ಹೈದರಾಬಾದ್, ಮೇ 8: ಹಾಲಿ ಆವೃತ್ತಿಯ ಐಪಿಎಲ್(IPL 2026) ಟೂರ್ನಿಯಲ್ಲಿ ವಿವಾದಗಳೇ ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಡ್ರೆಸಿಂಗ್ ಕೋಣೆಯಲ್ಲಿ ಇ ಸಿಗರೇಟ್ ಬಳಸಿ ಧೂಮಪಾನ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಪಂದ್ಯದ ಸಂಭಾವನೆಯ ಶೇ 25ರಷ್ಟು ದಂಡದ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಮತ್ತೊಂದು ಇ ಸಿಗರೇಟ್ ಪ್ರಕರಣ ಬೆಳಕಿಗೆ ಬಂದಿದೆ. ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್(Yuzvendra Chahal) ತಂಡದ ವಿಮಾನದಲ್ಲಿ ಇ-ಸಿಗರೇಟ್ ಸೇದುತ್ತಿರುವ ವಿಡಿಯೊ ವೈರಲ್ ಆಗಿದೆ.
ತಂಡದ ಆಟಗಾರರು ವಿಮಾನದಲ್ಲಿರುವ ವಿಡಿಯೊವನ್ನು ವೇಗಿ ಅರ್ಶ್‌ದೀಪ್ ಸಿಂಗ್ ಅವರು ರೆಕಾರ್ಡ್ ಮಾಡಿ ತಮ್ಮ ಸ್ನ್ಯಾಪ್‌ಚಾಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೇಳೆ ಚಾಹಲ್ ಅವರು ಕದ್ದುಮುಚ್ಚಿ ಇ ಸಿಗರೇಟ್ ಬಳಸಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಚಹಲ್ ವಿರುದ್ಧವೂ ಬಿಸಿಸಿಐ ತನಿಖೆಗೆ ಮುಂದಾಗುವ ಸಾಧ್ಯತೆ ಇದೆ.
2019ರಲ್ಲಿಯೇ ಭಾರತ ಸರ್ಕಾರವು ಇ–ಸಿಗರೇಟ್ ಉತ್ಪಾದನೆ, ಮಾರಾಟ ಮತ್ತು ಹಂಚಿಕೆಯನ್ನು ನಿಷೇಧಿಸಿದೆ. ಇ–ಸಿಗರೇಟ್ ಬಳಕೆ ಕಾನೂನುಬಾಹಿರವಾಗಿದೆ. ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.
ಐಪಿಎಲ್ ಆರಂಭಿಕ ಹಂತದಲ್ಲಿ ಚಹಲ್, ಕಾರು ಚಾಲನೆ ಮಾಡುವಾಗ ಧೂಮಪಾನ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಮಾತ್ರವಲ್ಲದೆ ಸಿಗರೇಟ್ ಅನ್ನು ರಸ್ತೆಯಲ್ಲಿ ಎಸೆಯುವು ವೀಡಿಯೊದಲ್ಲಿ ಸೆರೆಯಾಗಿತ್ತು.
ಐಪಿಎಲ್ ಆರಂಭಕ್ಕೂ ಮುನ್ನ ಚಾಹಲ್ ಮದ್ಯಪಾನ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಬಹಿರಂಗಪಡಿಸಿದ್ದರು. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರೊಂದಿಗಿನ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ವೇಳೆ ಚಹಲ್ ಈ ವಿಚಾರವನ್ನು ತಿಳಿಸಿದ್ದರು.
ಧೂಮಪಾನ ಮಾಡಿ ರಸ್ತೆಯಲ್ಲಿ ಸಿಗರೇಟ್ ಎಸೆದರೇ ಯುಜ್ವೇಂದ್ರ ಚಾಹಲ್?; ವಿಡಿಯೊ ವೈರಲ್
"ನಾನು ಮದ್ಯಪಾನ ನಿಲ್ಲಿಸಿ ಆರು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ನನಗೆ ಈಗ 35 ವರ್ಷ, ಆದ್ದರಿಂದ ನಾನು ಹೆಚ್ಚು ಸಕ್ರಿಯನಾಗಿ ನನ್ನ ತಂಡಕ್ಕಾಗಿ ನನ್ನ ಶೇ. 150ರಷ್ಟು ಪರಿಶ್ರಮ ನೀಡಲು ಬಯಸುತ್ತೇನೆ. ಹಿರಿಯ ಆಟಗಾರನಾಗಿ, ಐಪಿಎಲ್‌ನಲ್ಲಿರುವ ಜನರು ನನ್ನಿಂದ ಏನನ್ನಾದರೂ ಕಲಿಯಬೇಕೆಂದು ನಾನು ಬಯಸುತ್ತೇನೆ" ಎಂದು ಚಾಹಲ್ ಡಿವಿಲಿಯರ್ಸ್‌ಗೆ ತಿಳಿಸಿದ್ದರು.