ʻಅವರು ನನ್ನನ್ನು ನಿಂಧಿಸಿದ್ದರುʼ: ಜೋ ರೂಟ್ ಜತೆ ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ ಪ್ರಸಿಧ್ ಕೃಷ್ಣ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ವೇಳೆ ಆಟಗಾರರ ಪ್ರದರ್ಶನದ ಜೊತೆಗೆ ಆಟಗಾರರ ನಡುವಳಿಕೆಯು ಕೂಡ ಸಾಕಷ್ಟು ಗಮನ ಸೆಳೆದಿತ್ತು. ಸೋಲುವ ಸರಣಿಯನ್ನು ಡ್ರಾ ಮಾಡಿಕೊಂಡಿದ್ದ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ, ಆಂಗ್ಲರ ವಿರುದ್ದ ಕಠಿಣ ಪೈಪೋಟಿ ನಡೆಸಿತ್ತು.

ಜೋ ರೂಟ್ ಜೊತೆಗಿನ ಕಿರಿಕ್ ಬಗ್ಗೆ ಪ್ರಸಿಧ್ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. -

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವೆ ಇತ್ತೀಚೆಗೆ ಅಂತ್ಯವಾಗಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿ ಡ್ರಾನಲ್ಲಿ ಅಂತ್ಯವಾಗಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿಯೂ ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಕಠಿಣ ಹೋರಾಟ ನಡೆಸಿತ್ತು. ಆ ಮೂಲಕ ಡ್ರಾ ಮಾಡಿಕೊಂಡಿತ್ತು. ಆದರೆ, ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಸಾಕಷ್ಟು ಸ್ಲೆಡ್ಜಿಂಗ್ ನಡೆದಿತ್ತು. ಅದರಂತೆ ಭಾರತ ತಂಡದ ವೇಗದ ಬೌಲರ್ ಪ್ರಸಿಧ್ ಕೃಷ್ಣ (Prasidh Krishna) ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ (Joe Root) ಅವರ ನಡುವೆ ಈ ಸರಣಿಯ ವೇಳೆ ಮಾತಿನ ಚಕಮಕಿ ನಡೆದಿತ್ತು. ಈ ಬಗ್ಗೆ ಇದೀಗ ಕನ್ನಡಿಗ ಪ್ರಸಿಧ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ದಿ ಓವಲ್ ಟೆಸ್ಟ್ ಪಂದ್ಯದ ವೇಳೆ ಪ್ರಸಿಧ್ ಕೃಷ್ಣ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಯಾವಾಗಲೂ ತಾಳ್ಮೆಯಿಂದ ಇರುತ್ತಿದ್ದ ಜೋ ರೂಟ್ ಅವರು ಅಂದು ತಾಳ್ಮೆ ಕಳೆದುಕೊಂಡಿದ್ದರು. ಪ್ರಸಿಧ್ ಕೃಷ್ಣ ಅವರಿಗೆ ಏನನ್ನೂ ಹೇಳಿದ್ದರು. ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂಪೈರ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಸರಿದೂಗಿಸಿದ್ದರು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇಎಸ್‌ಪಿಎನ್ ಜೊತೆ ಮಾತನಾಡಿದ ಪ್ರಸಿಧ್ ಕೃಷ್ಣ, ಈ ಘಟನೆಯ ಬಗ್ಗೆ ವಿವರಿಸಿದ್ದಾರೆ.
IND vs ENG ಸಂಯೋಜನೆಯ ಪ್ಲೇಯಿಂಗ್ XI ಪ್ರಕಟಿಸಿದ ಆಕಾಶ ಚೋಪ್ರಾ!
