ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಸೂರ್ಯವಂಶಿ ಶತಕ ಕಂಡು ವೀಲ್‌ ಚೇರ್‌ನಿಂದ ಎದ್ದು ಸಂಭ್ರಮಿಸಿದ ದ್ರಾವಿಡ್‌

ಸಿಡಿಲಬ್ಬರದ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ, 11 ಸಿಕ್ಸರ್‌ಗಳಿದ್ದವು. ಅಂದರೆ ತಾವು ಗಳಿಸಿದ 101 ರನ್‌ಗಳ ಪೈಕಿ 94 ರನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳ ( ಶೇ 93.06) ಮೂಲಕವೇ ಹರಿದು ಬಂದಿತ್ತು. ಇದು ಕೂಡ ದಾಖಲೆಯಾಗಿದೆ.

ಜೈಪುರ: 14 ವರ್ಷದ ವೈಭವ್ ಸೂರ್ಯವಂಶಿಯ(Vaibhav Suryavanshi) ಸಿಡಿಲಬ್ಬರದ ಶತಕ ಕಂಡು ರಾಜಸ್ಥಾನ ರಾಯಲ್ಸ್(Rajasthan Royals) ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌(Rahul Dravid) ತಮ್ಮ ಕಾಲು ನೋವನ್ನು ಮರೆತು ವೀಲ್‌ ಚೇರ್‌ನಿಂದ ಎದ್ದು ಜೋಶ್‌ನಲ್ಲಿಯೇ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 14ರ ಪೋರನ ನಿರ್ಭೀತಿಯ ಬ್ಯಾಟಿಂಗ್‌ ಎದುರು ಟೈಟನ್ಸ್ ಬೌಲರ್‌ಗಳು ಬೆಚ್ಚಿದರು. ಅನುಭವಿ ರಶೀದ್‌ ಖಾನ್‌ ಎಸೆತದಲ್ಲಿ ಮಿಡ್‌ವಿಕೆಟ್‌ಗೆ ಸಿಕ್ಸರ್‌ ಎತ್ತುವ ಮೂಲಕ ಶತಕ ಪೂರೈಸಿದ ಸೂರ್ಯವಂಶಿಯ ಅತ್ಯಮೋಘ ಆಟ ಕೊನೆಗೊಂಡಾಗ ತಕ್ಷಣ ಎದುರಾಳಿ ತಂಡದ ಆಟಗಾರರು ಮುಂದೆ ಹೋಗಿ ಅವರನ್ನು ಆಲಂಗಿಸಿಕೊಂಡು ಅಭಿನಂದಿಸಿದರು‌.

ಸಿಡಿಲಬ್ಬರದ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ, 11 ಸಿಕ್ಸರ್‌ಗಳಿದ್ದವು. ಅಂದರೆ ತಾವು ಗಳಿಸಿದ 101 ರನ್‌ಗಳ ಪೈಕಿ 94 ರನ್‌ಗಳು ಬೌಂಡರಿ ಹಾಗೂ ಸಿಕ್ಸರ್‌ಗಳ ( ಶೇ 93.06) ಮೂಲಕವೇ ಹರಿದು ಬಂದಿತ್ತು. ಇದು ಕೂಡ ದಾಖಲೆಯಾಗಿದೆ.



ಸಿಕ್ಸರ್‌ ದಾಖಲೆ

ಮೈದಾನದ ಮೂಲೆ ಮೂಲೆಗೂ ಸಿಕ್ಸರ್‌ ಬಾರಿಸಿದ ಸೂರ್ಯವಂಶಿ, ಐಪಿಎಲ್ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಸಾಲಿನಲ್ಲಿ ಮುರಳಿ ವಿಜಯ್ ದಾಖಲೆಯನ್ನು ಸರಿಗಟ್ಟಿದ್ದರು. 2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ವಿಜಯ್, 11 ಸಿಕ್ಸರ್‌ಗಳನ್ನು ಬಾರಿಸಿದ್ದರು. ಸೂರ್ಯವಂಶಿ ಕೂಡ ಗುಜರಾತ್‌ ವಿರುದ್ಧ 11 ಸಿಕ್ಸರ್‌ ಬಾರಿಸಿದರು.

ಮನೀಷ್ ಪಾಂಡೆ ದಾಖಲೆ ಪತನ

ಶತಕ ಮೂಲಕ ಕನ್ನಡಿಗ ಮನೀಷ್ ಪಾಂಡೆ ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಸೂರ್ಯವಂಶಿ ಮುರಿದಿದ್ದಾರೆ. ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಮನೀಷ್‌ ಪಾಂಡೆ (19 ವರ್ಷ, 253 ದಿನ) ಹೆಸರಿನಲ್ಲಿತ್ತು. ಸೂರ್ಯವಂಶಿ 14 ವರ್ಷದಲ್ಲೇ ಶತಕ ಬಾರಿಸಿ ಮಿಂಚಿದರು.

ಇದನ್ನೂ ಓದಿ IPL 2025: ದಿಗ್ಗಜ ಸಚಿನ್‌, ಲಾರಾ ಮನಗೆದ್ದ ವೈಭವ್ ಸೂರ್ಯವಂಶಿ

ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್‌ 4 ವಿಕೆಟ್‌ ನಷ್ಟಕ್ಕೆ 209 ರನ್‌ ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌ 15.5 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ 212 ರನ್‌ ಬಾರಿಸಿ ಅಧಿಕಾರಯುತ ಗೆಲುವು ದಾಖಲಿಸಿತು. ಗುಜರಾತ್‌ ಬೌಲಿಂಗ್ ವಿಚಾರದಲ್ಲಿ ಹಿಂದುಳಿದ ಕಾರಣ ರಾಜಸ್ಥಾನದ ಪಾಲಿಗೆ ಈ ಮೊತ್ತ ಅಷ್ಟು ದೊಡ್ಡ ಸವಾಲು ಆಗಿ ಪರಿಣಮಿಸಲಿಲ್ಲ.