ್ಪುರ, ಜ.24: ಬರೋಬ್ಬರಿ 468 ದಿನಗಳ ಬಳಿಕ ಭಾರತೀಯ ಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಗಳಿಸುವ ಮೂಲಕ ಮತ್ತೆ ತಮ್ಮ ಹಳೆಯ ಫಾರ್ಮ್‌ಗೆ ಮರಳಿದರು. ಇದೇ ಸಂತಸದಲ್ಲಿ ಅವರು ಸಂಭ್ರಮಾಚರಣೆ(Suryakumar Yadav's Unique Celebration) ಮಾಡಿದ ವಿಡಿಯೊ ವೈರಲ್ ಆಗಿದೆ.
ಶುಕ್ರವಾರ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸ್ಫೋಟ ಬ್ಯಾಟಿಂಗ್ ನಡೆಸಿದ ಅವರು ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜಾಕೋಬ್ ಡಫಿ ಅವರನ್ನು ಡೀಪ್ ಎಕ್ಸ್‌ಟ್ರಾ ಕವರ್‌ಗೆ ತಳ್ಳಿ ಸಿಂಗಲ್ ಪಡೆದು ಅರ್ಧಶತಕ ಸಿಡಿಸಿ ತಕ್ಷಣ, ಅವರು 22 ಗಜಗಳಿಗೆ ನಮಸ್ಕರಿಸಿ ಪ್ರಾರ್ಥನೆಯಂತಹ ಸನ್ನೆ ಮಾಡಿದರು. ಈ ವೇಳೆ ರಾಯ್‌ಪುರ ಪ್ರೇಕ್ಷಕರು ಮತ್ತು ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿ ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಪಂದ್ಯದ ಬಳಿಕ ಭಾರತೀಯ ಕ್ರಿಕೆಟ್ ತಂಡದ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿರುವ ರಾಘವೇಂದ್ರ ದಿವಗಿ ಅವರ ಕಾಲಿಗೂ ಸೂರ್ಯಕುಮಾರ್ ನಮಸ್ಕರಿಸಿದರು.
ಮಳೆಯ ನಿರೀಕ್ಷೆಯಿದ್ದ ಕಾರಣ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡ ನಾಯಕ ಸೂರ್ಯಕುಮಾರ್, ಗಾಯಗೊಂಡ ಅಕ್ಷರ್ ಪಟೇಲ್ ಬದಲಿಗೆ ಹರ್ಷಿತ್ ರಾಣಾ ಮತ್ತು ಕುಲದೀಪ್ ಯಾದವ್ ಅವರನ್ನು ಕರೆತಂದರು ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದರು.
ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 82 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೇ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶಾನ್ 32 ಎಸೆತಗಳಲ್ಲಿ 76 ರನ್‌ಗಳ ಕೊಡುಗೆ ನೀಡಿದರು. ಇನ್ನು ಐದನೇ ಸ್ಥಾನದಲ್ಲಿ ಶಿವಂ ದುಬೆ 18 ಎಸೆತಗಳಲ್ಲಿ ಅಜೇಯ 36 ರನ್ ಗಳಿಸುವಲ್ಲಿ ಯಶಸ್ವಿಯಾದರು.
209 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 15.2 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ತಲುಪುವ ಮೂಲಕ ಅತಿ ವೇಗವಾಗಿ 200 ಪ್ಲಸ್ ಮೊತ್ತವನ್ನು ಚೇಸ್ ಮಾಡಿದ ವಿಶ್ವ ದಾಖಲೆ ತನ್ನದಾಗಿಸಿಕೊಂಡಿತು.
ಪಾಕಿಸ್ಥಾನದ ವಿಶ್ವ ದಾಖಲೆ ಮುರಿದ ಭಾರತ
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 208/6 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಡೆವೋನ್ ಕಾನ್ವೆ ಮತ್ತು ಟಿಮ್ ಸೈಫರ್ಟ್ ಬ್ಯಾಟಿಂಗ್ ಅಬ್ಬರದಿಂದ ಕಿವೀಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಈ ಇಬ್ಬರು 43 ರನ್‌ಗಳ ಜೊತೆಯಾಟವಾಡಿದರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ, ಜಾಕೋಬ್ ಡಫಿ ಮತ್ತು ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು.