ಅಬುಧಾಬಿ, ಡಿ.15: ಇಂಡಿಯನ್ ಪ್ರೀಮಿಯರ್ ಲೀಗ್ (IPL Auction 2026) 2025ರ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳ ಮಾಲಿಕರು ಅಬುಧಾಬಿ ತಲುಪಿದ್ದು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ. ಮುಂಬೈ ಮೂಲದ ಮಲ್ಲಿಕಾ ಸಾಗರ್(Who is Mallika Sagar) ಹರಾಜುಗಾರ್ತಿಯಾಗಿದ್ದಾರೆ.
ಮುಂಬೈ ಮೂಲದ 50 ವರ್ಷದ ಮಲ್ಲಿಕಾ ಸಾಗರ್ ಫಿಲಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಲ್ಲಿ ಕಲಾ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಜಗತ್ತಿನ ಶ್ರೇಷ್ಠ ಹರಾಜುಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿರುವ ಮಲ್ಲಿಕಾ ಸಾಗರ್ ಕಲಾ ಸಂಗ್ರಾಹಕಿ ಮತ್ತು ಸಲಹೆಗಾರ್ತಿಯಾಗಿದ್ದಾರೆ. ಮಲ್ಲಿಕಾ ಸಾಗರ್ ಅವರಿಗೆ ಇದು ಮೊದಲ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲ. ಸತತ ಮೂರನೇ ಬಾರಿಗೆ ಐಪಿಎಲ್ ಹರಾಜನ್ನು ಅವರು ಮುನ್ನಡೆಸುತ್ತಿದ್ದಾರೆ.
2023 ರಲ್ಲಿ ದುಬೈನಲ್ಲಿ ಮಿನಿ-ಹರಾಜನ್ನು ನಡೆಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹರಾಜುದಾರರಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಾಗರ್ ಪಾತ್ರರಾದರು. ನಂತರ ಅವರು 2024 ರ ನವೆಂಬರ್‌ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 2025 ಮೆಗಾ ಹರಾಜನ್ನು ನಿರ್ವಹಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದೀಗ ಮೂರನೇ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ ಐಪಿಎಲ್ ಮಿನಿ ಹರಾಜು: ದಿನಾಂಕ, ಸಮಯ, ಸ್ಥಳ, ನೇರ ಪ್ರಸಾರದ ಮಾಹಿತಿ ಇಲ್ಲಿದೆ
ಕ್ರೀಡಾ ಹರಾಜಿನಲ್ಲಿ ಅವರ ಪ್ರಯಾಣವು 2021 ರಲ್ಲಿ ಪ್ರಾರಂಭವಾಯಿತು. ಮೊದಲ ಬಾರಿಗೆ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಾಜು ನಡೆಸಿಕೊಟ್ಟರು. ಆ ಬಳಿಕ 2023 ರಲ್ಲಿ ಉದ್ಘಾಟನಾ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಹರಾಜನ್ನು ನಿರ್ವಹಿಸುವುದರೊಂದಿಗೆ ಕ್ರಿಕೆಟ್ ಲೋಕದ ಹರಾಜಿಗೆ ಎಂಟ್ರಿಕೊಟ್ಟರು.
ಮಲ್ಲಿಕಾ ಸಾಗರ್ ಅವರ ಆಸ್ತಿ ಮೌಲ್ಯ
ವರದಿಗಳ ಪ್ರಕಾರ, ಮಲ್ಲಿಕಾ ಸಾಗರ್ ಅವರ ನಿವ್ವಳ ಮೌಲ್ಯ ಸುಮಾರು 16 ಮಿಲಿಯನ್ ಅಮೇರಿಕನ್ ಡಾಲರ್ ಅಥವಾ ಸುಮಾರು 12೭ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಹರಾಜು ಟೇಬಲ್‌ನಲ್ಲಿ ಶ್ರೇಯಸ್ ಅಯ್ಯರ್
ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅನುಪಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹರಾಜಿನ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ. ಆಶಸ್ ಸರಣಿಗಾಗಿ ಆಸ್ಟ್ರೇಲಿಯಾದಲ್ಲಿ ಚಾನೆಲ್ ಸೆವೆನ್ ನೆಟ್‌ವರ್ಕ್‌ನೊಂದಿಗೆ ಕಾಮೆಂಟರಿ ತಂಡದ ಭಾಗವಾಗಿ ಪಾಂಟಿಂಗ್ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಮಿನಿ ಹರಾಜಿನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಯ್ಯರ್ ಅವರೊಂದಿಗೆ ಫ್ರಾಂಚೈಸಿಯ ಹೊಸ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ, ಸಹಾಯಕ ಬೌಲಿಂಗ್ ಕೋಚ್ ಟ್ರೆವರ್ ಗೊನ್ಸಾಲ್ವೆಸ್ ಮತ್ತು ಜನರಲ್ ಮ್ಯಾನೇಜರ್ ಆಶಿಶ್ ತುಲಿ ಕೂಡ ಇರಲಿದ್ದಾರೆ ಎನ್ನಲಾಗಿದೆ.