ಗಾಲೆ, ಆ.15: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಶನಿವಾರ ಗಾಲೆಯಲ್ಲಿ ಟೀಮ್ ಇಂಡಿಯಾ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭಮನ್ ಗಿಲ್ ಮತ್ತು ಇತರ ತಂಡದ ಸದಸ್ಯರು ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದ ವಿಡಿಯೊವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
"ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಟೀಮ್ ಇಂಡಿಯಾ ಮೊದಲ ಟೆಸ್ಟ್‌ಗೆ ಮುಂಚಿತವಾಗಿ ತ್ರಿವರ್ಣ ಧ್ವಜ ಹಾರಿಸಲು ಗಾಲೆಯಲ್ಲಿ ಒಟ್ಟುಗೂಡಿತು" ಎಂದು ಬಿಸಿಸಿಐ ಎಕ್ಸ್(ಟ್ವಿಟರ್) ನಲ್ಲಿ ಬರೆದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಈ ಪಂದ್ಯ ಭಾರತ ಪಾಲಿಗೆ ಐತಿಹಾಸಿಕ ಪಂದ್ಯವಾಗಿದೆ. ಭಾರತವು 600 ಟೆಸ್ಟ್ ಪಂದ್ಯಗಳನ್ನು ಆಡಿದ ಮೊದಲ ಏಷ್ಯಾದ ತಂಡ ಮತ್ತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಂತರ 600 ಟೆಸ್ಟ್ ಪಂದ್ಯಗಳನ್ನು ಆಡಿದ ವಿಶ್ವದ ಮೂರನೇ ತಂಡ ಎನಿಸಿಕೊಂಡಿತು.
600ನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ
ಟೆಸ್ಟ್ ಪಂದ್ಯದ ಮುನ್ನಾದಿನವಾದ ಶುಕ್ರವಾರ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದ ನಾಯಕ ಶುಭಮನ್ ಗಿಲ್, ಸ್ವಾತಂತ್ರ್ಯ ದಿನಾಚರಣೆಯಂದೇ ಇಂತಹ ಮಹತ್ವದ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ಇನ್ನಷ್ಟು ವಿಶೇಷವಾಗಿಸಿದೆ ಎಂದು ಹೇಳಿದರು.
"ಇದು ಬಹಳ ದೊಡ್ಡ ಗೌರವ. ನಿಮ್ಮ ದೇಶಕ್ಕಾಗಿ ನೀವು ಯಾವುದೇ ಟೆಸ್ಟ್ ಪಂದ್ಯವನ್ನು ಮುನ್ನಡೆಸುವುದು ಒಂದು ದೊಡ್ಡ ವಿಷಯ. ನಿಸ್ಸಂಶಯವಾಗಿ, ನಮ್ಮ 600 ನೇ ಟೆಸ್ಟ್ ಪಂದ್ಯದಲ್ಲಿ ನನ್ನ ದೇಶವನ್ನು ಮುನ್ನಡೆಸುವುದು ನನಗೆ ದೊಡ್ಡ ಗೌರವ ಮತ್ತು ಸವಲತ್ತು, ಮತ್ತು ಸ್ವಾತಂತ್ರ್ಯ ದಿನದಂದು ಅದನ್ನು ಮಾಡುವುದು ನಮಗೆ ಇನ್ನಷ್ಟು ವಿಶೇಷವಾಗಿದೆ" ಎಂದು ಗಿಲ್ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಉಭಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್(ನಾಯಕ), ದೇವದತ್ ಪಡಿಕ್ಕಲ್, ರಿಷಬ್ ಪಂತ್(ವಿ.ಕೀ.), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಕುಲದೀಪ್ ಯಾದವ್,ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ಲಹಿರು ಉದಾರ, ನಿಶಾನ್ ಮದುಷ್ಕ, ದಿನೇಶ್ ಚಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ(ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ(ವಿ.ಕೀ.), ಕೇಶರ ನುವಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೋ.