ಕೋಲ್ಕತಾ, ಫೆ.27: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಜಿಂಬಾಬ್ವೆಯನ್ನು 72 ರನ್‌ಗಳಿಂದ ಸೋಲಿಸಿದ ಕಾರಣ ತಂಡದ ಸೆಮಿಫೈನಲ್ ಆಸೆ ಜೀವಂತವಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್(Eden Gardens)ನಲ್ಲಿ ಭಾನುವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್(India vs West Indies) ತಂಡವನ್ನು ಎದುರಿಸಲಿದೆ. ಆ ಪಂದ್ಯದ ವಿಜೇತರು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಭಾರತದ ಗೆಲುವಿನೊಂದಿಗೆ, ಜಿಂಬಾಬ್ವೆ ತಂಡವು ಹೊರಬಿದ್ದಿದ್ದು, ದಕ್ಷಿಣ ಆಫ್ರಿಕಾ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ನಾಕೌಟ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದಾಗ್ಯೂ, ಭಾನುವಾರ ಕೋಲ್ಕತ್ತಾದಲ್ಲಿ ಮಳೆ(Rain at Eden Gardens) ಬಂದು ಪಂದ್ಯ ರದ್ದಾದರೆ ಏನಾಗಬಹುದು? ಎಂಬ ಮಾಹಿತಿ ಇಲ್ಲಿದೆ.
ಭಾರತ-ವಿಂಡೀಸ್ ಪಂದ್ಯ ಮಳೆ ಅಥವಾ ಬೇರಾವುದೇ ಕಾರಣದಿಂದ ರದ್ದುಗೊಂಡರೆ, ಹಾಲಿ ರನ್‌ರೇಟ್ ಪ್ರಕಾರ ವಿಂಡೀಸ್ ತಂಡವೇ ಸೆಮಿಫೈನಲ್ಗೇರಲಿದೆ. ಜಿಂಬಾಬ್ವೆ ವಿರುದ್ಧ ಭಾರತ 108 ರನ್‌ಗಳಿಂದ ಗೆದ್ದರಷ್ಟೇ ರನ್ರೇಟ್ನಲ್ಲಿ ವಿಂಡೀಸ್ ತಂಡವನ್ನು ಹಿಂದಿಕ್ಕಬಹುದಾಗಿತ್ತು.
ಜಿಂಬಾಬ್ವೆ ವಿರುದ್ಧ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಗೆ ಪೂರ್ಣ ನಾಲ್ಕು ಓವರ್ ಕೋಟ ನೀಡದ ಕಾರಣ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತೀವ್ರ ಟೀಕೆಗೆ ಗುರಿಪಡಿಸಲಾಗಿದೆ. ಶಿವಂ ದುಬೆ ಎರಡು ಓವರ್‌ಗಳನ್ನು ಬೌಲ್ ಮಾಡಿ 46 ರನ್‌ಗಳನ್ನು ಬಿಟ್ಟುಕೊಟ್ಟರು. ಬುಮ್ರಾ ಮತ್ತು ಹಾರ್ದಿಕ್ ಆ ಎರಡು ಓವರ್‌ಗಳನ್ನು ಬೌಲ್ ಮಾಡಿದ್ದರೆ, ಭಾರತ 100 ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಗೆದ್ದು ನೆಟ್ ರನ್‌ರೇಟ್ ವಿಷಯದಲ್ಲಿ ಉತ್ತಮ ಸ್ಥಾನದಲ್ಲಿರುತ್ತಿತ್ತು.
IND vs ZIM: ಜಿಂಬಾಬ್ವೆ ವಿರುದ್ಧ ಭರ್ಜರಿಯಾಗಿ ಗೆದ್ದ ಭಾರತ ತಂಡದ ಸೆಮಿಫೈನಲ್ಸ್ ಆಸೆ ಜೀವಂತ!
ದಕ್ಷಿಣ ಆಫ್ರಿಕಾ ಭಾನುವಾರ ಜಿಂಬಾಬ್ವೆ ವಿರುದ್ಧ ಸೂಪರ್-8 ಹಂತದ ತನ್ನ ಕೊನೇ ಪಂದ್ಯ ಆಡಲಿರುವುದರಿಂದ ಗ್ರೂಪ್-1ರಲ್ಲಿ ಅಗ್ರಸ್ಥಾನವನ್ನೂ ಗಳಿಸುವುದು ಬಹುತೇಕ ಖಚಿತವೆನಿಸಿದೆ. ಇದರಿಂದ ಭಾರತ-ವಿಂಡೀಸ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಗ್ರೂಪ್-1ರ 2ನೇ ತಂಡವಾಗಿ ಸೆಮಿಫೈನಲ್ಗೇರಲಿದೆ.
ಭಾನುವಾರದಂದು ಕೋಲ್ಕತ್ತಾದ ಹವಾಮಾನ ಹೇಗಿದೆ?
ಭಾನುವಾರ (ಮಾರ್ಚ್ 1) ಕೋಲ್ಕತ್ತಾದಲ್ಲಿ ಬಿಸಿಲು ಮತ್ತು ಸ್ಪಷ್ಟ ವಾತಾವರಣವಿರುತ್ತದೆ ಎಂದು ಹವಾಮಾನ ಮುನ್ಸೂಚನೆ ಇದೆ. ಹಗಲಿನ ವೇಳೆಯಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದ್ದು, ಪಂದ್ಯ ಆರಂಭವಾಗುವ ಹೊತ್ತಿಗೆ ಅದು 25-26 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ. ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ.