ಜೈಪುರ: ಯಾರೂ ನಿರೀಕ್ಷೆ ಮಾಡದ ಸಮಯದಲ್ಲಿ ಸೋಮವಾರ ರಾತ್ರಿ ಪಿಂಕ್ ಸಿಟಿ ಜೈಪುರದಲ್ಲಿ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ 14 ವರ್ಷದ ಎಡಗೈ ಬ್ಯಾಟರ್ ವೈಭವ ಸೂರ್ಯವಂಶಿ(Vaibhav Suryavanshi) ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚೊಚ್ಚಲ ಶತಕ ಬಾರಿಸಿ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದಾರೆ. ಇವರ ಸಾಧನೆಯನ್ನು ಕ್ರಿಕೆಟ್ ಜಗತ್ತು ಕೊಂಡಾಡಿದೆ. ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಈ ಪೋರ ದಿಗ್ಗಜ ಆಟಗಾರರ ಹಲವು ದಾಖಲೆಗಳನ್ನು ಮುರಿದು ಮಿಂಚಿದ್ದಾನೆ. ದಾಖಲೆ ಪಟ್ಟಿ ಹೀಗಿದೆ.
ಅತಿ ಕಿರಿಯ ಆಟಗಾರ
ವೈಭವ್ ಸೂರ್ಯವಂಶಿ (14 ವರ್ಷ, 32 ದಿನ) ಈ ಶತಕದ ಮೂಲಕ ಟಿ20 ಇತಿಹಾಸದಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿದರು. ಇದಕ್ಕೂ ಮುನ್ನ ಈ ದಾಖಲೆ ಮಹಾರಾಷ್ಟ್ರದ ವಿಜಯ್ ಜೋಲ್ (18 ವರ್ಷ, 118 ದಿನಗಳು) ಹೆಸರಿನಲ್ಲಿತ್ತು.
ಐಪಿಎಲ್‌ನಲ್ಲಿ 2ನೇ ಅತಿ ವೇಗದ ಶತಕ
ಬಿರುಸಿನ ಬ್ಯಾಟಿಂಗ್ ಮೂಲಕ 35 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ 2ನೇ ಹಾಗೂ ಮೊದಲ ಭಾರತೀಯ ಬ್ಯಾಟರ್ ಎನಿಸಿದರು. ಐಪಿಎಲ್‌ನ ಅತಿ ವೇಗದ ಶತಕ ದಾಖಲೆ ಕ್ರಿಸ್‌ಗೇಲ್ (30 ಬಾಲ್) ಹೆಸರಿನಲ್ಲಿದೆ.
ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ಹೊಸ ಮೈಲಿಗಲ್ಲನ್ನೂ ಕೂಡ ನೆಟ್ಟಿದ್ದಾರೆ. ಇದಕ್ಕೂ ಮೊದಲು 2010ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಯೂಸುಫ್ ಪಠಾಣ್ ಮುಂಬೈ ಇಂಡಿಯನ್ಸ್ ಎದುರು 37 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ್ದರು.
ಎದುರಾಳಿ ತಂಡದ ವಿಶ್ವದರ್ಜೆಯ ಬೌಲರ್‌ಗಳೆದುರು ಫಿಯರ್ಲೆಸ್ ಬ್ಯಾಟಿಂಗ್ ನಡೆಸಿದ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು. ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ಹಾಲಿ ಆವೃತ್ತಿಯಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಒಟ್ಟಾರೆಯಾಗಿ 38 ಎಸೆತಗಳಿಂದ 101 ರನ್ ಬಾರಿಸಿ ಮಿಂಚಿದರು. ಅವರ ಈ ಅಬ್ಬರದ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 11 ಸೊಗಸಾದ ಸಿಕ್ಸರ್ ಸಿಡಿಯಿತು. ಇದೇ ರೀತಿ ಮುಂದಿನ ಪಂದ್ಯಗಳಲ್ಲಿಯೂ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಿದ್ದೇ ಆದರೆ ಭಾರತ ಕ್ರಿಕೆಟ್ ತಂಡಕ್ಕೂ ಪದಾರ್ಪಣೆ ಮಾಡುವ ದಿನಗಳು ಹೆಚ್ಚು ದೂರ ಇಲ್ಲ.
ಇದನ್ನೂ ಓದಿ IPL 2025 Points Table: ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದ ರಾಜಸ್ಥಾನ್