ಮೊಹಾಲಿ, ಡಿ.12: ಅಭಿಮಾನಿಗಳ ಪ್ರೀತಿಯ ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್(Yuvraj Singh) ಅವರಿಗೆ ಇಂದು ಜನ್ಮದಿನದ(Yuvraj Singh Birthday) ಸಂಭ್ರಮ. ವಿಶ್ವ ಕ್ರಿಕೆಟ್ ಕಂಡ ಪ್ರಮುಖ ಆಲ್ರೌಂಡರ್‌ಗಳಲ್ಲಿ ಒಬ್ಬರೆನಿಸಿರುವ ಯುವಿ, ಭಾರತಕ್ಕೆ ಹಲವು ಸ್ಮರಣೀಯ ಗೆಲುವುಗಳನ್ನು ಗಳಿಸಿಕೊಟ್ಟಿದ್ದಾರೆ. ಐಸಿಸಿ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡದಲ್ಲಿದ್ದ ಏಕೈಕ ಭಾರತೀಯ ಎಂಬ ಶ್ರೇಯ ಹೊಂದಿರುವ ಅವರುಇದೀಗ 44 ವಸಂತಕ್ಕೆ ಕಾಲಿಟ್ಟಿದ್ದಾರೆ.
ತಂಡದ ಗೆಲುವಿಗಾಗಿ ಕೊನೆವರೆಗೂ ಹೋರಾಟ ನಡೆಸುತ್ತಿದ್ದ ಕೆಚ್ಚೆದೆಯ ಆಟಗಾರನಿಗೆ ಸಾವಿರಾರು ಅಭಿಮಾನಿಗಳು, ಬಿಸಿಸಿಐ, ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ವಿರಾಟ್ ಕೊಹ್ಲಿ ಸೇರಿ ಹಲವು ಆಟಗಾರರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಕೋರಿದ್ದಾರೆ.
ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಮಾತ್ರವಲ್ಲ ಫೀಲ್ಡಿಂಗ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಿದ್ದ ಯುವಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲತುಂಬಿದ ಆಟಗಾರ. 2015ರ ವಿಶ್ವಕಪ್ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಯುವಿ, ಬಳಿಕ ಸ್ಥಿರ ಪ್ರದರ್ಶನ ತೋರಲು ವಿಫಲರಾಗಿದ್ದರು. 2017ರಲ್ಲಿ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. 17 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದ ಅವರು,ಭಾರತ ಪರ 40 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದು 1,900 ರನ್ ಗಳಿಸಿದ್ದಾರೆ.
ಇದನ್ನೂ ಓದಿ OTD in 2007: ಯುವರಾಜ್ ಸಿಂಗ್ 6 ಸಿಕ್ಸರ್‌ಗೆ ತುಂಬಿತು 18 ವರ್ಷ
ಏಕದಿನ ಕ್ರಿಕೆಟ್‌ನಲ್ಲಿ 304 ಪಂದ್ಯಗಳಿಂದ (278 ಇನಿಂಗ್ಸ್) 8,701 ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 58 ಪಂದ್ಯಗಳ 51 ಇನಿಂಗ್ಸ್‌ಗಳಿಂದ 1,117 ರನ್ ಬಾರಿಸಿದ್ದಾರೆ. ಈ ಮೂರೂ ಮಾದರಿಯಲ್ಲಿ ಕ್ರಮವಾಗಿ 9 ವಿಕೆಟ್, 111 ವಿಕೆಟ್ ಮತ್ತು 28 ವಿಕೆಟ್ ಉರುಳಿಸಿದ್ದಾರೆ.
ಸತತ ಆರು ಸಿಕ್ಸರ್
ಯುವರಾಜ್ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಅವರ ಆರು ಸಿಕ್ಸರ್‌ಗಳು. ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಈ ಸಾಧನೆ ಮಾಡಿದ್ದರು. ವೇಗಿ ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್‌ನಲ್ಲಿ36 ರನ್ ದೋಚಿದ್ದರು. ಮಾತ್ರವಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದರು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ವೇಗದ 2ನೇ ಅರ್ಧಶತಕಎನಿಸಿದೆ.
ಯುವರಾಜ್ ಸಿಂಗ್‌ಗೆ ಪ್ರಮುಖ ದಾಖಲೆಗಳು
2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅದ್ಭುತ ಆಲ್‌ರೌಂಡರ್ ಪ್ರದರ್ಶನವನ್ನು ತೋರಿದ್ದರು. ಅವರು 362 ರನ್‌ಗಳು ಹಾಗೂ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ನಾಲ್ಕು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಸ್ವೀಕರಿಸಿದ್ದರು. 2011ರ ಏಕದಿನ ವಿಶ್ವಕಪ್ ಟೂರ್ನಿಯ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಐದು ವಿಕೆಟ್ ಸಾಧನೆಯ ಜೊತೆಗೆ ಅರ್ಧಶತಕವನ್ನು ಸಿಡಿಸಿದ್ದರು. ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ಯುವಿ ಹೆಸರಿನಲ್ಲಿದೆ.
2000ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಯುವರಾಜ್ ಸಿಂಗ್ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಯುವಿ ಹೆಸರಿನಲ್ಲಿದೆ.