Vastu Tips: ಮನೆಯ ಬಣ್ಣ ಆಯ್ಕೆಯಲ್ಲಿ ಎಚ್ಚರ! ಈ 3 ಬಣ್ಣಗಳ ಅತಿಯಾದ ಬಳಕೆ ನಕಾರಾತ್ಮಕ ಶಕ್ತಿ ಹೆಚ್ಚಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ
ಫೆಂಗ್ ಶೂಯಿ ಪ್ರಕಾರ ಮನೆಯ ಬಣ್ಣಗಳ ಆಯ್ಕೆ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಅತಿಯಾಗಿ ಬಳಸುವುದರಿಂದ ಉದ್ವಿಗ್ನತೆ, ನಿರುತ್ಸಾಹ ಹಾಗೂ ನಿರ್ಜೀವತೆಯ ಭಾವನೆ ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಬಣ್ಣಗಳ ಬಳಕೆಯಲ್ಲಿ ಸಮತೋಲನ ಕಾಪಾಡುವುದು ಮುಖ್ಯ.
ಮನೆಯ ಬಣ್ಣಗಳಿಗೆ ವಾಸ್ತು ಸಲಹೆ -
ಬೆಂಗಳೂರು: ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡಲು ಬಣ್ಣಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರತಿಯೊಂದು ಬಣ್ಣವೂ ತನ್ನದೇ ಆದ ಶಕ್ತಿ, ಭಾವನೆ ಮತ್ತು ಪ್ರಭಾವವನ್ನು ಹೊಂದಿದೆ. ಕೆಲವು ಬಣ್ಣಗಳು ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸಿದರೆ, ಕೆಲವು ಬಣ್ಣಗಳ ಅತಿಯಾದ ಬಳಕೆ ಮನೆಯಲ್ಲಿನ ಶಕ್ತಿಯ ಸಮತೋಲನವನ್ನು ಹಾಳುಮಾಡಬಹುದು ಎಂದು ಫೆಂಗ್ ಶೂಯಿ ಹೇಳುತ್ತದೆ. ಚೀನಾದ ಪ್ರಾಚೀನ ವಾಸ್ತುಶಾಸ್ತ್ರವಾದ ಫೆಂಗ್ ಶೂಯಿ ಪ್ರಕಾರ, ಬಣ್ಣಗಳ ಸರಿಯಾದ ಬಳಕೆ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ, ತಪ್ಪಾದ ಬಳಕೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
ಹಾಗಾದ್ರೆ ಬನ್ನಿ ವಾಸ್ತು ಶಾಸ್ತ್ರದ ಸಲಹೆಯಂತೆ ಯಾವ ಬಣ್ಣಗಳನ್ನು ಹೆಚ್ಚಾಗಿ ಬಳಸಬಾರದು? ಬಣ್ಣಗಳಿಗೆ ಸಂಬಂಧಿಸಿದಂತೆ ವಾಸ್ತು ಹೇಳೋದೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಕೆಂಪು ಬಣ್ಣ: ಶಕ್ತಿಯ ಸಂಕೇತ, ಆದರೆ ಮಿತಿಯಲ್ಲಿ ಮಾತ್ರ
ಕೆಂಪು ಬಣ್ಣವನ್ನು ಫೆಂಗ್ ಶೂಯಿಯಲ್ಲಿ ಅದೃಷ್ಟ, ಯಶಸ್ಸು ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವು ಉತ್ಸಾಹ ಮತ್ತು ಚೈತನ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇದೇ ಬಣ್ಣವನ್ನು ಅತಿಯಾಗಿ ಬಳಸಿದರೆ ಮನೆಯ ವಾತಾವರಣದಲ್ಲಿ ಉದ್ವಿಗ್ನತೆ, ಆತಂಕ ಮತ್ತು ಕೋಪ ಹೆಚ್ಚಾಗುವ ಸಾಧ್ಯತೆ ಇದೆ.
ವಿಶೇಷವಾಗಿ ಮಲಗುವ ಕೋಣೆ, ಮಕ್ಕಳ ಕೊಠಡಿ, ಅಡುಗೆಮನೆ ಅಥವಾ ಕಚೇರಿ ಕೋಣೆಯಲ್ಲಿ ಕೆಂಪು ಬಣ್ಣದ ಅತಿಯಾದ ಬಳಕೆ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು. ದಾಂಪತ್ಯ ಜೀವನದಲ್ಲಿಯೂ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಕಪ್ಪು ಬಣ್ಣ: ಸ್ಟೈಲಿಷ್ ಆಗಿದ್ದರೂ ಮಿತಿಯಲ್ಲಿ ಬಳಸಿದರೆ ಮಾತ್ರ ಒಳಿತು
ಕಪ್ಪು ಬಣ್ಣವನ್ನು ಹಲವರು ಆಕರ್ಷಕ, ಕ್ಲಾಸಿಕ್ ಮತ್ತು ಆಧುನಿಕತೆಯ ಸಂಕೇತವೆಂದು ಪರಿಗಣಿಸುತ್ತಾರೆ. ಆದರೆ ಫೆಂಗ್ ಶೂಯಿ ಪ್ರಕಾರ, ಕಪ್ಪು ಬಣ್ಣವು ನಿಗೂಢತೆ, ಆಳವಾದ ಚಿಂತನೆ ಮತ್ತು ಆತ್ಮಾವಲೋಕನವನ್ನು ಪ್ರತಿನಿಧಿಸುತ್ತದೆ. ಈ ಬಣ್ಣವು ಶಕ್ತಿಯುತವಾಗಿದ್ದರೂ, ಅದರ ಅತಿಯಾದ ಬಳಕೆ ಮನೆಯ ವಾತಾವರಣವನ್ನು ಭಾರವಾಗಿಸುವ ಸಾಧ್ಯತೆ ಇದೆ.
ಮನೆಯೊಳಗೆ ಕಪ್ಪು ಬಣ್ಣ ಹೆಚ್ಚಾದರೆ, ಅದು ಸ್ಥಳವನ್ನು ಕತ್ತಲೆಯುತ ಮತ್ತು ನಿಶ್ಚಲವಾಗಿರುವಂತೆ ಭಾಸವಾಗುವಂತೆ ಮಾಡಬಹುದು. ಇದರಿಂದ ಕೆಲವೊಮ್ಮೆ ನಿರುತ್ಸಾಹ, ಏಕಾಂತ ಭಾವನೆ ಮತ್ತು ನಕಾರಾತ್ಮಕ ಮನಸ್ಥಿತಿಯೂ ಉಂಟಾಗಬಹುದು ಎಂದು ಫೆಂಗ್ ಶೂಯಿ ತಜ್ಞರು ಅಭಿಪ್ರಾಯಪಡುತ್ತಾರೆ.
Vastu Tips: ನಿಮ್ಮ ಆದಾಯ ಹೆಚ್ಚಾಗಿ ಕೋಟ್ಯಾಧಿಪತಿ ಆಗಬೇಕಾ? ಹಾಗಾದ್ರೆ ಈ ವಸ್ತುವನ್ನು ಜೇಬಿನಲ್ಲಿರಿಸಿ!
ಫೆಂಗ್ ಶೂಯಿ ಪ್ರಕಾರ, ಕಪ್ಪು ಬಣ್ಣದ ಅತಿಯಾದ ಬಳಕೆ ಮನೆಯಲ್ಲಿ ಚೈತನ್ಯವನ್ನು ಕಡಿಮೆ ಮಾಡಿ, ಖಿನ್ನತೆ ಅಥವಾ ಒಂಟಿತನದ ಭಾವನೆಯನ್ನು ಹೆಚ್ಚಿಸಬಹುದು. ಆದ್ದರಿಂದ ಸಂಪೂರ್ಣ ಕಪ್ಪು ಬಣ್ಣದ ಗೋಡೆಗಳ ಬದಲಿಗೆ ಕಂದು, ಚಾಕೊಲೇಟ್ ಅಥವಾ ಇತರ ಮೃದುವಾದ ಗಾಢ ಬಣ್ಣಗಳನ್ನು ಆಯ್ಕೆ ಮಾಡುವುದು ಉತ್ತಮ.
ಬಿಳಿ ಬಣ್ಣ: ಶುದ್ಧತೆಯ ಸಂಕೇತ, ಆದರೆ ಅತಿಯಾದರೆ ನಿರ್ಜೀವತೆ
ಬಿಳಿ ಬಣ್ಣವು ಸ್ವಚ್ಛತೆ, ಶುದ್ಧತೆ ಮತ್ತು ಸರಳತೆಯ ಪ್ರತೀಕವಾಗಿದೆ. ಆದರೆ ಫೆಂಗ್ ಶೂಯಿ ಪ್ರಕಾರ, ಬಿಳಿ ಬಣ್ಣವನ್ನು ಅತಿಯಾಗಿ ಬಳಸಿದರೆ ಮನೆಯ ವಾತಾವರಣವು ತಂಪಾಗಿ, ನಿರ್ಜೀವವಾಗಿ ಮತ್ತು ಖಾಲಿಯಾಗಿರುವಂತೆ ಭಾಸವಾಗಬಹುದು. ಬಾತ್ರೂಮ್ ಮತ್ತು ಅಡುಗೆಮನೆಗಳಲ್ಲಿ ಬಿಳಿ ಬಣ್ಣವನ್ನು ಬಳಸುವುದು ಸೂಕ್ತ. ಆದರೆ ಮಕ್ಕಳ ಕೊಠಡಿ ಅಥವಾ ಊಟದ ಕೋಣೆಯಲ್ಲಿ ಅತಿಯಾದ ಬಿಳಿ ಬಣ್ಣ ಬಳಸುವುದರಿಂದ ಉತ್ಸಾಹ ಮತ್ತು ಚೈತನ್ಯ ಕಡಿಮೆಯಾಗಬಹುದು ಎನ್ನಲಾಗುತ್ತದೆ.
ಬಣ್ಣಗಳ ಆಯ್ಕೆಯಲ್ಲಿ ಸಮತೋಲನವೇ ಮುಖ್ಯ
ಫೆಂಗ್ ಶೂಯಿ ಪ್ರಕಾರ ಯಾವುದೇ ಬಣ್ಣ ಸಂಪೂರ್ಣವಾಗಿ ಶುಭ ಅಥವಾ ಅಶುಭವಲ್ಲ. ಅದರ ಬಳಕೆಯ ಪ್ರಮಾಣ ಮತ್ತು ಸ್ಥಳವೇ ಮುಖ್ಯ. ಸರಿಯಾದ ಬಣ್ಣಗಳನ್ನು ಸಮತೋಲನದಿಂದ ಬಳಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಸಂತೋಷ ಮತ್ತು ಸಾಮರಸ್ಯ ಹೆಚ್ಚುತ್ತದೆ. ಆದ್ದರಿಂದ ಮನೆಯ ಅಲಂಕಾರ ಮಾಡುವಾಗ ಕೇವಲ ಸೌಂದರ್ಯವಷ್ಟೇ ಅಲ್ಲ, ಬಣ್ಣಗಳ ಶಕ್ತಿಯನ್ನೂ ಪರಿಗಣಿಸುವುದು ಉತ್ತಮ.