"ಜೋ ರೂಟ್ ಏಕೆ ಪ್ರತಿಕ್ರಿಯಿಸಿದರು ಎಂಬುದು ನನಗೆ ಗೊತ್ತಿಲ್ಲ. ನೀವು ತುಂಬಾ ಒಳ್ಳೆಯ ಫಾರ್ಮ್‌ನಲ್ಲಿದ್ದೀರಿ ಎಂದು ನಾನೇಳಿದ್ದೆ ಅಷ್ಟೆ. ನಂತರ ಇದು ನಿಂದನೆಯಾಗಿ ಬದಲಾಯಿತು. ತದ ನಂತರ ನಮ್ಮ ನಡುವಿನ ಪರಿಸ್ಥಿತಿ ಸರಿಯಾಯಿತು. ಜೋ ರೂಟ್ ಸೇರಿದಂತೆ ಎಲ್ಲರ ಬಳಿಯೂ ನಾನು ಹೋಗಿ ಮಾತನಾಡುತ್ತೇನೆ. ಅದರಂತೆ ದಿನದಾಂತ್ಯಕ್ಕೆ ನಾನು ಅವರ ಬಳಿ ಹೋಗಿ ಏನಾಯಿತು? ಎಂದು ಕೇಳಿದೆ. ಅದಕ್ಕೆ ಅವರು ʻನೀವು ನನ್ನನ್ನು ನಿಂದಿಸಿದ್ದೀರಿ ಎಂದು ಭಾವಿಸಿದ್ದೆ. ಇದಕ್ಕೆ ನಾನು ಹೇಳಿದೆ, ʻಇಲ್ಲʼ ಎಂದು. ನಂತರ ಅವರು ʻನಾನು ಕೂಡ ನನ್ನನ್ನು ಮುಂದುವರಿಸಲು ಬಯಸಿದ್ದೆ, ಹಾಗಾಗಿ ನನ್ನನ್ನು ನಾನು ಬಲಪಡಿಸಿಕೊಳ್ಳಲು ಬಯಸಿದ್ದೆ ಎಂದಿದ್ದರು," ಎಂದು ಪ್ರಸಿಧ್ ಕೃಷ್ಣ ತಿಳಿಸಿದ್ದಾರೆ.
ತಪ್ಪು ತಿಳುವಳಿಕೆ
"ಈ ಕ್ರೀಡೆಯಲ್ಲಿ ನನಗೆ ಇಷ್ಟವಾದದ್ದು ಇದೇ- ನಾನು ಯಾವಾಗಲೂ ಆಡುತ್ತಾ ಬಂದಿರುವ ರೀತಿ ಇದೇ. ಎಲ್ಲರೂ, ವಿಶೇಷವಾಗಿ ಅವರಂತಹ (ಜೋ ರೂಟ್) ದಂತಕಥೆಯೊಬ್ಬರು, ಇಂದಿಗೂ ಸಹ ಎಲ್ಲವನ್ನೂ ಬಹಿರಂಗಪಡಿಸಿ ತಂಡಕ್ಕಾಗಿ ಹೋರಾಡುವುದನ್ನು ನೋಡುವುದು, ಎಲ್ಲರೂ ಕಲಿಯಬೇಕಾದ ಸಂಗತಿ. ನೀವು ಪಂದ್ಯವನ್ನು ಗೆಲ್ಲಲು, ಹೋರಾಟ ನಡೆಸುತ್ತೀರಿ. ಕೆಲವೊಮ್ಮೆ ಇದು ಕೇವಲ ಕೌಶಲಕ್ಕಿಂತ ಹೆಚ್ಚಿನದನ್ನು ತೆಗೆದುಕೊಳ್ಳುತ್ತದೆ; ಆ ಪ್ರಯಾಣದ ಭಾಗವಾಗಲು ಸಾಕಷ್ಟು ಮಾನಸಿಕ ದೃಢತೆಯನ್ನು ತೆಗೆದುಕೊಳ್ಳುತ್ತದೆ," ಎಂದು ವೇಗದ ಬೌಲರ್ ತಿಳಿಸಿದ್ದಾರೆ.
Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಟಾಪ್-5 ಆಟಗಾರರು
ಸರಣಿಯ ಫಲಿತಾಂಶದ ಬಗ್ಗೆ ಪ್ರಸಿಧ್ ಕೃಷ್ಣ ಸಂತಸ
"ಈ ಸರಣಿಯಲ್ಲಿ ಇಂಥಾ ಫಲಿತಾಂಶವನ್ನು ನಾವು ಯಾರೂ ಈ ರೀತಿ ನಿರೀಕ್ಷೆ ಮಾಡಿರಲಿಲ್ಲ. ಈ ಸರಣಿಯು ಹಿಂದಕ್ಕೆ ಹಾಗೂ ಮುಂದಕ್ಕೆ ತೂಗುತ್ತಲೇ ಇತ್ತು. 2-2 ಅಂತರದಲ್ಲಿ ಸರಣಿ ಡ್ರಾ ಆಗಿದ್ದು ಹಾಗೂ ಈ ಸರಣಿಯಲ್ಲಿ ನಾವು ತೋರಿದ ಪ್ರದರ್ಶನದ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ," ಎಂದು ಪ್ರಸಿಧ್ ಕೃಷ್ಣ ಹೇಳಿದ್ದಾರೆ.