ಕೊಚ್ಚಿ, ಅ.27: 5ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ 2027ರ ಹರಾಜು ಬುಧವಾರ(ಅ.28) ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಈ ಬಾರಿ ಹರಾಜಿಗೆ ಒಟ್ಟು 146 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಫ್ರಾಂಚೈಸಿಗಳ ಬಳಿ ಖಾಲಿ ಇರೋದು ಕೇವಲ 27 ಸ್ಲಾಟ್ಗಳು ಮಾತ್ರ. ಹೀಗಾಗಿ, ತಮಗೆ ಬೇಕಾದ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳ ನಡುವೆ ಭಾರೀ ಪೈಪೋಟಿ ನಡೆಯುವ ಸಾಧ್ಯತೆಯಿದೆ.
ಹರಾಜಿನಲ್ಲಿ ಭಾಗವಹಿಸುತ್ತಿರುವ ತಂಡಗಳ ಪೈಕಿ 'ಯುಪಿ ವಾರಿಯರ್ಜ್' (UP Warriorz) ಅತಿ ಹೆಚ್ಚು ಮೊತ್ತವನ್ನು ಉಳಿಸಿಕೊಂಡಿದೆ. ಇತ್ತ, ಸೋಫಿಯಾ ಡಂಕ್ಲಿ ಮತ್ತು ಸೋಫಿ ಮೋಲಿನೆಕ್ಸ್ ಅವರು ಅತಿ ಹೆಚ್ಚಿನ ಮೂಲ ಬೆಲೆ (base price) ಹೊಂದಿರುವ ಆಟಗಾರ್ತಿಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. WPL 2027 ಹರಾಜಿನ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿವರಗಳು ಇಲ್ಲಿವೆ.
WPL 2027 ಹರಾಜು ಯಾವಾಗ ನಡೆಯಲಿದೆ?
WPL 2027 ಆಟಗಾರರ ಹರಾಜು 2026ರ ಅಕ್ಟೋಬರ್ 28ರಂದು (ಬುಧವಾರ) ನಡೆಯಲಿದೆ.
WPL 2027 ಹರಾಜು ಎಲ್ಲಿ ನಡೆಯಲಿದೆ?
ಈ ಹರಾಜು ಕೇರಳದ ಕೊಚ್ಚಿಯಲ್ಲಿರುವ 'ಗ್ರಾಂಡ್ ಹಯಾತ್ ಕೊಚ್ಚಿ' (Grand Hyatt Kochi) ಯಲ್ಲಿ ನಡೆಯಲಿದೆ. WPL ಹರಾಜನ್ನು ಕೊಚ್ಚಿ ಆಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
WPL 2027 ಹರಾಜು ಯಾವ ಸಮಯಕ್ಕೆ ಪ್ರಾರಂಭವಾಗಲಿದೆ?
ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಹರಾಜು ಭಾರತೀಯ ಕಾಲಮಾನದ (IST) ಪ್ರಕಾರ ಸಂಜೆ 5:30ಕ್ಕೆ ಪ್ರಾರಂಭವಾಗಲಿದೆ.
ಎಷ್ಟು ಆಟಗಾರ್ತಿಯರು ನೋಂದಾಯಿಸಿಕೊಂಡಿದ್ದಾರೆ?
ಹರಾಜಿಗಾಗಿ ಒಟ್ಟು 146 ಆಟಗಾರರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಐದು ಫ್ರಾಂಚೈಸಿಗಳಲ್ಲಿ ಲಭ್ಯವಿರುವ ಒಟ್ಟು 27 ಸ್ಥಾನಗಳಿಗಾಗಿ ಇವರು ಪೈಪೋಟಿ ನಡೆಸಲಿದ್ದಾರೆ.
ಹರಾಜು ಪಟ್ಟಿಯಲ್ಲಿ ಎಷ್ಟು ಭಾರತೀಯ ಮತ್ತು ವಿದೇಶಿ ಆಟಗಾರರಿದ್ದಾರೆ?
ಈ ಹರಾಜು ಪಟ್ಟಿಯಲ್ಲಿ 119 ಭಾರತೀಯ ಆಟಗಾರ್ತಿಯರು ಮತ್ತು 27 ವಿದೇಶಿ ಆಟಗಾರ್ತಿಯರಿದ್ದಾರೆ. 119 ಭಾರತೀಯ ಆಟಗಾರರ ಪೈಕಿ, 22 ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವ ಹೊಂದಿರುವವರು (ಕ್ಯಾಪ್ಡ್) ಮತ್ತು 97 ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡದವರು (ಅನ್ಕ್ಯಾಪ್ಡ್) ಆಗಿದ್ದಾರೆ.
ಅತಿ ಹೆಚ್ಚು ಟಿ20 ವಿಕೆಟ್ ದಾಖಲೆ ಸರಿಗಟ್ಟಿದ ಅರ್ಷ್ದೀಪ್ ಸಿಂಗ್
ವಿದೇಶಿ ಆಟಗಾರರ ಗುಂಪಿನಲ್ಲಿ 14 ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದವರು ಮತ್ತು 13 ಮಂದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡದವರು ಇದ್ದಾರೆ. ಇದರಲ್ಲಿ 'ಅಸೋಸಿಯೇಟ್ ನೇಷನ್ಸ್' (Associate Nations) ದೇಶಗಳ ಆರು ಆಟಗಾರರೂ ಸೇರಿದ್ದಾರೆ. ತಂಡಗಳಲ್ಲಿ ಭಾರತೀಯ ಆಟಗಾರರಿಗಾಗಿ 20 ಸ್ಥಾನಗಳು ಮತ್ತು ವಿದೇಶಿ ಆಟಗಾರರಿಗಾಗಿ 7 ಸ್ಥಾನಗಳು ಲಭ್ಯವಿವೆ.
50 ಲಕ್ಷ ಮೂಲಬೆಲೆ: 2 ಆಟಗಾರ್ತಿಯರು (ಸೋಫಿಯಾ ಡಂಕ್ಲಿ ಮತ್ತು ಸೋಫಿ ಮೊಲಿನೆಕ್ಸ್)
40 ಲಕ್ಷ ಮೂಲಬೆಲೆ: 4 ಆಟಗಾರ್ತಿಯರು (ಜಿ. ಕಮಲಿನಿ, ಕಿರಣ್ ನವ್ಗಿರೆ, ಹೆದರ್ ಗ್ರಹಾಂ ಮತ್ತು ಜೆಸ್ ಜೊನಾಸೆನ್)
30 ಲಕ್ಷ ಮೂಲಬೆಲೆ: 30 ಆಟಗಾರ್ತಿಯರು
10 ಲಕ್ಷ ಮೂಲಬೆಲೆ: 106 ಆಟಗಾರ್ತಿಯರು
ಯಾವ ತಂಡದ ಬಳಿ ಎಷ್ಟು ಹಣ?
ಯುಪಿ ವಾರಿಯರ್ಸ್- 3.75 ಕೋಟಿ
ಗುಜರಾತ್ ಜೈಂಟ್ಸ್-1.25 ಕೋಟಿ 3
ರಾಯಲ್ ಚಾಲೆಂಜರ್ಸ್ ಬೆಂಗಳೂರು-1.15 ಕೋಟಿ
ದೆಹಲಿ ಕ್ಯಾಪಿಟಲ್ಸ್- 1.10 ಕೋಟಿ
ಮುಂಬೈ ಇಂಡಿಯನ್ಸ್- 90 ಲಕ್ಷ