ಮುಂಬಯಿ, ಫೆ.6: ಭಾರತ ತಂಡವು ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ (ಯುಎಸ್ಎ) ವಿರುದ್ಧ ಆಡವ ಮೂಲಕ ಐಸಿಸಿ ಪುರುಷರ ಟಿ20 ವಿಶ್ವಕಪ್ 2026(T20 WC 2026) ರ ಅಭಿಯಾನ ಆರಂಭಿಸಲಿದೆ. 2024 ರ ಗೆಲುವಿನ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾಗಿದ್ದರೂ, ಭಾರತವು ಅಗ್ರ ಶ್ರೇಯಾಂಕಿತ ತಂಡವಾಗಿ ಟೂರ್ನಮೆಂಟ್ ಅನ್ನು ಪ್ರವೇಶಿಸುತ್ತದೆ ಮತ್ತು ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಲು ಸುಸಜ್ಜಿತವಾಗಿದೆ. ಮೊದಲ ಪಂದ್ಯದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್(India vs USA playing 11), ಪಂದ್ಯ ಆರಂಭ ಕುರಿತ ಮಾಹಿತಿ ಇಲ್ಲಿದೆ.
ಆರಂಭಿಕ ಜೋಡಿಯೂ ಸ್ಥಿರವಾಗಿರುವಂತೆ ಕಾಣುತ್ತಿದೆ, ಇಶಾನ್ ಕಿಶನ್ ಸ್ಫೋಟಕ ಫಾರ್ಮ್‌ನಲ್ಲಿ ಮರಳಿದ್ದು, ಅಭಿಷೇಕ್ ಶರ್ಮಾ ಜೊತೆ ಕೈಜೋಡಿಸಲು ಸಜ್ಜಾಗಿದ್ದಾರೆ. ಅಭಿಷೇಕ್ ಶರ್ಮಾ 194 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಟೂರ್ನಮೆಂಟ್ ಪ್ರವೇಶಿಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಸ್ಟ್ರೈಕ್ ರೇಟ್ ಆಗಿದೆ.
ತಿಲಕ್ ವರ್ಮಾ ಅವರ ಉಪಸ್ಥಿತಿಯು ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆಯನ್ನು ಸೇರಿಸಿದರೆ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರಂತಹ ಫಿನಿಷರ್‌ಗಳು ತಂಡದಲ್ಲಿದ್ದಾರೆ. ಉಪನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಜತೆಗೆ ಬಿರುಸಿನ ಬ್ಯಾಟಿಂಗ್ ಕೂಡ ಮಾಡಬಲ್ಲರು. ವೇಗದ ಬೌಲಿಂಗ್ ವಿಭಾಗವನ್ನು ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಮುನ್ನಡೆಸಲಿದ್ದಾರೆ. ಪೂರ್ಣ ಪ್ರಮಾಣದ ಸ್ಪಿನರ್ ಆಗಿ ವರುಣ್ ಚಕ್ರವರ್ತಿ ಮೊದಲ ಆಯ್ಕೆಯಾಗಬಹುದು.
ಗಾಯ; ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಹರ್ಷಿತ್ ರಾಣಾ!
ಸಂಭಾವ್ಯ ತಂಡಗಳು
ಭಾರತ: ಇಶಾನ್ ಕಿಶನ್ (ವಿ.ಕೀ.), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಜಸ್‌ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ.
ಯುಎಸ್‌ಎ: ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್ (ವಿ.ಕೀ.), ಸೈತೇಜ ಮುಕ್ಕಮಲ್ಲ, ಶಯಾನ್ ಜಹಾಂಗೀರ್, ಮಿಲಿಂದ್ ಕುಮಾರ್, ಶುಭಂ ರಂಜನೆ, ಹರ್ಮೀತ್ ಸಿಂಗ್, ಮೊಹಮ್ಮದ್ ಮೊಹ್ಸಿನ್, ಅಲಿ ಖಾನ್, ನೊಸ್ತುಶ್ ಕೆಂಜಿಗೆ, ಸೌರಭ್ ನೇತ್ರವಾಲ್ಕರ್.
ಟಾಸ್ ಸಮಯ ಮತ್ತು ಪಂದ್ಯದ ಸಮಯ
ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 6.30 ರ ಸುಮಾರಿಗೆ ಟಾಸ್ ನಿರೀಕ್ಷಿಸಲಾಗಿದೆ.
ಮುಖಾಮುಖಿ
ಭಾರತ ಮತ್ತು ಅಮೆರಿಕ ತಂಡಗಳು ಇದುವರೆಗೆ ಟಿ20ಯಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿಯಾಗಿವೆ. ಇದು 2024ರ ಟಿ20 ವಿಶ್ವಕಪ್ ಲೀಗ್ ಪಂದ್ಯವಾಗಿತ್ತು. ಪಂದ್ಯವನ್ನು ಭಾರತ ಜಯಿಸಿತ್ತು.