ಮುಂಬಯಿ, ಫೆ.15: ಹಾಲಿ ಆವೃತ್ತಿಯ ಟಿ20 ವಿಶ್ವಕಪ್(T20 World Cup 2026) ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ, ವೆಸ್ಟ್ ಇಂಡೀಸ್(West Indies vs Nepal) ತಂಡವು ನೇಪಾಳವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ ಸೂಪರ್ 8 ರಲ್ಲಿ ಸ್ಥಾನ ಕಾಯ್ದಿರಿಸಿತು. ಇದು ವೆಸ್ಟ್ ಇಂಡೀಸ್‌ಗೆ ಟೂರ್ನಿಯಲ್ಲಿ ಒಲಿದ ಹ್ಯಾಟ್ರಿಕ್ ಗೆಲುವಾಗಿದೆ. ಚೇಸಿಂಗ್ ವೇಳೆ ನಾಯಕ ಶೈ ಹೋಪ್(Shai Hope) ಅಜೇಯ 61, ಶಿಮ್ರಾನ್ ಹೆಟ್ಮೆಯರ್ ಅಜೇಯ 46 ರನ್‌ಗಳ ಕೊಡುಗೆ ನೀಡಿದರು.
ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತು. ಆಯ್ಕೆಗೆ ತಕ್ಕ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ನೇಪಾಳವನ್ನು 133 ರನ್‌ಗೆ ಕಟ್ಟಿಹಾಕಿತು. ಬಳಿಕ ಸಣ್ಣ ಮೊತ್ತ ಹಿಂಬಾಲಿಸಿದ ವಿಂಡೀಸ್ 15.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 134 ರನ್ ಬಾರಿಸಿ ಸುಲಭ ಗೆಲುವು ಸಾಧಿಸಿತು.
ಚೇಸಿಂಗ್ ವೇಳೆ ಶೈ ಹೋಪ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ನೇಪಾಳ ಬೌಲರ್‌ಗಳನ್ನು ದಂಡಿಸುತ್ತಲೇ ಸಾಗಿದ ಅವರು 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಹೆಟ್ಮೆಯರ್ 4 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಆರಂಭಿಕ ಬ್ಯಾಟರ್ ಬ್ರೆಂಡನ್ ಕಿಂಗ್ 22 ರನ್ ಗಳಿಸಿದರು.
IND vs PAK: ಭಾರತ ಪಂದ್ಯಕ್ಕೂ ಮುನ್ನ ಪಾಕ್ ಡಗೌಟ್‌ನಲ್ಲಿ ಹಾವು ಪ್ರತ್ಯಕ್ಷ!
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನೇಪಾಳ ತಂಡಕ್ಕೆ ವಿಂಡೀಸ್ ವೇಗಿ ಜೇಸನ್ ಹೋಲ್ಡರ್ ಘಾತಕ ಬೌಲಿಂಗ್ ದಾಳಿ ಮೂಲಕ ಇನ್ನಿಲ್ಲದಂತೆ ಕಾಡಿದರು. ತಂಡ 50 ರನ್ ಗಳಿಸುವ ಮುನ್ನವೇ 5 ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ತಂಡ 100ರ ಗಡಿ ದಾಟುವುದು ಕಷ್ಟ ಎಂಬ ಸ್ಥಿತಿ ಎದುರಾಯಿತು. ಈ ವೇಳೆ ದೀಪೇಂದ್ರ ಸಿಂಗ್ ಐರೀ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಬಾರಿಸುವ ಮೂಲಕ ತಂಡ ಸ್ಫರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾದರು.
ತಲಾ 3 ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 58 ರನ್ ಬಾರಿಸಿದರು. ಇವರಿಗೆ ಸಣ್ಣ ಜತೆಯಾಟದ ನೆರವು ನೀಡಿದ ಸೋಂಪಾಲ್ ಕಾಮಿ ಅಜೇಯ 26ರನ್‌ಗಳ ಕೊಡುಗೆ ನೀಡಿದರು. ಹೋಲ್ಡರ್ ನಾಲ್ಕು ಓವರ್ ಬೌಲಿಂಗ್ ದಾಳಿ ನಡೆಸಿ 27 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರು.