ಮುಲ್ಲನ್‌ಪುರ, ಮಾ.31: ಮಂಗಳವಾರ ಮುಲ್ಲನ್‌ಪುರದಲ್ಲಿ ಪಂಜಾಬ್ ಕಿಂಗ್ಸ್(PBKS vs GT) ವಿರುದ್ಧ ನಡೆದ 2026 ರ ಋತುವಿನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(Gujarat Titans) ಪರ ಹೊಸ ವೇಗಿ ಅಶೋಕ್ ಶರ್ಮಾ ಐಪಿಎಲ್(IPL 2026)ಗೆ ಪದಾರ್ಪಣೆ ಮಾಡಿದರು. ಆತಿಥೇಯರು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಗುಜರಾತ್ ಟೈಟಾನ್ಸ್ ತಂಡವು ಅಶೋಕ್ ಶರ್ಮಾ ಮತ್ತು ಗ್ಲೆನ್ ಫಿಲಿಪ್ಸ್ ಅವರಿಗೆ ಚೊಚ್ಚಲ ಪಂದ್ಯಗಳನ್ನು ನೀಡಿ, ಜೇಸನ್ ಹೋಲ್ಡರ್ ಅವರನ್ನು ಹೊರಗಿಟ್ಟಿತು. ಫಿಲಿಪ್ಸ್, ಜೋಸ್ ಬಟ್ಲರ್, ಕಗಿಸೊ ರಬಾಡ ಮತ್ತು ರಶೀದ್ ಖಾನ್ ತಮ್ಮ ವಿದೇಶಿ ಸಂಯೋಜನೆಯನ್ನು ರಚಿಸಿಕೊಂಡರು.
ಅಶೋಕ್ ಶರ್ಮಾ ಯಾರು?
ರಾಜಸ್ಥಾನ್ ಜೊತೆಗಿನ ದೇಶೀಯ ಋತುವಿನ ಉತ್ತಮ ಪ್ರದರ್ಶನದ ನಂತರ, 23 ವರ್ಷದ ಅಶೋಕ್ ಅವರನ್ನು ಅಬುಧಾಬಿಯಲ್ಲಿ ನಡೆದ ಐಪಿಎಲ್ 2026 ರ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 90 ಲಕ್ಷ ರೂ.ಗೆ ಖರೀದಿಸಿತು. ಇತ್ತೀಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ಥಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.. ಗ್ರೂಪ್ ಹಂತದಲ್ಲಿ ಅಶೋಕ್ 12.10 ಸರಾಸರಿ ಮತ್ತು 8.84 ಎಕಾನಮಿ ದರದೊಂದಿಗೆ 19 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.
ಬಲಗೈ ವೇಗದ ಬೌಲರ್ ಆಗಿರುವ ಅಶೋಕ್, ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಈ ಹಿಂದೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ನೆಟ್ ಬೌಲರ್ ಆಗಿದ್ದರು. 2025 ರ ಐಪಿಎಲ್‌ನಲ್ಲಿ 30 ಲಕ್ಷ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದರು. ಆದರೆ ಆಡುವ ಅವಕಾಶ ಸಿಗಲಿಲ್ಲ.
"ಕಳೆದ ಎರಡು ವಾರಗಳಲ್ಲಿ, ಈ ಋತುವಿನಲ್ಲಿ ಅವರು ನಮ್ಮ ಬೌಲಿಂಗ್ ಘಟಕದ ಪ್ರಮುಖ ಭಾಗವಾಗಬಲ್ಲರು ಎಂಬುದು ನಮಗೆ ತಿಳಿಯಿತು" ಎಂದು ಗುಜರಾತ್ ಟೈಟನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಹೇಳಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್
ಅಶೋಕ್ ಮೊದಲ ವೃತ್ತಿಪರ ಟಿ20 ಪಂದ್ಯದಲ್ಲಿ ಅವರು ತಮಿಳುನಾಡಿನ ವಿರುದ್ಧದ ಪಂದ್ಯದಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು. ಮತ್ತು ನಂತರ ತ್ರಿಪುರ ವಿರುದ್ಧ ಎರಡು ವಿಕೆಟ್ ಕಬಳಿಸಿದ್ದರು. ಕರ್ನಾಟಕ ವಿರುದ್ಧ, 43 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದಿದ್ದರು. ನಂತರ ಉತ್ತರಾಖಂಡ ಮತ್ತು ಸೌರಾಷ್ಟ್ರ ವಿರುದ್ಧ ಸತತ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು.
ಉಭಯ ಆಡುವ ಬಳಗ
ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್ (ವಿ.ಕೀ.), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್(ಸಿ), ಜೋಸ್ ಬಟ್ಲರ್(ಡಬ್ಲ್ಯೂ), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಎಂ ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್.