US Open 2025: ಭರ್ಜರಿ ಗೆಲುವಿನೊಂದಿಗೆ ಗ್ರ್ಯಾಂಡ್ ಸ್ಲ್ಯಾಮ್‌ನಲ್ಲಿ ಇತಿಹಾಸ ಬರೆದ ಜೊಕೊವಿಕ್
ಈ ಗೆಲುವಿನೊಂದಿಗೆ ಜೊಕೋ, 16ನೇ ಬಾರಿ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಸುತ್ತನ್ನು ದಾಟಿದಂತಾಯಿತು. ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಈ ಹಂತ ತಲುಪಿರುವುದು 69ನೇ ಸಲ!.ಕೂಟದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಜೊಕೋ, ಕೊನೆಯದಾಗಿ 2023ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೋ, 4ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಸವಾಲು ಎದುರಿಸಲಿದ್ದಾರೆ.

-

ನ್ಯೂಯಾರ್ಕ್: 25ನೇ ಗ್ರ್ಯಾಂಡ್‌ಸ್ಲಾಮ್(Grand Slam) ಕಿರೀಟದತ್ತ ದೃಷ್ಟಿ ಹಾಕಿರುವ ನೊವಾಕ್ ಜೊಕೊವಿಕ್(Novak Djokovic), ಯುಎಸ್ ಓಪನ್ ಟೂರ್ನಿಯಲ್ಲಿ(US Open 2025) ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಜತೆಗೆ ದಾಖಲೆಯೊಂದನ್ನು ಕೂಡ ಬರೆದಿದಾರೆ. ಒಂದೇ ಋತುವಿನಲ್ಲಿ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಏಳನೇ ಶ್ರೇಯಾಂಕಿತ ಜೊಕೊವಿಕ್ ಅವರು ಜರ್ಮನಿಯ ಜಾನ್-ಲೆನ್ನಾರ್ಡ್ ಸ್ಟ್ರಫ್ ವಿರುದ್ಧ 6-3, 6-3, 6-2ರ ಅಂತರದಲ್ಲಿ ಸುಲಭ ಜಯ ಗಳಿಸಿದರು. ಕಳೆದ ಪಂದ್ಯದಲ್ಲಿ ಬೆನ್ನುನೋವನ್ನು ಮೀರಿನಿಂತು ಜೋಕೊ ಗೆಲುವು ಸಾಧಿಸಿದ್ದರು. ಆದರೆ ನಾಲ್ಕನೇ ಸುತ್ತಿನ ಹೋರಾಟದಲ್ಲಿ ಆರಾಮವಾಗಿ ಗೆಲುವು ಕಂಡರು.
ಈ ಗೆಲುವಿನೊಂದಿಗೆ 16ನೇ ಬಾರಿ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಸುತ್ತನ್ನು ದಾಟಿದಂತಾಯಿತು. ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಈ ಹಂತ ತಲುಪಿರುವುದು 69ನೇ ಸಲ!.ಕೂಡದಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಜೊಕೋ, ಕೊನೆಯದಾಗಿ 2023ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊಕೋ, 4ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಸವಾಲು ಎದುರಿಸಲಿದ್ದಾರೆ.
ಮತ್ತೊಂದೆಡೆ ಎರಡನೇ ಶ್ರೇಯಾಂಕಿತ ಅಲ್ಕರಾಜ್ ಅವರು ಫ್ರಾನ್ಸ್‌ನ ಅರ್ಥುರ್ ರಿಂಡರ್ನೆಚ್ ವಿರುದ್ಧ 7-6 (7/3), 6-3, 6-4ರ ಅಂತರದಲ್ಲಿ ಪ್ರಯಾಸದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಸಬಲೆಂಕಾ, ಕ್ರೆಜಿಕೋವಾ ಮುನ್ನಡೆ
ಮಹಿಳಾ ಸಿಂಗಲ್ಸ್‌ನಲ್ಲಿ ಅರಿನಾ ಸಬಲೆಂಕಾ, ಬಾರ್ಬೊರಾ ಕ್ರೆಜಿಕೋವಾ ಕೂಡ ಕ್ವಾರ್ಟರ್ ಪೈನಲ್‌ಗೆ ಪ್ರವೇಶಿಸಿದ್ದಾರೆ. ಸಬಲೆಂಕಾ, ಕ್ರಿಸ್ಟಿನಾ ಬುಕ್ಸಾ ವಿರುದ್ಧ 6-1, 6-4 ಸುಲಭ ಜಯ ಗಳಿಸಿದರು. ಆದರೆ ಕ್ರೆಜಿಕೋವಾ ಅವರು ಟೇಲರ್ ಟೌನ್ಸೆಂಡ್ ವಿರುದ್ಧ ಮೊದಲ ಸೆಟ್ ಸೋಲು ಕಂಡರೂ ಆ ಬಳಿಕದ ಎರಡು ಸೆಟ್‌ನಲ್ಲಿ ತೀವ್ರ ಹೋರಾಟ ನಡೆಸಿ ಗೆಲುವು ಸಾಧಿಸಿದರು. ಕಳೆದ ಮೂರನೇ ಸುತ್ತಿನ ಪಂದ್ಯದಲ್ಲಿಯೂ ಅವರು ಕಠಿಣ ಹೋರಾಟದ ಬಳಿಕ ಗೆಲುವು ಕಂಡಿದ್ದರು.
ಇದನ್ನೂ ಓದಿ ಯುಎಸ್ ಓಪನ್; 4ನೇ ಸುತ್ತಿಗೇರಿದ ಜೊಕೋವಿಕ್, ಸಬಲೆಂಕಾ