IND vs NZ Final: ಭಾರತ ಕಪ್ ಗೆಲ್ಲಲಿ, ಕೊಹ್ಲಿ ಹಲವು ದಾಖಲೆ ಬರೆಯಲಿ; ಅಭಿಮಾನಿಗಳ ಹಾರೈಕೆ
ಟೂರ್ನಿಯಲ್ಲಿನ ಪ್ರದರ್ಶನ ನೋಡುವಾಗ ಭಾರತ ತಂಡವೇ ಕಪ್ ಗೆಲ್ಲುವ ಫೇವರಿಟ್ ಎನ್ನಬಹುದು. ಏಕೆಂದರೆ, ಆರಂಭಿಕ ಆಟಗಾರ ಶುಭಮನ್ ಗಿಲ್, ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಅಭೂತಪೂರ್ವ ಲಯದಲ್ಲಿದ್ದಾರೆ. ಅಕ್ಷರ್, ಜಡೇಜಾ, ಹಾರ್ದಿಕ್ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲಿಯೂ ಆಲ್ರೌಂಡ್ ಸಾರ್ಮಥ್ಯ ತೋರುತ್ತಿದ್ದಾರೆ.


ದುಬೈ: ಇಂದು ನಡೆಯುವ ನ್ಯೂಜಿಲ್ಯಾಂಡ್(IND vs NZ Final) ವಿರುದ್ಧದ ಫೈನಲ್ ಪಂದ್ಯದಲ್ಲಿ ರನ್ ಮಷಿನ್, ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿಗೆ(Virat Kohli) ಈ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಿಸುವ ಅವಕಾಶವಿದೆ. ಬಹುತೇಕ ಕೊಹ್ಲಿ ಪಾಲಿಗೆ ಇದು ಕೊನೆಯ ಚಾಂಪಿಯನ್ಸ್ ಟ್ರೋಫಿ(Champions Trophy 2025) ಎಂದರೂ ತಪ್ಪಾಗಲಾರದು. ಇನ್ನೊಂದು ಚಾಂಪಿಯನ್ಸ್ ಟ್ರೋಫಿ ಯಾವಾಗ ನಡೆಯಲಿದೆ ಎನ್ನುವುದು ಖಚಿತವಾಗಿಲ್ಲ. ಹೀಗಾಗಿ ಕೊಹ್ಲಿ ತಮ್ಮ ಕೊನೆಯ ಅವಕಾಶದಲ್ಲಿ ಹಲವು ದಾಖಲೆ ನಿರ್ಮಿಸುವಂತಾಗಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ. ಕೊಹ್ಲಿ ನಿರ್ಮಿಸಬಹುದಾದ ದಾಖಲೆ ಪಟ್ಟಿ ಹೀಗಿದೆ.
ಗೇಲ್ ದಾಖಲೆ ಪತನ!
ವಿರಾಟ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ಕೇವಲ 46 ರನ್ ಬಾರಿಸಿದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 791 ರನ್ ಬಾರಿಸಿದ್ದಾರೆ. ಕೊಹ್ಲಿ 746* ರನ್ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಏಕದಿನ ರನ್ ದಾಖಲೆ
ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಸಾಧಕರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ 55 ರನ್ ಬಾರಿಸಿದರೆ, ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ(14234) ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಲಿದ್ದಾರೆ. ಸಚಿನ್ ತೆಂಡೂಲ್ಕರ್(18426) ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ (18426) ಬಾರಿಸಿದ್ದಾರೆ.
ಇದನ್ನೂ ಓದಿ IND vs NZ Final: ಭಾರತದ ಗೆಲುವಿಗೆ ಅಭಿಮಾನಿಗಳಿಂದ ಪೂಜೆ, ಪ್ರಾರ್ಥನೆ
ಸಚಿನ್ ದಾಖಲೆ ಮೇಲೆ ಕಣ್ಣು
ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 94 ರನ್ ಗಡಿ ದಾಟಿದರೆ, ಏಕದಿನ ಮಾದರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅತ್ಯಧಿಕ ರನ್ ಕಲೆ ಹಾಕಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ಸಚಿನ್ ಹೆಸರಿನಲ್ಲಿದೆ. ಸಚಿನ್ 42 ಪಂದ್ಯಗಳಿಂದ ಐದು ಶತಕ ಮತ್ತು ಎಂಟು ಅರ್ಧ ಶತಕಗಳೊಂದಿಗೆ 1750 ರನ್ ಗಳಿಸಿ ದಾಖಲೆ ಹೊಂದಿದ್ದಾರೆ.
ಕಿವೀಸ್ ವಿರುದ್ಧ 3 ಸಾವಿರ ರನ್
ಕೊಹ್ಲಿ 74 ರನ್ ಬಾರಿಸಿದರೆ, ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಪೂರೈಸಿದ ವಿಶ್ವದ 5ನೇ ಹಾಗೂ ಭಾರತದ ಎರಡನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ ಕಿವೀಸ್ ವಿರುದ್ಧ ಇದುವರೆಗೆ 56 ಪಂದ್ಯಗಳಿಂದ ಒಂಬತ್ತು ಶತಕಗಳು ಮತ್ತು 15 ಅರ್ಧ ಶತಕಗಳೊಂದಿಗೆ 2,926* ರನ್ ಗಳಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಅತ್ಯಧಿಕ ರನ್(ಮೂರು ಮಾದರಿಯ ಕ್ರಿಕೆಟ್‌ನಲ್ಲಿ) ಗಳಿಸಿದ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್(3345) ಹೆಸರಿನಲ್ಲಿದೆ. ಆ ಬಳಿಕ ರಿಕಿ ಪಾಂಟಿಂಗ್(3145), ಜಾಕ್ ಕ್ಯಾಲಿಸ್(3071) ಮತ್ತು ಜೋ ರೂಟ್( 3068) ಕಾಣಿಸಿಕೊಂಡಿದ್ದಾರೆ.